ಕಡ್ಲೇವಾಡ ಪಿಸಿಎಚ್ ಗ್ರಾಮದಿಂದ ಚಟ್ಟರಕಿ ಕಡೆಗೆ ತೆರಳುವ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿರುವುದು. 
ರಾಜ್ಯ

ರಸ್ತೆ ಗೋಳು ಕೇಳುವವರ‌್ಯಾರು...?

ಪ್ರಮುಖ ಮುಖ್ಯಾಂಶಗಳು

  • ಕಡ್ಲೇವಾಡ ಪಿಸಿಎಚ್‌ದಿಂದ ಹಚ್ಯಾಳವರೆಗಿನ ರಸ್ತೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಸಂಚಕಾರ
ದೇವರಹಿಪ್ಪರಗಿ: ಕಡ್ಲೇವಾಡ ಪಿಸಿಎಚ್‌ದಿಂದ ಹಚ್ಯಾಳವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ತಕ್ಷಣವೇ ಸಂಪೂರ್ಣ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಕಡ್ಲೇವಾಡ ಗ್ರಾಮದಿಂದ ಹಚ್ಯಾಳ ಗ್ರಾಮದವರೆಗಿನ ಸುಮಾರು 8 ಕಿ.ಮೀ., ಜಿಲ್ಲಾ ಮುಖ್ಯ ರಸ್ತೆ ಅದೆಷ್ಟೋ ವರ್ಷಗಳಿಂದ ಡಾಂಬರ್ ಕಾಣದೆ ತಗ್ಗು-ದಿನ್ನೆಗಳಿಂದ ಆವೃತ್ತವಾಗಿದ್ದು, ಸುಮಾರು 15-16 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿದೆ.
ಈ ರಸ್ತೆಯಿಂದ ಚಟ್ಟರಕಿ, ಹಚ್ಯಾಳ, ಚಾಂದಕವಟೆ, ರಾಂಪೂರ, ಗಣಿಹಾರ ಸೇರಿ ಸಿಂದಗಿಗೆ ತೆರಳಲು ಇದೇ ರಸ್ತೆ ಬಳಸಲಾಗುತ್ತದೆ. ಈ ರಸ್ತೆ ಹಾಳಾಗಿರುವುದರಿಂದ ದೇವರಹಿಪ್ಪರಗಿ ಮಾರ್ಗವಾಗಿ ಸುತ್ತುವರಿದು ಸಿಂದಗಿಗೆ ಹೋಗುವಂತಾಗಿದೆ. ನಿತ್ಯ ವ್ಯಾಪಾರಸ್ಥರು, ನೌಕರರು, ವಿದ್ಯಾರ್ಥಿಗಳು ರಸ್ತೆ ಗೋಳಿನಿಂದ ನರಕ ಯಾತನೆ ಅನುಭವಿಸುವಂತಾಗಿದೆ.
ಮೊದಲು ಸಾರಿಗೆ ವಾಹನಗಳು ಕಡಿಮೆ ಪ್ರಮಾಣದಲ್ಲಿ ಈ ರಸ್ತೆಯಿಂದ ಸಂಚರಿಸುತ್ತಿದ್ದು,
ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಆದರೆ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಟಂಟಂ ವಾಹನಗಳು ಈ ರಸ್ತೆ ಮೂಲಕ ಸಂಚಾರಿಸುವುದು ಸಂಚಾರಕ್ಕೆ ಸಂಚಕಾರ ಉಂಟಾದಂತಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಪ್ರಯಾಣಿಕರ ಒತ್ತಾಸೆಯಿಂದ ದುರಸ್ತಿ ಕಾರ್ಯ ನಡೆದು ಗುಂಡಿ ಮುಚ್ಚುವ ಕಾರ್ಯ ನಡೆದಿತ್ತು. ಆದರೆ ವಿಪರ್ಯಾಸವೆಂಬಂತೆ ದುರಸ್ತಿ ಮಾಡಿದ 8 ದಿನಗಳಲ್ಲಿಯೇ ಮೊದಲಿಗಿಂತಲೂ ರಸ್ತೆ ಹದಗಟ್ಟು ಹೋಗಿದೆ. ಹೀಗಾಗಿ ಪ್ರಯಾಣಿಕರ ನರಕ ಯಾತನೆಗೆ ಕೊನೆ ಎಂದು? ಎನ್ನುವಂತಾಗಿದೆ.
ಆದ್ದರಿಂದ ಕಡ್ಲೇವಾಡ ಪಿಸಿಎಚ್‌ದಿಂದ ಹಚ್ಯಾಳವರೆಗಾದರೂ ಕನಿಷ್ಠ ಉತ್ತಮ ಗುಣಮಟ್ಟದ ಡಾಂಬರ್ ರಸ್ತೆ ನಿರ್ಮಾಣ ಮಾಡಬೇಕು. ರಸ್ತೆ ಮೇಲಿನ ತಗ್ಗು ಗುಂಡಿಗಳನ್ನು ಮುಚ್ಚಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಯಾಣಿಕರಾದ ಚಂದ್ರಶೇಖರ ಹರನಾಳ, ಅರ್ಜುನ ಮಾಲಗಾರ, ಜಗದೀಶ ಚಟ್ಟರಕಿ, ಶಿವಾನಂದ ನಾಟೀಕಾರ, ಜಗದೀಶ ಬಳುಂಡಗಿ, ರಮೇಶ ಮಲಘಾಣ ಸೇರಿ ಕಡ್ಲೇವಾಡ ಪಿಸಿಎಚ್, ಚಟ್ಟರಕಿ, ಹಚ್ಯಾಳ ಸೇರಿ ಸಂಬಂಧಪಟ್ಟ ಗ್ರಾಮಗಳ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
"

ಪ್ರತಿ ವರ್ಷ ಗುಂಡಿ ಮುಚ್ಚುವುದು, ಸಣ್ಣಪುಟ್ಟ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಈ ರಸ್ತೆ ಕುರಿತು ಈಗಾಗಲೇ ಮೇಲಾಧಿಕಾರಿಗಳು, ಜನಪ್ರತಿನಿಧಿಗಳಿಗೂ ಮನವಿಮಾಡಿ. ಅಂದಾಜು ಖರ್ಚು-ವೆಚ್ಚ ಕುರಿತು ಮಾಹಿತಿ ನೀಡುತ್ತೇವೆ. ಅನುದಾನ ಬಂದ ತಕ್ಷಣ ಉತ್ತಮ ರಸ್ತೆ ನಿರ್ಮಿಸಲು ಕ್ರಮ ಕೈಕೊಳ್ಳಲಾಗುವುದು.

ಅರುಣಕುಮಾರ ವಡಗೇರಿ, ಎಇಇ ಲೋಕೋಪಯೋಗಿ ಇಲಾಖೆ, ಸಿಂದಗಿ

ಕಳೆದ ಹಲವು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿ ಕಾಣದಂತಾಗಿದೆ. ಪ್ರಯಾಣಿಕರ ನಿತ್ಯ ಗೋಳು ಹೇಳತೀರದಾಗಿದೆ. ಡಾಂಬರ್ ಕಿತ್ತು ಹೋಗಿ ವಾಹನ ಸಂಚಾರಕ್ಕೆ ಸಂಚಕಾರ ಬಂದಂತಾಗಿದೆ. ವಾಹನಗಳು ನಿತ್ಯ ಸರ್ಕಸ್ ಮಾಡುತ್ತಲೇ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ತಕ್ಷಣವೇ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗಬೇಕು.

ಚಂದ್ರಶೇಖರ ಹರನಾಳ, ಹಿರಿಯ ಮುಖಂಡರು, ಚಟ್ಟರಕಿ