ಡಿ.ವಿ.ಗುಂಡಪ್ಪ 
ರಾಜ್ಯ

ಬದುಕು ಅನುಭವದಿಂದ ಮಾಗಿದಾಗ ಅರಿಷಡ್ವರ್ಗಗಳು ದೂರ

ಪಾಕದಿಂ ಮತಿಶುದ್ದಿಯದರಿನೊಳದೃಷ್ಟಿ||

ಸಾಕಲ್ಯದಾತ್ಮ ಸಂದರ್ಶನಕೆ ಕರಣವದು|

ಲೋಕದಿಂ ನಿಲೋಕ-ಮಂಕುತಿಮ್ಮ||620||

ಲೋಕ ಜೀವನದಿಂದ ಮನಸ್ಸು ಪರಿಪಾಕ ಹೊಂದುತ್ತದೆ. ಇದರಿಂದಲೇ ಮತಿಯ ಶುದ್ಧಿ. ಇದರಿಂದಾಗಿ ಒಳನೋಟವು ಲಭ್ಯ. ಪರಿಪೂರ್ಣವಾದ ಆತ್ಮ ಸಂದರ್ಶನಕ್ಕೆ ಇದುವೇ ಮಾಧ್ಯಮವಾಗಿದೆ. ಹಾಗಾಗಿ ಲೋಕದ ಮೂಲಕವೇ ನಿಲೋಕವನ್ನು ಹೊಂದಬೇಕು ಎನ್ನುತ್ತದೆ ಈ ಕಗ್ಗ.

ಸದಾ ಬದಲಾಗುವ ಜಗತ್ತು. ಅದರಲ್ಲಿ ಪರಸ್ಪರ ಬೆರೆತು ಬಾಳಬೇಕಾದ ಜನರು. ಅವರೆಲ್ಲರದ್ದೂ ವಿಭಿನ್ನ ಗುಣ-ಸ್ವಭಾವ, ಜೀವನ ದೃಷ್ಟಿ. ಒಬ್ಬರಂತೆ ಇನ್ನೊಬ್ಬರಿಲ್ಲದ ಸ್ಥಿತಿ. ಎಲ್ಲರ ನಡುವೆ ಐಕ್ಯಮತ್ಯವುಂಟಾಗಲು ಹಲವರ ತ್ಯಾಗ ಮತ್ತು ಹೊಂದಾಣಿಕೆಯ ಗುಣವು ಕಾರಣವಾಗಿರುತ್ತದೆ. ಪರಸ್ಪರ ಘರ್ಷಣೆ, ಮೇಲಾಟ, ಖಿನ್ನತೆ, ನೋವುಗಳು ಸರ್ವೆಸಾಮಾನ್ಯ. ಹಾಗೆಯೇ ಪ್ರೀತಿ-ಸ್ನೇಹ, ನಲಿವು-ಒಲವು, ಸುಖ-ಸಂತೋಷಗಳೂ ಬಹಳಷ್ಟಿವೆ. ಅಡುಗೆ ಮನೆಯಲ್ಲಿ ವಿವಿಧ ರುಚಿಗಳು ಒಟ್ಟು ಸೇರಿದರೆ ಸ್ವಾದಿಷ್ಟವಾದ ಭೋಜನವು ಸಿದ್ಧವಾಗುವಂತೆಯೇ ಬದುಕೆಂಬ ಅಡುಗೆ ಮನೆಯಲ್ಲಿ ವಿವಿಧ ಭಾವಗಳ ಸಮ್ಮೇಳನವು ನಡೆಯುತ್ತದೆ. ಮನಸ್ಸು ಹಲವು ಅನುಭವಗಳಿಗೆ ಒಳಪಡುತ್ತಾ ಅರಿವಿನತ್ತ ವಿಸ್ತರಿಸಿಕೊಳ್ಳುತ್ತದೆ.

ಜಗತ್ತು ಹೀಗೆ ವೈವಿಧ್ಯಮಯವಾಗಿರಲು, ಬದುಕು ಏರಿಳಿತ ಗಳಿಂದ ಕೂಡಿರಲು ಸತ್ತ್ವ,ರಜೋ ಮತ್ತು ತಮೋ ಗುಣಗಳು ಅಸಮವಾಗಿ ಬೆರೆತಿರುವುದೆ ಕಾರಣ. ವ್ಯಕ್ತಿಯು ತನ್ನದೇ ಮನಸ್ಸಿನ ಗುಲಾಮ. ಅವನ ಯೋಚನೆ, ಮಾತು, ಕೃತಿಗಳ ನಡುವೆ ತಾಳಮೇಳವಿರುವುದಿಲ್ಲ. ಆದರೆ ಎಲ್ಲರದ್ದೂ ಪರಸ್ಪರ ಸಂಬಂಧಿಸಿರುವ ಜೀವನ. ಇಲ್ಲಿ ಯಾರೂ ಪ್ರತ್ಯೇಕವಾಗಿರಲು ಸಾಧ್ಯವೇ ಇಲ್ಲ. ಜಗತ್ತು ಒಂದು ಸಂದರವಾದ ಚಿತ್ರ. ಅಲ್ಲಿರುವ ಪ್ರತಿ ಗೆರೆ, ಬಿಂದು, ಬಣ್ಣವೂ ಪೂರ್ತಿ ಚಿತ್ರದ ಭಾಗ. ಬೇರೆಯಾಗಿ ಉಳಿದರೆ ಅಸ್ತಿತ್ವವಿಲ್ಲ. ಸಾಮಾಜಿಕವಾಗಿ ಬೆರೆತು ಬಾಳುವ ಸಂದರ್ಭದಲ್ಲಿ ಕುಟುಂಬ, ಉದ್ಯೋಗ, ಜೀವನಾದರ್ಶಗಳಿಗಾಗಿ ಬದುಕುವುದು ಸರ್ವೆಸಾಮಾನ್ಯ. ಇದನ್ನು ನಿರಾಕರಿಸಿದರೆ, ತಿರಸ್ಕಾರದಿಂದ ನೋಡಿದರೆ ಪಲಾಯನವಾದವಾಗುತ್ತದೆ. ಈಸಬೇಕು ಇದ್ದು ಜಯಿಸಬೇಕು ಎನ್ನುವುದು ಬದುಕಿನ ಧ್ಯೇಯವಾಗಿದ್ದರೆ ವ್ಯಕ್ತಿಯು ಸದಾ ಜೀವನ್ಮುಖಿಯಾಗಿರುತ್ತಾನೆ.

ಜೀವನವೆಂದರೆ ಹೋರಾಟ. ಒಳಿತಿಗಾಗಿ, ಜೀವನ ಸಮೃದ್ಧಿಗಾಗಿ ಮಾಡುವ ಸತತ ಪ್ರಯತ್ನ. ಕಬ್ಬಿಣವು ಬಿಸಿಯಾದಾಗಲೇ ಆಕಾರವನ್ನು ಪಡೆಯುತ್ತದೆ. ಹಲವು ಪೆಟ್ಟುಗಳನ್ನು ಪಡೆದು ಶಿಲೆಯು ಶಿಲ್ಪವಾಗುತ್ತದೆ. ಅಂತೆಯೇ ಬದುಕಿನ ಕಷ್ಟ-ನಷ್ಟ, ನೋವು-ಅವಮಾನಗಳು ವ್ಯಕ್ತಿಯನ್ನು ಹದಗೊಳಿಸುತ್ತದೆ.

ಮಡಿಲ ಮಗುವನ್ನು ಪ್ರೀತಿ-ಕಾಳಜಿಯಿಂದ ಸಾಕಿ ಸಲಹಿದ ಹೆತ್ತವರಲ್ಲಿ ಸಹಜವಾಗಿಯೇ ತನ್ನದೆನ್ನುವ ಮೋಹವಿರುತ್ತದೆ. ತಮ್ಮ ಸುಖ-ಸಂತೋಷಗಳನ್ನು ಒಂದಿನಿತೂ ನೋಡದೆ ಸದಾ ಮಕ್ಕಳ ಏಳಿಗೆಗಾಗಿ ದುಡಿಯುತ್ತಾರೆ. ಅದೇ , ಮಕ್ಕಳು ಬೆಳೆದ ಮೇಲೆ ಹೆತ್ತವರನ್ನು ನಿಕೃಷ್ಟವಾಗಿ ನಡೆಸಿಕೊಂಡರೆ ಇನ್ನಿಲ್ಲದಷ್ಟು ದುಃಖಿಸುತ್ತಾರೆ. ತಾವು ತಪ್ಪಿದ್ದೆಲ್ಲಿ ಎಂದು ಚಿಂತಿಸುತ್ತಾರೆ. ಈ ಒಳನೋಟದಿಂದಾಗಿ ಮೋಹದೆಳೆಯು ಕಡಿಯುತ್ತದೆ. ನಿರ್ಲೀಪ್ತತೆ ಮೂಡುತ್ತದೆ. ಅಸಹನೀಯ ನೋವಿಗೆ ಒಳಗಾದ ವ್ಯಕ್ತಿಯ ಮನದಲ್ಲಿ ಸರಿಯಾದ ಮಥನವು ನಡೆದರೆ ಅವನು ಮುಕ್ತನಾಗುತ್ತಾನೆ. ಬದುಕಿನ ಪ್ರತಿಯೊಂದು ಪ್ರತಿಕೂಲ ಪರಿಸ್ಥಿತಿಗಳು ಕೂಡಾ ಅನುಭವದ ಪಾಠವನ್ನು ಹೇಳುತ್ತವೆ. ವ್ಯಕ್ತಿಯನ್ನು ಸ್ವಯಂವಿಶ್ಲೇಷಣೆಗೆ ಹಚ್ಚಿ ತನ್ನ ದೌರ್ಬಲ್ಯವನ್ನು ಕಳಚಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಪ್ರೀತಿ,ಕರುಣೆಗಳಂಥ ಮಾನವೀಯ ಭಾವನೆಗಳು, ಅನುಭವಗಳು ಮನುಷ್ಯನನ್ನು ಸಹೃದಯನನ್ನಾಗಿಸುತ್ತದೆ. ಒರಟು ಮನಸ್ಸಿನಲ್ಲಿ ಮಾರ್ದವತೆಯು ಚಿಗುರೊಡೆದು ಆನಂದವನ್ನು ಪಸರಿಸುತ್ತಾನೆ. ಹೀಗೆ ಲೋಕ ಜೀವನದಿಂದ ಭಾವ ಶುದ್ಧಿ, ಮತಿಶುದ್ಧಿ. ತನ್ಮೂಲಕ ತನ್ನೊಳಗನ್ನು ಕಾಣುವ ಹಂಬಲ. ಒಳನೋಟವಿರುವವನು, ಆತ್ಮೋನ್ನತಿಗಾಗಿ ಸದಾ ಪ್ರಯತ್ನಿಸುತ್ತಾನೆ.

ಬದುಕು ಹೀಗೆ ಅನುಭವದಿಂದ ಮಾಗಿದಾಗ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರುಬಗೆಯ ಹಗೆಗಳು ದೂರವಾಗುತ್ತವೆ. ಅಸಮವಾಗಿ ತುಡಿಯುವ ತ್ರಿಗುಣಗಳಲ್ಲಿ ಸಾತ್ತಿ್ವಕತೆಯು ಬಲಗೊಳ್ಳುತ್ತದೆ. ಅವ್ಯಕ್ತವಾದ ಶಕ್ತಿಯ ಅನುಭವವನ್ನು ಪಡೆಯುವುದಕ್ಕೆ ವ್ಯಕ್ತಿಯು ಅರ್ಹನಾಗುತ್ತಾ ಸಾಗುತ್ತಾನೆ. ಲೋಕ ಜೀವನದ ಉದ್ದೇಶ ಸಮೃದ್ಧವಾಗಿ ಬಾಳುವುದು. ಅಧಿಕಾರ, ಸಂಪತ್ತು, ಕೀರ್ತಿ ಯಾವುದೂ ಶಾಶ್ವತವಲ್ಲ. ಶಾಶ್ವತವಾದ ಆತ್ಮಾನಂದವನ್ನು ಹೊಂದಲು ಲೋಕ ಜೀವನವು ಮಾಧ್ಯಮವಾಗಿದೆ. ಲೌಕಿಕದ ಪ್ರಗತಿಯನ್ನು ಧರ್ಮಮಾರ್ಗದಲ್ಲಿ ಪಡೆಯಲು ಪ್ರಯತ್ನಿಸಬೇಕು.

ಸಂಪತ್ತು ಮತ್ತು ಕಾಮನೆಗಳನ್ನು ಸ್ವಾರ್ಥಸಾಧನೆಗಾಗಿ ಪಡೆಯದೆ, ಮೀಸಲಿಡದೆ ಸವೋದಯಕ್ಕಾಗಿಯೂ ಶ್ರಮಿಸಬೇಕು. ಹೀಗೆ ಬದುಕನ್ನು ಗಂಧದ ಕೊರಡಿನಂತೆ ತೇಯುತ್ತಾ ಮುನ್ನಡೆದರೆ ನಿಮುಕ್ತಿ. ಲೋಕ ಜೀವನದ ದಾರಿಯಲ್ಲಿ ಅನುಭವದರಿವನ್ನು ಪಡೆಯುತ್ತಾ ಸಾಗಿದರೆ ನಿಲೋಕ. ಜೀವೋತ್ಕರ್ಷ. ಹಾಗಾಗಿ ಲೌಕಿಕವನ್ನು ತಿರಸ್ಕರಿಸದೆ ಅದು ನೀಡುವ ಪಾಠಗಳನ್ನು ವಿಧೇಯ ವಿದ್ಯಾರ್ಥಿಯಂತೆ ಮನನ ಮಾಡುತ್ತಾ ಪರಿಪಕ್ವತೆಯನ್ನು ಪಡೆದಾಗ ಪರಿಪೂರ್ಣತೆಯ ಅನುಭವವಾಗಲು ಸಾಧ್ಯ.

-(ಲೇಖಕರು ಉಪನ್ಯಾಸಕರು, ಕವಿಯಿತ್ರಿ)