- 1948ರಲ್ಲಿ ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ವಿಸರ್ಜನೆಗೆ ಸಲಹೆ ನೀಡಿದ್ದರು.
- ದಲಿತ ಸಮುದಾಯದ ಸಮಸ್ಯೆಗಳ ಕುರಿತು ಸರ್ಕಾರ ಹಾಗೂ ಸಚಿವರ ವಿರುದ್ಧ ವಾಗ್ದಾಳಿ
ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಲೋಕ ಸೇವಕ ಸಂಘವಾಗಿ ಪರಿವರ್ತಿಸಬೇಕೆಂದು ಸಲಹೆ ನೀಡಿದ್ದರು. ಈ ಕುರಿತು ಕಾಂಗ್ರೆಸ್ ನಾಯಕರು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ,
1948ರಲ್ಲಿ ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ವಿಸರ್ಜನೆಗೆ ಸಲಹೆ ನೀಡಿದ್ದರು. ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಗಾಂಧೀಜಿಯವರ ಆಶಯದಂತೆ ಕಾಂಗ್ರೆಸ್ ವಿಸರ್ಜನೆ ಬಗ್ಗೆ ನೀವು ಯಾಕೆ ಪತ್ರ ಬರೆದಿಲ್ಲ? ಎಂದು ಪ್ರೀಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳಿಗೆ ಮೋಹನ್ ಭಾಗವತ್ ಅವರು, ಈಗಾಗಲೇ ಉತ್ತರ ನೀಡಿದ್ದಾರೆ ಎಂದು ಹೇಳಿದ ಅವರು, ದೇಶದಲ್ಲಿ ಕಾನೂನು ಒಂದೇ ಎನ್ನುವ ನೀವು, ಕಾನೂನಿನ ಮೊರೆ ಯಾಕೆ ಹೋಗಿಲ್ಲ? ಎಂದು ತರಾಟೆಗೆ ತೆಗೆದುಕೊಂಡರು.
ದಲಿತರ ಸಮಸ್ಯೆಗಳ ಬಗ್ಗೆ ಗಮನಹರಿಸಿ
ದಲಿತ ಸಮುದಾಯದ ಸಮಸ್ಯೆಗಳ ಕುರಿತು ಸರ್ಕಾರ ಹಾಗೂ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಛಲವಾದಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದನ್ನು ಪ್ರಶ್ನಿಸಿದರು.
ದಲಿತರಿಗೆ ಮೀಸಲಾಗಿರುವ ಹಣ ಅವರ ಅಭಿವೃದ್ಧಿಗೆ ತಲುಪುತ್ತಿಲ್ಲ. ಅದರ ಬಗ್ಗೆ ನೀವು ಧ್ವನಿ ಎತ್ತಿಲ್ಲ. ಮೀಸಲಾತಿ ಗೊಂದಲ, ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವುದು, ದಲಿತರ ಮೇಲಿನ ದೌರ್ಜನ್ಯಗಳಂತಹ ಗಂಭೀರ ವಿಚಾರಗಳ ಬಗ್ಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಆರ್‌ಎಸ್‌ಎಸ್‌ನಿಂದ ಯಾವ ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿ? ದಲಿತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಬದಲು ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ತಳ ಸಮುದಾಯಗಳ ಪರ ಹೋರಾಟ ನಡೆಸಬೇಕಾದವರು ಮೂಲಭೂತ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಟೀಕಿಸಿದ ಅವರು, ದಲಿತರ ಅಭಿವೃದ್ಧಿಗೆ ಕೆಲಸ ಮಾಡಿದರೆ ನಾವು ಮೆಚ್ಚುತ್ತೇವೆ. ಆದರೆ ಅನಗತ್ಯ ವಿವಾದಗಳನ್ನು ಸೃಷ್ಟಿಸುವುದರಿಂದ ಸಮಾಜಕ್ಕೆ ಪ್ರಯೋಜನವಿಲ್ಲ ಎಂದು ಹೇಳಿದರು.
ಇದೇ ವೇಳೆ, ತಾವು ಆರ್‌ಎಸ್‌ಎಸ್‌ನ ವಕ್ತಾರರಲ್ಲ ಎಂದು ಸ್ಪಷ್ಟಪಡಿಸಿದ ಛಲವಾದಿ ನಾರಾಯಣಸ್ವಾಮಿ, ನನಗೆ ಅದರ ಪರವಾಗಿ ಮಾತನಾಡುವ ಅಧಿಕಾರ ಇಲ್ಲ. ಆದರೆ ಸಮಾಜದ ವಾಸ್ತವ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
*1948ರಲ್ಲಿ ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ವಿಸರ್ಜನೆಗೆ ಸಲಹೆ ನೀಡಿದ್ದರು. ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಗಾಂಧೀಜಿಯವರ ಆಶಯದಂತೆ ಕಾಂಗ್ರೆಸ್ ವಿಸರ್ಜನೆ ಬಗ್ಗೆ ನೀವು ಯಾಕೆ ಪತ್ರ ಬರೆದಿಲ್ಲ?
-ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ