ಮಸೂತಿ ಗ್ರಾಮದಲ್ಲಿ ವಿಪರೀತ ಗಾಳಿ-ಮಳೆಗೆ ನೆಲಸಮಗೊಂಡ ವಿದ್ಯುತ್ ಪರಿವರ್ತಕ. 
ರಾಜ್ಯ

ತೋಟವಾಸಿಗಳ ಗೋಳು ಕೇಳೋರ‌್ಯಾರು..!

ಪ್ರಮುಖ ಮುಖ್ಯಾಂಶಗಳು

  • ಭಾರಿ ಗಾಳಿ-ಮಳೆಗೆ ನೆಲಸಮಗೊಂಡ ಟಿಸಿ-ಕಂಬಗಳು
  • ದುರಸ್ತಿ ನಿರತ ಹೆಸ್ಕಾಂ ಸಿಬ್ಬಂದಿ
ಗೊಳಸಂಗಿ: ಕೊಲ್ಹಾರ ತಾಲೂಕಿನಲ್ಲಿ ಭಾರಿ ಗಾಳಿ-ಮಳೆಗೆ ವಿದ್ಯುತ್ ಪರಿವರ್ತಕಗಳು, ಕಂಬಗಳು ಸಾಮೂಹಿಕವಾಗಿ ನೆಲಸಮಗೊಂಡ ಪರಿಣಾಮ ಗ್ರಾಮೀಣ ಪ್ರದೇಶದ ಜನರ ಗೋಳು ಹೇಳತೀರದಾಗಿದೆ.
ಭೀಕರ ಗಾಳಿಗೆ ಅಂದಾಜು 10-15 ವಿದ್ಯುತ್ ಕಂಬಗಳು, 4-5 ಟಿಸಿಗಳು ಬಿದ್ದಿರುವ ಘಟನೆ ವರದಿಯಾಗಿದ್ದರೆ, ಎರಡು ದಿನದ ಹಿಂದೆ ಮತ್ತೆ ಅದು ಪುನರಾವರ್ತನೆಯಾಗಿ 30-35 ವಿದ್ಯುತ್ ಕಂಬ, 6-7 ಟಿಸಿಗಳು ಬಿದ್ದು ಇಡೀ ಮಸೂತಿ ಗ್ರಾಮ ಅಕ್ಷರಶಃ ಕತ್ತಲೆ ಕೂಪದಲ್ಲಿ ನಲುಗಿ ಹೋಗಿತ್ತು.
ಹೆಸ್ಕಾಂ ಸಿಬ್ಬಂದಿ ನಿರಂತರ ಪ್ರಯತ್ನದಿಂದಾಗಿ ಗ್ರಾಮ ಪ್ರದೇಶದಲ್ಲಿ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿದ್ದರೂ, ಹೊರ ವಲಯದ ತೋಟದ ನಿವಾಸಿಗರ ಗೋಳು ಹೇಳ ತೀರದಾಗಿದೆ.
ಬೆಳೆದು ನಿಂತ ಕಬ್ಬು, ಬಾಳೆ ಬೆಳೆಗಳಿಗೆ ನೀರು ಹಾಯಿಸುವುದು ಒಂದು ಚಿಂತೆಯಾದರೆ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಹೊಂದಿಸುವುದು ಕಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
"

ಮಸೂತಿ ಗ್ರಾಮದಲ್ಲಿ ಕಳೆದ ವಾರದಿಂದ ಆಗಾಗ ಬೀಸುತ್ತಿರುವ ಮಳೆಗಾಳಿಯಿಂದಾಗಿ ತೋಟದ ವಸತಿ ಜನ-ಜಾನುವಾರುಗಳ ಗೋಳು ಹೇಳತೀರದಂತಾಗಿದೆ. ತೋಟದ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ತಬ್ಧಗೊಂಡ ಪರಿಣಾಮ ಕೃಷಿ ಚಟುವಟಿಕೆಗಳು ನಿಂತ ನೀರಿನಂತಾಗಿದೆ.

ಆನಂದ ಬಿಸ್ಟಗೊಂಡ, ಮಸೂತಿ ಗ್ರಾಮದ ರೈತ.

ಕೂಡಗಿ ಶಾಖಾ ಕಚೇರಿ ವ್ಯಾಪ್ತಿಯ ಮಲಘಾಣ, ಮಸೂತಿ, ತಳೇವಾಡ, ಕಲಗುರ್ಕಿ, ಮುಳವಾಡ ಸೇರಿ 72ರಿಂದ 100 ವಿದ್ಯುತ್ ಕಂಬಗಳು, ಹಲವಾರು ಟಿಸಿಗಳು ಬಿದ್ದಿವೆ. ನಮ್ಮ ಸಿಬ್ಬಂದಿ ಅವಿರತ ಶ್ರಮದಿಂದಾಗಿ ನಿರಂತರ ದುರಸ್ತಿ ಕಾರ್ಯ ಮುಂದುವರಿದಿದೆ. ಆದಷ್ಟು ಬೇಗ ಎಲ್ಲ ಸಮಸ್ಯೆ ಪರಿಹರಿಸಲಾಗುವುದು.

ಝಡ್.ಎಂ. ರಿಸಲ್ದಾರ್, ಶಾಖಾಧಿಕಾರಿ ಕೂಡಗಿ.