ದತ್ತೂರಿ ಹಣ್ಣು 
ರಾಜ್ಯ

ಏನಿದು ದತ್ತೂರಿ ಹಣ್ಣು? ಅಷ್ಟಕ್ಕೂ ಇದನ್ನೇಕೆ ಜನರಿಗೆ ಮಾರಾಟ ಮಾಡುವಂತಿಲ್ಲ? ಈ ಪ್ರಶ್ನೆಗೆ ಇಲ್ಲಿದೆ ಅಚ್ಚರಿ ಉತ್ತರ | Datura Fruit

ಮೋಹನ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಇ-ಕಾಮರ್ಸ್ (ಆನ್​ಲೈನ್​) ಕಂಪನಿಗಳಿಗೆ ಆಹಾರ ಇಲಾಖೆ ನೋಟಿಸ್​
  • ಸೇವನೆಗೆ ಯೋಗ್ಯವಲ್ಲದ ಹಾಗೂ ವಿಷಕಾರಿ ಎನ್ನಲಾದ ದತ್ತೂರಿ ಹಣ್ಣು, ಬೀಜ
  • ಮೂರೂ ಸಂಸ್ಥೆಗಳ ಆಹಾರ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ ಇಲಾಖೆ
  • ಅಷ್ಟಕ್ಕೂ ಏನಿದು ದತ್ತೂರಿ ಹಣ್ಣು?
ಬೆಂಗಳೂರು: ಇ-ಕಾಮರ್ಸ್ (ಆನ್​ಲೈನ್​) ಕಂಪನಿಗಳಾದ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ಗೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಇದೀಗ ಸೇವನೆಗೆ ಯೋಗ್ಯವಲ್ಲದ ಹಾಗೂ ವಿಷಕಾರಿ ಎನ್ನಲಾದ ದತ್ತೂರಿ ಹಣ್ಣು (Datura) ಅಥವಾ ಬೀಜಗಳನ್ನು ಜನರಿಗೆ ಮಾರಾಟ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅದನ್ನು ಆಹಾರದ ವಸ್ತುವಾಗಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮೂರೂ ಸಂಸ್ಥೆಗಳ ಆಹಾರ ಪರವಾನಗಿಯನ್ನು ಇಲಾಖೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಈ ವಿಚಾರ ಹೊರಬೀಳುತ್ತಿದ್ದಂತೆ ಹಲವರಿಗೆ ಇಲ್ಲಿಯವರೆಗೆ ದತ್ತೂರಿ ಎಂಬ ಒಂದು ಹಣ್ಣಿದೆ ಎಂಬ ವಿಚಾರವೇ ಗೊತ್ತಿರಲಿಲ್ಲ. ಆದರೀಗ, ಇದರ ಮಾರಾಟವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆ ಈ ಹಣ್ಣು ಯಾವುದು? ಇದರ ಬೀಜವನ್ನೂ ಏಕೆ ಇ-ಕಾಮರ್ಸ್​ ಪ್ಲಾಟ್​ಫಾರ್ಮ್​ಗಳು ಮಾರುವಂತಿಲ್ಲ? ಇದನ್ನು ಸೇವಿಸಿದರೆ ಅಂತದ್ದು ಏನಾಗುತ್ತೆ? ಎಂಬ ಹತ್ತು ಹಲವು ಪ್ರಶ್ನೆಗಳು ಜನರಲ್ಲಿ ಕಾಡತೊಡಗಿವೆ. ಒಂದಷ್ಟು ಭಾರಿ ಗೊಂದಲಗಳಿಗೂ ಕಾರಣವಾಗಿದೆ.
ಅಸಲಿಗೆ ಇದು 'ದತ್ತೂರಿ' ಗಿಡ. ಇದರಲ್ಲಿ ಬಿಡುವ ಹಣ್ಣು ಅಥವಾ ಇದರ ಬೀಜಗಳನ್ನು ಹಲವೆಡೆ ಮಾರಾಟ ಮಾಡಲಾಗುತ್ತದೆ. ಈ ಗಿಡ ಮೆಕ್ಸಿಕೊದಲ್ಲಿ ಕಂಡುಬರುವ ಗಸಗಸೆ ಜಾತಿಯ ಒಂದು ಸಸ್ಯವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಇದನ್ನು ನೈಸರ್ಗಿಕವಾಗಿ ಬೆಳೆಯುತ್ತಾರೆ. ಇದೊಂದು ಅತ್ಯಂತ ಗಟ್ಟಿ ಸಸಿ ಎನ್ನಲಾಗಿದೆ. ಕಡಿಮೆ ತೇವಾಂಶ ಪ್ರದೇಶದಲ್ಲಿಯೂ ಬೆಳೆಯುವ ಈ ಗಿಡವನ್ನು ಪಶ್ಚಿಮ ಅಮೇರಿಕಾದ ಸ್ಥಳೀಯರು ಮತ್ತು ಮೆಕ್ಸಿಕೊದ ಕೆಲವು ಭಾಗಗಳು ಸೇರಿದಂತೆ ಅನೇಕ ಜನರು ಔಷಧೀಯ ರೂಪದಲ್ಲಿ ಬಳಸುತ್ತಾರೆ ಎಂಬುದು ಗಮನಾರ್ಹ.

ಜೀವಕ್ಕೆ ಅಪಾಯ ಹೇಗೆ?

ದತ್ತೂರಿಯಲ್ಲಿ ಅಪಾಯಕಾರಿ ಟ್ರಾಪೇನ್ ಆಲ್ಕಲಾಯ್ಡ್‌ಗಳು (Tropane Alkaloids), ಸ್ಕೊಪೊಲಮೈನ್ (Scopolamine), ಹಯೋಸೈಮೈನ್ (Hyoscyamine) ಮತ್ತು ಅಟ್ರೊಪಿನ್ (Atropine) ನಂತಹ ವಿಷಕಾರಿ ರಾಸಾಯನಿಕಗಳು ಅಡಗಿವೆ. ಇವುಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೂ ಮಾನವನ ನರಮಂಡಲದ (Central Nervous System) ಮೇಲೆ ತೀವ್ರ ಪರಿಣಾಮ ಬೀರುತ್ತದೆ. ದತ್ತೂರಿಯ ಬೀಜ ಅಥವಾ ಹಣ್ಣನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಪಾರ್ಶ್ವವಾಯು (Paralysis), ಕೋಮಾ ಅಥವಾ ಶ್ವಾಸಕೋಶದ ವೈಫಲ್ಯ ಉಂಟಾಗಿ ಪ್ರಾಣವೇ ಹೋಗುವ ಭಾರಿ ಅಪಾಯವಿದೆ ಎನ್ನಲಾಗಿದೆ. ಈ ಕಾರಣಗಳಿಂದ, ಇದನ್ನು ಸೇವನೆಗೆ ಯೋಗ್ಯವಲ್ಲ ಎಂದು ಗುರುತಿಸಲಾಗಿದ್ದು, ಆಹಾರ ವಸ್ತುವಾಗಿ ಮಾರಾಟ ಮಾಡುವುದನ್ನು ಆಹಾರ ಮತ್ತು ಆರೋಗ್ಯ ಇಲಾಖೆಗಳು ಕಟ್ಟುನಿಟ್ಟಾಗಿ ನಿಷೇಧಿಸಿದೆ,(ಏಜೆನ್ಸೀಸ್).

ನಿಮ್ಮ ಗಮನಕ್ಕೆ: ಮೇಲ್ಕಂಡ ಒಂದಷ್ಟು ವಿಷಯಗಳು ಸಂಗ್ರಹಿಸಿದ ಮಾಹಿತಿಗಳಾಗಿವೆ. ದತ್ತೂರಿ ಹಣ್ಣಿನಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತಾಗಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸುವುದು ಅಥವಾ ಅವರಿಂದ ಸಲಹೆಗಳನ್ನು ಪಡೆಯುವುದು ಉತ್ತಮ.