ವಿಶ್ವ ಎಚ್ಐವಿ/ಏಡ್ಸ್ ದಿನ - 2025 
ರಾಜ್ಯ

ಏಡ್ಸ್‌ಮುಕ್ತ ಗುರಿ ಸಾಕಾರಗೊಳ್ಳುವುದು ಯಾವಾಗ ?

ಪ್ರಮುಖ ಮುಖ್ಯಾಂಶಗಳು

  • 2030ಕ್ಕೆ ಏಡ್ಸ್ ಮುಕ್ತ ರಾಜ್ಯ ಕರ್ನಾಟಕದ ಗುರಿ
  • ಸಲಿಂಗ ಕಾಮಿಗಳಲ್ಲಿ ಹೆಚ್ಚುತ್ತಿದೆ ಎಚ್ಐವಿ
  • ಗರ್ಭಿಣಿಯರಲ್ಲಿ ಶೇ. 0.01 ಏರಿಕೆ

2030ಕ್ಕೆ ಕರ್ನಾಟಕವನ್ನು ಏಡ್ಸ್‌ಮುಕ್ತ ರಾಜ್ಯವಾಗಿಸಬೇಕೆಂದು ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಇಲಾಖೆಯೇ ನಡೆಸಿದ ಪರೀಕ್ಷೆಯ ವರದಿಗಳು ಮಾತ್ರ ವಾರ್ಷಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಾಗಿಸಿವೆ. ಇಂದು (ಡಿ.1) ವಿಶ್ವ ಏಡ್ಸ್ ದಿನ. 2025ನೇ ಸಾಲಿನ ಘೋಷವಾಕ್ಯವು ‘ಎಚ್‌ಐವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ’ ಎಂದಾಗಿದ್ದು, ಮುಂದಿನ ವರ್ಷವಾದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಕರಣ ತಗ್ಗಬಹುದೇ ಕಾದು ನೋಡಬೇಕು.

ಬೆಂಗಳೂರು: ವಿಶ್ವವನ್ನೇ ಬಾಧಿಸುತ್ತಿರುವ ಏಡ್ಸ್ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬ ಕಾರಣಕ್ಕೆ ಸರ್ಕಾರಗಳು, ವಿವಿಧ ಸಂಘ-ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಕೆಲಸ ಮಾಡುತ್ತಿವೆಯಾದರೂ ನಿರೀಕ್ಷೆಯಂತೆ ಗುರಿ ಸಾಧಿಸಲು ಸಾಧ್ಯವಾಗದಿರುವುದು ಮಾತ್ರ ವಿಪರ್ಯಾಸ.
ರಾಜ್ಯದಲ್ಲಿ ಸಲಿಂಗ ಕಾಮಿಗಳಲ್ಲಿ (ಪುರುಷರ ನಡುವೆ ಪರಸ್ಪರ ಲೈಂಗಿಕ ಸಂಪರ್ಕ) ಎಚ್‌ಐವಿ/ಏಡ್ಸ್ ಪ್ರಕರಣ ಹೆಚ್ಚಿದ್ದು, ಕಳೆದ 6 ತಿಂಗಳಲ್ಲಿ 243 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ ಹೆಚ್ಚಿನವರು ಯುವಕರು ಎನ್ನುವುದು ಆತಂಕದ ವಿಚಾರ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ ಐದೂವರೆ ವರ್ಷ (2020-2025 ಅಕ್ಟೋಬರ್‌ವರೆಗೆ) ಗಳಲ್ಲಿ ಪರೀಕ್ಷೆಗೆ ಒಳಪಟ್ಟ 3,57,961 ಮಂದಿಯಲ್ಲಿ 1,092 ಮಂದಿ ಎಚ್‌ಐವಿ ಸೋಂಕಿತರಾಗಿದ್ದಾರೆ. 2020ರಲ್ಲಿ 71, 2022-109, 2023-146, 2024-211 ಹಾಗೂ 2025 (ಏಪ್ರಿಲ್-ಅಕ್ಟೋಬರ್ ) 243 ಪ್ರಕರಣಗಳು ಸಲಿಂಗಿಗಳಲ್ಲಿ ವರದಿಯಾಗಿವೆ. ಪೋಷಕರು ಮಕ್ಕಳ ವರ್ತನೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಗಮನಹರಿಸ ಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕ ಎಚ್‌ಐವಿ ರಾಜ್ಯಗಳ ಸಾಲಲ್ಲಿ ಕರ್ನಾಟಕ:

ನ್ಯಾಕೋ ಪ್ರಸವಪೂರ್ವ ಚಿಕಿತ್ಸಾ ಕೇಂದ್ರಗಳಲ್ಲಿ ನಡೆಸಿದ ಎಚ್‌ಐವಿ ಸಮೀಕ್ಷಾ ವರದಿ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಎಚ್‌ಐವಿ/ಏಡ್ಸ್ ಹರಡಿರುವ ಪ್ರಮುಖ ಐದು ರಾಜ್ಯಗಳ ಸಾಲಿನಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಉಳಿದಂತೆ ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರ ರಾಜ್ಯಗಳಾಗಿವೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಕಾರ್ಯಕ್ರಮ 2023ರ (ಎನ್‌ಎಸಿಪಿವಿ-5 )ಪ್ರಕಾರ ಕರ್ನಾಟಕದ 24 ಜಿಲ್ಲೆಗಳು ಅತೀ ಹೆಚ್ಚು ಸೋಂಕಿತರನ್ನು ಹೊಂದಿವೆ. 5 ವರ್ಗದ ಜಿಲ್ಲೆಗಳು ಮಧ್ಯಮ ಹಂತದಲ್ಲಿದ್ದು, ಉಳಿದಂತೆ ಬೆಂಗಳೂರು ಗ್ರಾಮಾಂತರ ಮತ್ತು ಕೊಡಗು ಜಿಲ್ಲೆಗಳು ಕಡಿಮೆ ಸೋಂಕಿತರನ್ನು ಹೊಂದಿವೆ.

ಗರ್ಭಿಣಿಯರಲ್ಲಿ ಶೇ.0.01 ಏರಿಕೆ:

ಕಳೆದ ಆರು ತಿಂಗಳಲ್ಲಿ ಗರ್ಭಿಣಿಯರಲ್ಲಿ ಪ್ರಕರಣಗಳ ಸಂಖ್ಯೆ ಶೇ.1ಕ್ಕೆ ಏರಿಕೆಯಾಗಿದೆ. ಏಪ್ರಿಲ್ನಿಂದ ಅಕ್ಟೋಬರ್ 7, 22,837 ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಲಾಗಿದ್ದು 269 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಶೇ.0.01 ಏರಿಕೆಯಾಗಿದೆ. ಕಳೆದ ವರ್ಷ ಶೇ.0.03 ಇತ್ತು. ಈ ವರ್ಷ ಶೇ. 0.04
ಆರೋಗ್ಯ ಇಲಾಖೆಯು ಪ್ರಸಕ್ತ ಸಾಲಿನಲ್ಲಿ 12,12,570 ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಲು ಇರಿಸಿಕೊಂಡಿದ್ದ ಗುರಿಯಲ್ಲಿ ಶೇ.60 ಗುರಿ ಸಾಧಿಸಿದೆ.
ಸಾಮಾನ್ಯರಲ್ಲೂ ಹೆಚ್ಚಳ:
ಆರೋಗ್ಯ ಇಲಾಖೆಯು ಪ್ರಸಕ್ತ (2025-26) 23,92,310 ಜನರನ್ನು ತಪಾಸಣೆಗೆ ಒಳಪಡಿಸುವ ಗುರಿ ಹೊಂದಿದೆ. ಕಳೆದ ಆರು ತಿಂಗಳಲ್ಲಿ 21,99,202 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೇ. 92 ಗುರಿ ಸಾಧಿಸಿದೆ. ಇದರಲ್ಲಿ 6,751 ಸೋಂಕು ಪ್ರಕರಣಗಳು ವರದಿಯಾಗುವ ಮೂಲಕ ಕಳೆದ ವರ್ಷಕ್ಕಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಅಂದರೆ 2024-25ರಲ್ಲಿ ಸೋಂಕಿತರ ಪ್ರಮಾಣ ಶೇ. 0.32 ವರದಿಯಾಗಿತ್ತು. ಆದರೆ 2025-26ರಲ್ಲಿ ಕೇವಲ ಆರು ತಿಂಗಳಲ್ಲಿಯೇ ಶೇ. 0.31 ಪ್ರಕರಣಗಳು ದೃಢಪಟ್ಟಿವೆ.

ಗುರಿ ನಿರ್ಧಾರಿತ ಕಾರ್ಯಕ್ರಮ :

ಎಚ್‌ಐವಿ/ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ನ್ಯಾಕೋ ಸಂಸ್ಥೆಯ ಅನುದಾನದೊಂದಿಗೆ ಎಚ್‌ಐವಿ ಸೋಂಕಿನ ಅಪಾಯದಂಚಿನಲ್ಲಿರುವ ಸಮುದಾಯಗಳಿಗೆ ಎಚ್‌ಐವಿ ತಡೆಗಟ್ಟುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ಒಟ್ಟು (1,34,025 ಲೈಂಗಿಕ ಕಾರ‌್ಯಕರ್ತೆಯರನ್ನು, 62,939 ಲೈಂಗಿಕ ಅಲ್ಪಸಂಖ್ಯಾತರನ್ನು 12,656 ಲಿಂಗತ್ವ ಅಲ್ಪಸಂಖ್ಯಾತರನ್ನು (ಟ್ರಾನ್ಸ್ ಜಿಂಡರ್ಸ್), ಮತ್ತು 3,367 ಮಾದಕ ವ್ಯಸನಿಗಳಿಗಾಗಿ ಕೋಲಾರ ಮತ್ತು ಬೆಂಗಳೂರಿನಲ್ಲಿ ಗುರಿ ನಿರ್ಧಾರಿತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಜತೆಗೆ ಎರಡು ಒಎಸ್‌ಟಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗೆಯೇ ಯಾದಗಿರಿ, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ತಲಾ ಒಂದರಂತೆ ಮೂರು ಒನ್ ಸ್ಟಾಪ್ ಸೆಂಟರ್ ತೆರೆಯಲಾಗಿದೆ.