- ಕೋರ್ಟ್ಗೆ ಹೋಗುವಾಗ ನಾಯಿ ಕಚ್ಚಿತ್ತು ಎಂಬ ಕೇಸ್ ರದ್ದು
ಬೆಂಗಳೂರು:
ಹತ್ತು ನಾಯಿಗಳು ವಕೀಲರೊಬ್ಬರ ಮೇಲೆ ದಾಳಿ ಮಾಡಿದ್ದವು ಎಂಬ ಆರೋಪದಲ್ಲಿ ಹಿರಿಯ ನಾಗರಿಕರೊಬ್ಬರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ದೂರು ಮತ್ತು ಚಾರ್ಜ್ಶೀಟ್ನಲ್ಲಿ ಗೊಂದಲಗಳಿದ್ದು, ಇಂತಹ ಅಸ್ಪಷ್ಟ ಪ್ರಕರಣಗಳಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ತಮ್ಮ ಮೇಲಿನ ಪ್ರಕರಣ ರದ್ದುಕೋರಿ ಆರ್.ಟಿ. ನಗರದ ಸಂಗೀತಾ ಮೆಹೋತ್ರಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಮೂರ್ತಿ ಎಣ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಹಿಂದಿನ ವಿಚಾರಣೆ ವೇಳೆ ಇದೊಂದು ಕ್ಲುಲ್ಲಕ ಪ್ರಕರಣ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠ, ದೂರುದಾರರಿಗೆ ತಮ್ಮ ವಾದ ಸಲ್ಲಿಸಲು ಕೊನೆಯ ಅವಕಾಶ ನೀಡಿತ್ತು. ಆದರೆ, ಮಂಗಳವಾರದ ವಿಚಾರಣೆ ವೇಳೆಯೂ ದೂರುದಾರರು ಹಾಜರಾಗದ ಕಾರಣ ಅರ್ಜಿದಾರರ ವಾದ ಪರಿಗಣಿಸಿ ಪ್ರಕರಣ ರದ್ದುಪಡಿಸಿತು.
2021ರ ನ.28ರಂದು ವಕೀಲರು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಆರ್.ಟಿ. ನಗರದ ಕಾಫಿ ಡೇ ಪಕ್ಕದ ವಾಹನ ಪಾರ್ಕಿಂಗ್ ಬಳಿ 10 ನಾಯಿಗಳು ದಾಳಿ ಮಾಡಿ ಕಚ್ಚಿದ್ದು, ಕಿರುಚಿಕೊಂಡಾಗ ನಾಯಿಗಳ ಮಾಲಕಿ ಬಂದು ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಅಂದು ಭಾನುವಾರವಾಗಿದ್ದು, ಯಾವ ನ್ಯಾಯಾಲಯ ತೆರೆದಿತ್ತು ಎಂದು ನ್ಯಾಯಪೀಠ ಪ್ರಶ್ನಿಸಿದೆ. ದೂರು ಮತ್ತು ಚಾರ್ಜ್ಶೀಟ್ನಲ್ಲಿ ಹಲವು ವ್ಯತ್ಯಾಸಗಳಿವೆ ಎಂದು ಹೇಳಿದೆ.
ಪ್ರಕರಣದ ಬಗ್ಗೆ ತಮಗೆ ಯಾವುದೇ ಮಹಿತಿ ಇರಲಿಲ್ಲ. ಪಾಸ್ಪೋರ್ಟ್ ನವೀಕರಣ ಸಂದರ್ಭದಲ್ಲಿ ಈ ಮಾಹಿತಿ ತಿಳಿದುಬಂದಿತ್ತು. ಈ ಪ್ರಕರಣ ಸತ್ಯಕ್ಕೆ ದೂರವಾಗಿದ್ದು, ಅಸ್ಪಷ್ಟವಾಗಿದೆ. ಇದು ವ್ಯವಸ್ಥೆಯ ದುರ್ಬಳಕೆಯಾಗಿದೆ ಎಂದು ಅರ್ಜಿದಾರರು ಹೈಕೋರ್ಟ್ನಲ್ಲಿ ವಾದಿಸಿದ್ದರು. ಇದನ್ನು ನ್ಯಾಯಪೀಠ ಪರಿಗಣಿಸಿದೆ.