- ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ವಿಷಾದ
- ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ತಪ್ಪೇ..!
ಮಂತ್ರಿ ಸ್ಥಾನದಿಂದ ಯಾಕೆ ನನ್ನ ಹೆಸರು ಕೈಬಿಟ್ಟರು ಎನ್ನುವುದೇ ನನಗೆ ಗೊತ್ತಿಲ್ಲ. ಹೈದರಾಬಾದ್ ಹಾಗೂ ಬಾಂಬೆ ಕರ್ನಾಟಕದಲ್ಲಿಯೂ ನಾನು ಪ್ರಭಾವಿಯಾಗಿದ್ದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಬಂಗಾರಪ್ಪನವರು ನನಗೆ ಸಚಿವ ಸ್ಥಾನ ನೀಡಿದ್ದರು. ಆದರೆ ಈಗ ಯಾಕೆ ಮಂತ್ರಿ ಸ್ಥಾನದಿಂದ ನನ್ನನ್ನು ಕೈಬಿಟ್ಟರು? ಎಂಬುದು ತಿಳಿಯುತ್ತಿಲ್ಲ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸಂಗನಬಸಮ್ಮ ಮದರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಮುಖಂಡರ ಕೃತಜ್ಞತಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಣ್ಣವನಾಗಿದ್ದಾಗಲೇ ಪಕ್ಷವು ನ್ಯಾಮಗೌಡರ ಚುನಾವಣೆಯಲ್ಲಿ ಉಸ್ತುವಾರಿ ನೀಡಿತ್ತು. ಬಳ್ಳಾರಿ ಬೈ ಎಲೆಕ್ಷನ್, ಹಾವೇರಿ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿ-ಫಾರಂ ನೀಡುವ ಜವಾಬ್ದಾರಿಯನ್ನೂ ನನಗೆ ವಹಿಸಲಾಗಿತ್ತು. ಈ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷದ ನೀತಿ-ನಿಲುವಿನಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ನನ್ನ ಕ್ಷೇತ್ರದ ದೇಶಮುಖ ಅವರು ನನ್ನ ಆರಂಭಿಕ ರಾಜಕೀಯ ದಿನಗಳಲ್ಲಿ ಜೆಡಿಎಸ್‌ನಲ್ಲಿ ನನಗೆ ಒಂದು ಹುದ್ದೆ ನೀಡಿದ್ದರು. ಅದೇ ರೀತಿ ಬಿ.ಎಂ. ಪಾಟೀಲರೂ ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಆದರೆ ಎಂ.ಬಿ. ಪಾಟೀಲರಿಗೆ ನನ್ನ ಮೇಲೆ ಯಾಕಿಷ್ಟು ಕಣ್ಣು? ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಜಾಪುರ ಜಿಲ್ಲೆಯ ಉಸ್ತಾದ್, ಸಾಸನೂರು ಪಾಟೀಲ, ಪ್ರಕಾಶ ರಾಠೋಡ್ ಸೇರಿ ನನ್ನ ಬಗ್ಗೆ ಹಾಗೂ ನಾವು ಮಾಡಿದ ಕಾರ್ಯಗಳ ಬಗ್ಗೆ ಯಾವುದೇ ರೀತಿಯಲ್ಲಿ ನೆನಪಿಸಿಕೊಳ್ಳದಿರುವುದು ಯಾಕೆ ಎನ್ನುವುದು ನನಗೂ ತಿಳಿದಿಲ್ಲ ಎಂದರು.
ಜಿಲ್ಲೆಯಲ್ಲಿ ಹಾಲುಮತ ಸಮಾಜದ ವ್ಯಕ್ತಿಯೊಬ್ಬರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಲು ಸಾಕಷ್ಟು ಸರ್ಕಸ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಲು ಎಂ.ಬಿ. ಪಾಟೀಲರು ಪ್ರಮುಖ ಪಾತ್ರ ವಹಿಸಿದ್ದರು ಎಂದು ನಾಡಗೌಡ ಆರೋಪಿಸಿದರು.
ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಜಗಳ ಹಚ್ಚಲು ಹೈಕಮಾಂಡ್ ಎಂ.ಬಿ. ಪಾಟೀಲರಿಗೆ ಸೂಚನೆ ನೀಡಿದೆಯೇ? ಯಶವಂತರಾಯಗೌಡ, ಶಿವಾನಂದ ಪಾಟೀಲ ಹಾಗೂ ಅಪ್ಪಾಜಿ ನಾಡಗೌಡ ಅವರ ನಡುವೆ ಇಲ್ಲಸಲ್ಲದ ಮಾತುಗಳನ್ನು ಪರದೆಯ ಹಿಂದೆ ಆಡಿಸಿ, ಯಾರೊಬ್ಬರೂ ರಾಜಕೀಯವಾಗಿ ಏಳಿಗೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಪಕ್ಷವೇ ಸೂಚಿಸಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಾಡಗೌಡ ಪ್ರತಿಕ್ರಿಯಿಸಿದರು.
ಅವರ ತಂದೆಯ ಕಾಲದಿಂದಲೂ ನಾನು ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಅವರಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ ಪಕ್ಷದಲ್ಲಿ ಹೋರಾಡಿದ್ದೇನೆ ಎಂಬುದು ಅವರಿಗೆ ತಿಳಿದಿರಬೇಕು. ಅಲ್ಲದೆ ಅವರ ಸಹೋದರ ಸುನೀಲಗೌಡ ಅವರನ್ನು ಎಂಎಲ್‌ಸಿ ಮಾಡುವಲ್ಲಿಯೂ ನಾವು ಸಹಕಾರ ನೀಡಿದ್ದೇವೆ. ಈ ವಿಚಾರವೂ ಅವರಿಗೆ ತಿಳಿದಿಲ್ಲ ಎಂದರೆ ನಾನು ಏನು ಹೇಳಬೇಕು? ಎಂದು ಅಪ್ಪಾಜಿ ನಾಡಗೌಡ ಪ್ರಶ್ನಿಸಿದರು. ಪ್ರಸ್ತುತ ಚುನಾವಣೆಯನ್ನು ಹೊರತುಪಡಿಸಿ, ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿಯವರಿಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುವ ಮೂಲಕ ನನ್ನನ್ನು ಸೋಲಿಸಲು ಅವರು ಷಡ್ಯಂತ್ರ ನಡೆಸಿದ್ದಾರೆ. ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಈ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ನನ್ನ ಮುಂದೆ ಯಾರೂ ರಾಜಕೀಯವಾಗಿ ಬೆಳೆಯಬಾರದು ಎಂಬ ಉದ್ದೇಶದಿಂದ ಅಂತಹ ಷಡ್ಯಂತ್ರ ನಡೆಸಲಾಗುತ್ತಿದೆಯೇ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಸದ್ಯ ನಾವು ಸುಮ್ಮನೆ ಕುಳಿತುಕೊಳ್ಳಲು ತಯಾರಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಅಪ್ಪಾಜಿ ಹೇಳಿದರು.