ರೇಷನ್ ಪಡೆಯಲು ಹಿರಿಯ ನಾಗರಿಕರು ಪರದಾಟ 
ರಾಜ್ಯ

ರೇಷನ್ ಪಡೆಯಲು ಹಿರಿಯ ನಾಗರಿಕರ ಪರದಾಟ: ಬೆರಳಚ್ಚು ಬಾರದವರಿಗೆ ಸಿಗುತ್ತಿಲ್ಲ ಪಡಿತರ- struggle to get ration

ಹರೀಶ್​​ ಕೆ.ಸಿ.

ಬೆಂಗಳೂರು: ರಾಜ್ಯದಲ್ಲಿ ರೇಷನ್ ಪಡೆಯಲು ಹಿರಿಯ ನಾಗರಿಕರು ಪರದಾಡುತ್ತಿದ್ದಾರೆ. ಹಿಂದೆ ಬೆರಳಚ್ಚು (ಬಯೋಮೆಟ್ರಿಕ್) ಬಾರದವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಒಟಿಪಿ ಮೂಲಕ ಪಡಿತರ ವಿತರಿಸುವ ವ್ಯವಸ್ಥೆ ಇತ್ತು. ಈ ಕ್ರಮದಿಂದ ಹೆಬ್ಬೆರಳು ಗೆರೆ ಅಳಿಸಿ ಬೆರಳಚ್ಚು ಬಾರದವರಿಗೆ ಒಟಿಪಿ ಮೂಲಕ ಪಡಿತರ ಪಡೆಯಲು ಸಹಾಯವಾಗುತ್ತಿತ್ತು. ಆದರೆ, ಇದೀಗ ಆಹಾರ ಇಲಾಖೆ ಏಕಾಏಕಿ ಇದನ್ನು ನಿಲ್ಲಿಸಿದ್ದ ಪರಿಣಾಮ ಬೆರಳಚ್ಚು ಬಾರದವರಿಗೆ ಪಡಿತರ ಸಿಗುತ್ತಿಲ್ಲ.

ಸಾವಿರಾರು ವೃದ್ಧರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು,ಹೆಬ್ಬೆರಳು ಗೆರೆ ಅಳಿಸಿರುವ ಕಾರಣ ಅವರಿಗೆ ಬಯೋ ಬರುತ್ತಿಲ್ಲ. ಇದರಿಂದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಹಾರ ಪದಾರ್ಥ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ರೇಷನ್‌ಗೆ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುತ್ತಿದ್ದಾರೆ. ಹಾಗಾಗಿ, ಹಿಂದಿನಂತೆ ಬೆರಳಚ್ಚು ಬಾರದವರಿಗೆ ಒಟಿಪಿ ಮೂಲಕ ರೇಷನ್ ವಿತರಿಸಬೇಕೆಂದು ಕೆಲವರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಬೆರಳಚ್ಚು ಬಾರದ ಫಲಾನುಭವಿಗಳಿದ್ದಾರೆ. ಬಯೋ ಬಾರದವರು ಆಯಾ ವ್ಯಾಪ್ತಿಯ ಆಹಾರ ನಿರೀಕ್ಷಕರ ಗಮನಕ್ಕೆ ತರಬೇಕು.ಆಹಾರ ನಿರೀಕ್ಷಕರು ಮೇಲಧಿಕಾರಿಗಳ ಗಮನಕ್ಕೆ ತಂದು ಫಲಾನುಭವಿ ವಿವರವನ್ನು ಲಾಗಿನ್‌ನಲ್ಲಿ ನಮೂದಿಸುತ್ತಾರೆ. ಪ್ರತಿ ತಿಂಗಳು ನಿರೀಕ್ಷಕರ ಲಾಗಿನ್‌ನಲ್ಲೇ ಅವರಿಗೆ ಪಡಿತರ ವಿತರಿಸಲಾಗುತ್ತದೆ ಎಂದು ಹೆಸರಲೆಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಮಾತನಾಡಿ, ಬೆರಳಚ್ಚು ಬಾರದವರಿಗೆ ಮೂಬೈಲ್ ಒಟಿಪಿ ಮೂಲಕ ಪಡಿತರ ವಿತರಿಸುವುದನ್ನು ಆಹಾರ ಇಲಾಖೆ ನಿಲ್ಲಿಸಿದೆ. ಸಾಕಷ್ಟು ಮಂದಿಗೆ ಬೆರಳಚ್ಚು ಬರುತ್ತಿಲ್ಲ. ಬೆರಳಚ್ಚು ಬಾರದವರಿಗೆ ಒಟಿಪಿ ಮೂಲಕ ರೇಷನ್ ವಿತರಿಸಲು ಇಲಾಖೆ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.
ಸೂಕ್ತವಾಗಿ ಅನುಷ್ಠಾನಕ್ಕೆ ಬಂದಿಲ್ಲ ಅನ್ನ ಸುವಿಧಾ:
ಪಡಿತರ ಪಡೆಯಲು ಸಾಧ್ಯವಾಗದ ವೃದ್ಧರು, ಮಹಿಳೆಯರು,ದೈಹಿಕವಾಗಿ ಅಶಕ್ತ ಲಾನುಭವಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಆಹಾರ ಇಲಾಖೆ, ಕಳೆದ ವರ್ಷ ‘ಅನ್ನ ಸುವಿಧಾ’ ಯೋಜನೆ ಜಾರಿಗೆ ತಂದಿತು. 75 ಅಥವಾ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವೃದ್ಧರ ಮನೆ ಬಾಗಿಲಿಗೆ ಉಚಿತವಾಗಿ ರೇಷನ್ ವಿತರಿಸುವುದು ಯೋಜನೆ ಉದ್ದೇಶವಾಗಿದೆ. ಮನೆ ಬಾಗಿಲಿಗೆ ಸೇವೆ ನೀಡುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕುಟುಂಬಕ್ಕೆ ಸರ್ಕಾರವು 50 ರೂ. ಪಾವತಿಸುತ್ತದೆ. ಆದರೆ, ಸಮರ್ಪಕವಾಗಿ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ.