ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಬೆರಗುಗೊಳಿಸಿದೆ. ಯಾರು ಊಹಿಸದ ರೀತಿಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಬರೋಬ್ಬರಿ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅಧಿಕಾರದ ಹೊಸ್ತಿಲಲ್ಲಿದೆ. ಈ ರಾಜಕೀಯ ಸುನಾಮಿಯ ಹಿಂದೆ ಒಬ್ಬ ವ್ಯಕ್ತಿಯ ಅದೃಶ್ಯ ಕೈಚಳಕವಿದೆ. ಅವರೇ ಚುನಾವಣಾ ತಂತ್ರಜ್ಞ ಜಾನ್ ಅರೋಕಿಯಸಾಮಿ.
ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ 'ಮೈ ಆಕ್ಸಿಸ್ ಇಂಡಿಯಾ' ಮಾತ್ರ ಟಿವಿಕೆ ಅಧಿಕಾರ ಹಿಡಿಯಲಿದೆ ಎಂದು ಹೇಳಿತ್ತು. ಇಂದು ಆ ಭವಿಷ್ಯ ನಿಜವಾಗುತ್ತಿರುವ ಬೆನ್ನಲ್ಲೇ, ವಿಜಯ್ ಅವರಿಗೆ ಗೆಲುವಿನ ತಂತ್ರ ಹೆಣೆದುಕೊಟ್ಟ ಜಾನ್ ಅರೋಕಿಯಸಾಮಿ ಅವರ ಹೆಸರು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಯಾರು ಈ ಜಾನ್ ಅರೋಕಿಯಸಾಮಿ?
ಮೂಲತಃ ಆಂಧ್ರಪ್ರದೇಶದವರಾದ ಜಾನ್ ಅರೋಕಿಯಸಾಮಿ ಅವರು ಶಿಕ್ಷಣ ಮತ್ತು ಅನುಭವದ ದೃಷ್ಟಿಯಿಂದ ಅತ್ಯಂತ ಬಲಿಷ್ಠ ಹಿನ್ನೆಲೆ ಹೊಂದಿದ್ದಾರೆ.
ಶಿಕ್ಷಣ: ತಿರುಚಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ.
ವೃತ್ತಿಜೀವನ: ಆರಂಭದಲ್ಲಿ 'ಪರ್ಫೆಕ್ಟ್ ರಿಲೇಶನ್ಸ್' ಮತ್ತು 'ಗುಡ್ ರಿಲೇಶನ್ಸ್ ಇಂಡಿಯಾ' ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮ್ಯಾನೇಜರ್ ಮತ್ತು ಡೈರೆಕ್ಟರ್ ಆಗಿ 16 ವರ್ಷಗಳ ಕಾಲ ಅನುಭವ ಪಡೆದಿದ್ದಾರೆ. 2017ರಲ್ಲಿ 'ಪರ್ಸೋನಾ ಲೀಡರ್‌ಶಿಪ್ ಅಡ್ವೈಸರಿ' ಎಂಬ ಸ್ವಂತ ಸಂಸ್ಥೆ ಆರಂಭಿಸಿದ ಇವರು, ಬಳಿಕ 'ಜೆಪ್ಯಾಕ್ ಪರ್ಸೋನಾ' (JPACPersona) ಮೂಲಕ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಮತ್ತು ಶಿವಸೇನೆಗೂ ಇವರೇ ಸಾಥ್!
ಜಾನ್ ಅರೋಕಿಯಸಾಮಿ ಅವರು ಚುನಾವಣಾ ರಣಕಣಕ್ಕೆ ಹೊಸಬರೇನಲ್ಲ. ಈ ಹಿಂದೆ ಅವರು ಹಲವು ಪ್ರಮುಖ ಪಕ್ಷಗಳಿಗೆ ತಂತ್ರ ಹೆಣೆದಿದ್ದಾರೆ.
ಶಿವಸೇನೆ: 2014ರ ಲೋಕಸಭೆ ಮತ್ತು 2017ರ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಗೆ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.
ಸಿದ್ದರಾಮಯ್ಯ: ಅತ್ಯಂತ ಗಮನಾರ್ಹವೆಂದರೆ, 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹಾ ತಂಡದೊಂದಿಗೆ ಜಾನ್ ಕಾರ್ಯನಿರ್ವಹಿಸಿದ್ದರು.
ಪಿಎಂಕೆ (PMK): 2016ರಲ್ಲಿ ಅನ್ಬುಮಣಿ ರಾಮದಾಸ್ ಅವರಿಗೆ "ಬದಲಾವಣೆ... ಪ್ರಗತಿ... ಅನ್ಬುಮಣಿ" ಎಂಬ ಪ್ರಸಿದ್ಧ ಘೋಷಣೆಯನ್ನು ರೂಪಿಸಿಕೊಟ್ಟಿದ್ದೇ ಇವರು.
ಟಿವಿಕೆಗಾಗಿ ರೂಪಿಸಿದ ಗೆಲುವಿನ ಮಂತ್ರ
ಪ್ರಸಕ್ತ 2026ರ ಚುನಾವಣೆಯಲ್ಲಿ ವಿಜಯ್ ಅವರ ಇಮೇಜ್ ಅನ್ನು ಕೇವಲ ಸಿನಿಮಾ ನಟನಾಗಿ ಉಳಿಸದೆ, "ಸಾಮಾನ್ಯ ಜನರ ಕ್ರಾಂತಿ" ಎಂಬ ಬಿಂಬವನ್ನು ನೀಡುವಲ್ಲಿ ಜಾನ್ ಯಶಸ್ವಿಯಾಗಿದ್ದಾರೆ. "ಬದಲಾವಣೆಗಾಗಿ ಸಾಮಾನ್ಯ ಜನರ ಕ್ರಾಂತಿ" ಎಂಬ ಘೋಷಣೆಯಡಿ ಇಡೀ ಪ್ರಚಾರವನ್ನು ವಿನ್ಯಾಸಗೊಳಿಸಿದ ಇವರು, ತಮಿಳುನಾಡಿನ ಮೂಲೆ ಮೂಲೆಯಲ್ಲೂ ಟಿವಿಕೆ ಪರ ಅಲೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇಂದು ಟಿವಿಕೆ 110 ಸೀಟುಗಳಲ್ಲಿ ಮುನ್ನಡೆ ಸಾಧಿಸಿ, ಎಐಎಡಿಎಂಕೆ (63) ಮತ್ತು ಡಿಎಂಕೆ (61) ಪಕ್ಷಗಳನ್ನು ಹಿಂದಕ್ಕೆ ಹಾಕಿರುವುದರ ಹಿಂದೆ ಜಾನ್ ಅರೋಕಿಯಸಾಮಿ ಅವರ ಈ ಮೌನ ಕ್ರಾಂತಿ ಅಡಗಿದೆ,(ಏಜೆನ್ಸೀಸ್).