ಬೆಂಗಳೂರಿನಲ್ಲಿ ಗುರುವಾರ ಸಿಎಂ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಶುಭ ಕೋರಿದರು.
- ದರ್ಶನಾಪುರ-ತುನ್ನೂರ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಪಕ್ಕಾ
- ಗಿರಿ ಜಿಲ್ಲೆ ರಾಜಕೀಯದಲ್ಲಿ ಚರ್ಚೆ ಜೋರು
ಯಾದಗಿರಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದರೊಂದಿಗೆ ಸಂಪುಟ ವಿಸರ್ಜನೆಯಾಗಿ ಹಾಲಿ ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳುವುದು ಒಂದೆಡೆಯಾದರೆ, ನೆಕ್ಸ್ಟ ಸಿಎಂ ಪಟ್ಟ ಅಲಂಕರಿಸಲಿರುವ ಡಿ.ಕೆ. ಶಿವಕುಮಾರ್ ಕ್ಯಾಬಿನೆಟ್ನಲ್ಲಿ ಗಿರಿ ಜಿಲ್ಲೆಯಿಂದ ಯಾರಿಗೆ ಮಂತ್ರಿ ಭಾಗ್ಯ ಎಂಬ ಚರ್ಚೆ ಶುರುವಾಗಿದೆ.
ಶಹಾಪುರ ಶಾಸಕರಾದ ಹಾಲಿ ಸಚಿವ ಶರಣಬಸಪ್ಪ ದರ್ಶನಾಪುರ ಅವರೇ ಮುಂದುವರಿಯಬಹುದೇ? ಇಲ್ವೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅವರಿಗೆ ಅವಕಾಶ ಸಿಗಬಹುದೇ ಎಂಬ ಲೆಕ್ಕಾಚಾರ ನಡೆದಿದೆ. ದರ್ಶನಾಪುರ ಮೂರು ವರ್ಷ ಸಣ್ಣ ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದರು. ಸಿಎಂ ಬದಲಾವಣೆ ವಿಷಯ ಮುನ್ನೆಲೆಗೆ ಬಂದಾಗೊಮ್ಮೆ ಸಿದ್ದರಾಮಯ್ಯ ಪರವೇ ಜಾಸ್ತಿ ಬ್ಯಾಟ್ ಬೀಸಿದ್ದರಿಂದ ಹೊಸ ಕ್ಯಾಬಿನೆಟ್ನಲ್ಲಿ ಮಂತ್ರಿಗಿರಿ ಸಿಗುವುದು ಕಷ್ಟಸಾಧ್ಯ ಎಂಬುದು ರಾಜಕೀಯ ವಿಶ್ಲೇಷಕರ ಮಾತು.
ಜಿಲ್ಲೆಗೆ ಕಡ್ಡಾಯವಾಗಿ ಮಂತ್ರಿ ಸ್ಥಾನ ಕೊಡಬೇಕೆಂದು ವರಿಷ್ಠರು ತೀರ್ಮಾನ ಮಾಡಿದ್ದರೆ ದರ್ಶನಾಪುರ ಹೊರತುಪಡಿಸಿ ಉಳಿದ ಇಬ್ಬರಲ್ಲಿ ಒಬ್ಬರು ಹಿರಿಯ ಕಾಂಗ್ರೆಸಿಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ಶಾಸಕ ಚನ್ನಾರಡ್ಡಿ ಪಾಟೀಲ್, ಇನ್ನೊಬ್ಬರು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ. ಆದರೆ ವಯಸ್ಸು ಮತ್ತು ಅನುಭವದಲ್ಲಿ ಕಿರಿಯರು ಎಂಬ ಮಾತು ಕೇಳಿಬಂದರೆ ನಾಯಕಗೆ ಮಂತ್ರಿ ಸ್ಥಾನ ಸಿಗುವುದು ಕಷ್ಟಕರ.
ಇನ್ನು ಜಿಲ್ಲಾವಾರು ಪ್ರಾತಿನಿಧ್ಯಕ್ಕೆ ಒತ್ತು ನೀಡಿದರೆ ಹೈಕಮಾಂಡ್ ತಲೆಯಲ್ಲಿ ಹೊಳೆಯುವ ಮೊದಲ ಹೆಸರೇ ಚನ್ನಾರಡ್ಡಿ ಪಾಟೀಲ್. ಮೇಲಾಗಿ ಖರ್ಗೆಗೆ ಮಾತ್ರವಲ್ಲ ಡಿ.ಕೆ. ಶಿವಕುಮಾರ್ ಅವರಿಗೂ ತುನ್ನೂರ ಅತ್ಯಂತ ಆತ್ಮೀಯರು. ಡಿಕೆಶಿ ಬಳಗದಲ್ಲಿ ಗುರುತಿಸಿಕೊಂಡವರಲ್ಲಿ ಇವರೊಬ್ಬರು. ಅಂತಲೇ ಮಂತ್ರಿಯಾಗುವ ಚಾನ್ಸ್ ಜಾಸ್ತಿ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿ ಮಾಡಿ ಶುಭಾಶಯ ಕೋರಿದ್ದೇನೆ. ಮೊದಲಿನಿಂದಲೂ ಶಿವಕುಮಾರ್ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟವರು. ಅವರು ಸಿಎಂ ಆಗುತ್ತಿರುವುದು ಸಂತಸ ತಂದಿದೆ. ನಾನು ದೈವಿಭಕ್ತ. ಹೀಗಾಗಿ ಹಣೆಬರಹದಲ್ಲಿದ್ದರೆ ಮಂತ್ರಿಯಾಗುವೆ. ಇಲ್ಲದಿದ್ದರೆ ಇಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸುವೆ.
— > ಚನ್ನಾರಡ್ಡಿ ಪಾಟೀಲ್ ತುನ್ನೂರ ಶಾಸಕ ಯಾದಗಿರಿ