ವಿಜಯಪುರದ ಸಾರ್ವಜನಿಕ ಶಿಕ್ಷಣ ಇಲಾಖೆ.
- ಹೊಸ ಶಾಲೆಗಳ ನೋಂದಣಿ ಪ್ರಕ್ರಿಯೆ
- ನಿಯಮ ಬಾಹಿರವಾಗಿ ಅನುಮತಿ
- 157 ಶಾಲೆಗಳಿಗೆ ಅನುಮೋದನೆ
- ಪ್ರಭಾರಿ ಡಿಡಿಪಿಐ ಸಹಿತ 9 ಜನರಿಗೆ ನೋಟಿಸ್
ವಿಜಯಪುರ: ‘‘ಸಮಗ್ರ ತನಿಖೆ ನಡೆಸಲಾಗುವುದು, ಕ್ರಮ ಕೈಗೊಳ್ಳಲಾಗುವುದು, ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ, ತನಿಖಾ ತಂಡ ರಚಿಸಲಾಗಿದೆ, ವಿಚಾರಣೆ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು, ಪ್ರಕರಣ ತನಿಖಾ ಹಂತದಲ್ಲಿದೆ...’’
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣದ ಅಕ್ರಮಕ್ಕೆ ಸಂಬಂಧಿಸಿದಂತೆ ವರ್ಷದಿಂದ ಕೇಳಿ ಬರುತ್ತಿರುವ ಈ ಹಳಸಲು ಪದಗಳು ಸಾರ್ವಜನಿಕರಲ್ಲಿ ಜುಗುಪ್ಸೆ ತರಿಸುತ್ತಿವೆ.
ಸದನದಲ್ಲಿ ಚರ್ಚೆಯಾಗಿ, ಕಾರಣ ಕೇಳಿ ನೋಟಿಸ್ ನೀಡಿ, ತನಿಖಾ ತಂಡಗಳು ಶಿಫಾರಸ್ಸು ಪತ್ರ ಸಲ್ಲಿಸಿದರೂ ಈವರೆಗೂ ಕಠಿಣ ಕ್ರಮ ಕೈಗೊಳ್ಳದಿರುವುದು ಮತ್ತು ಪ್ರಕರಣದ ಕುರಿತು ಸ್ಪಷ್ಟತೆ ಸಿಗದಿರುವುದು ತುಕ್ಕು ಹಿಡಿದಿರುವ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನದೇ ವಿಧಿಯಿಲ್ಲ.
ಡಿಡಿಪಿಐ ಲಾಗಿನ್ ದುರ್ಬಳಕೆಗೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್ ಆಧಾರಿತ ತನಿಖಾ ವರದಿ ‘ಬಿ-ಫಾಲ್ಸ್’ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು ಒಂದು ಭಾಗವಾದರೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಹಿಂದಿನ ನಾಲ್ಕು ಡಿಡಿಪಿಐಗಳ ಅವಧಿಯಲ್ಲಾದ ಲೋಪ-ದೋಷಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿ ಮೂರ್ನಾಲ್ಕು ತಿಂಗಳು ಗತಿಸುತ್ತಿರುವುದು ಇನ್ನೊಂದು ಭಾಗ. ಮತ್ತೊಂದೆಡೆ ಲೋಕಾಯುಕ್ತ ತನಿಖೆ ಇನ್ನೊಂದೆಡೆ ಕಾರಣ ಕೇಳಿ ನೀಡಿದ ನೋಟಿಸ್ ಆಧಾರಸಿ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ತನಿಖೆ.
ಈ ಮಧ್ಯೆ ಕಳೆದ 2025-26ನೇ ಸಾಲಿನಲ್ಲಿ ಪ್ರಭಾರ ಉಪ ನಿರ್ದೇಶಕಿಯಾಗಿದ್ದ ಟಿ.ಎಸ್. ಕೋಲ್ಹಾರ ಅವರ ಅವಧಿಯಲ್ಲಿ 157 ಶಾಲೆಗಳಿಗೆ ಆನ್‌ಲೈನ್‌ನಲ್ಲಿ ನಿಯಮ ಬಾಹಿರವಾಗಿ ಅನುಮೋದನೆ ನೀಡಿ ಶಾಲೆ ಪ್ರಾರಂಭಕ್ಕೆ ಅನುಮತಿ ನೀಡಿದ್ದು, ಆ ಕುರಿತು ವಿಚಾರಣೆ ಯಾವ ಹಂತದಲ್ಲಿದೆ? ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎಷ್ಟು ಕಾಲಾವಕಾಶ ಬೇಕು? ಇಡೀ ಪ್ರಕರಣಕ್ಕೆ ಮುಕ್ತಿ ಸಿಗುವುದು ಯಾವಾಗ? ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಮಾನಸಿಕ ಖಿನ್ನತೆಗೆ ದೂಡುತ್ತಿದೆ.
ಕೊಲ್ಹಾರ ಅವಧಿಯಲ್ಲಿ ಆಗಿದ್ದೇನು?
ಪ್ರಭಾರ ಡಿಡಿಪಿಐ ಆಗಿದ್ದ ಟಿ.ಎಸ್. ಕೊಲ್ಹಾರ ಅವಧಿಯಲ್ಲಿ ಒಟ್ಟು 157ಶಾಲೆಗಳಿಗೆ ಆನ್‌ಲೈನ್‌ನಲ್ಲಿ ನಿಯಮ ಬಾಹಿರವಾಗಿ ಅನುಮೋದನೆ ನೀಡಿ ಶಾಲೆ ಪ್ರಾರಂಭಕ್ಕೆ ಅನುಮತಿಸಿದ್ದು, ಈ ಕುರಿತು 2025 ಜು.11 ರಂದೇ ಧಾರವಾಡದ ಶಿಕ್ಷಣ ಇಲಾಖೆ ಅಪರ ಆಯುಕ್ತರು ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದಾರೆ.
ಅದನ್ನಾಧರಿಸಿ ಒಟ್ಟು 9 ಜನರಿಗೆ ಕಳೆದ ಮೇ ನಲ್ಲಿಯೇ ನೋಟಿಸ್ ನೀಡಲಾಗಿದೆ. ಅದರಲ್ಲಿ 2025-26ನೇ ಸಾಲಿನಲ್ಲಿ ಹೊಸದಾಗಿ ಶಾಲೆಗಳ ನೋಂದಣಿಗೆ ಸ್ವೀಕೃತವಾದ ಅರ್ಜಿಗಳು, ಪುರಸ್ಕೃತಗೊಂಡ ಹಾಗೂ ತಿರಸ್ಕೃತಗೊಂಡ ಅರ್ಜಿಗಳು ಮತ್ತು ಅನುಮೋದಿಸಲು ಬಾಕಿ ಇರುವ ಅರ್ಜಿಗಳ ವಿವರ ನೀಡಲಾಗಿದ್ದು, ಆ ಪೈಕಿ 157 ಶಾಲೆಗಳಿಗೆ ನಿಯಮ ಬಾಹಿರವಾಗಿ ಅನುಮೋದನೆ ನೀಡಿರುವ ಕುರಿತು ಉಲ್ಲೇಖಿಸಲಾಗಿದೆ. ಇನ್ನುಳಿದ ಎಂಟು ಸಿಬ್ಬಂದಿ ವಿವಿಧ ಹಂತಗಳಲ್ಲಿ ಭಾಗಿಯಾಗಿರುವ ಕುರಿತು ಉಲ್ಲೇಖಿಸಿ ಆ ಕುರಿತು ದೋಷಾರೋಪಣೆ (1 ಟು 4) ಜಾರಿಗೊಳಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಯವರು ಶಾಲೆಗಳ ತೆರೆಯಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಖಚಿತಪಡಿಸಿಕೊಳ್ಳದೇ ನಿಯಮಬಾಹಿರವಾಗಿ ಅನುಮತಿ ನೀಡಿರುವ ಆರೋಪಕ್ಕೆ ಗುರಿಮಾಡಲಾಗಿದೆ.
ಆ ಬಳಿಕ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿ ನೋಟಿಸ್ ನೀಡಿದ್ದು ಬಿಟ್ಟರೆ ಈವರೆಗೆ ಕಠಿಣ ಕ್ರಮ ಕೈಗೊಂಡ ಬಗ್ಗೆ ಖಚಿತತೆ ಇಲ್ಲ. ಸರ್ಕಾರದ ಮಟ್ಟದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಧಾರವಾಡದ ಅಪರ ಆಯುಕ್ತರು ತಿಳಿಸಿದ್ದಾರೆ. ಆದರೆ, ನಿಯಮ ಬಾಹಿರವಾಗಿ ಅನುಮತಿ ನೀಡಲಾದ ಶಿಕ್ಷಣ ಸಂಸ್ಥೆಗಳ ಮೇಲೆ ಯಾವ ಕ್ರಮ ಜರುಗಿಸಲಾಗಿದೆ? ಅವುಗಳ ಸ್ಥಿತಿ ಏನು? ಶಾಲೆ ಆರಂಭಿಸುವುದಾ? ಪುನಃ ಪ್ರಕ್ರಿಯೆ ನಡೆಸುವುದಾ? ಎಂಬಿತ್ಯಾದಿ ಗೊಂದಲಗಳು ಇನ್ನೂ ಜೀವಂತವಾಗಿವೆ.
ಆರೋಪಿತ ಪ್ರಭಾರಿ ಡಿಡಿಪಿಐ ಹಾಗೂ ಸಿಬ್ಬಂದಿಗೆ ವರ್ಗಾವಣೆ ಮಾಡಿ ದೋಷಾರೋಪಣೆ ಸಲ್ಲಿಸಲಾಗಿದೆ. ವಿಚಾರಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿ ವಿಚಾರಣೆ ಪ್ರಗತಿಯಲ್ಲಿದ್ದು, ವಿಚಾರಣೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
— ಈಶ್ವರ ಉಳ್ಳಾಗಡ್ಡಿ, ಅಪರ ಆಯುಕ್ತರು, ಧಾರವಾಡ