ರಮೇಶ ಜಿಗಜಿಣಗಿ, ಸಂಸದ 
ರಾಜ್ಯ

ಕೇಂದ್ರ ಸರ್ಕಾರಕ್ಕೆ ಪತ್ರ ರಾಜ್ಯದ್ದೇನು ಪಾತ್ರ? ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು

ಪ್ರಮುಖ ಮುಖ್ಯಾಂಶಗಳು

  • ಬರ ಪರಿಹಾರಕ್ಕೆ ಮನವಿ ವಿಚಾರಕ್ಕೆ ಪ್ರತಿಕ್ರಿಯೆ
  • ರಾಜ್ಯ ಸರ್ಕಾರ ಕೂಡಲೇ ಸಮೀಕ್ಷೆ ನಡೆಸಲಿ
  • ಬರ ಘೋಷಿಸಿ ಪರಿಹಾರ ನಿಗದಿ ಮಾಡಲಿ
  • ಸಚಿವರು ರಾಜ್ಯಾದ್ಯಂತ ಪ್ರವಾಸ ನಡೆಸಲಿ
ವಿಜಯಪುರ: ‘ರಾಜ್ಯದಲ್ಲಿ ಬರ, ಪ್ರವಾಹ ಮತ್ತಿತರ ವಿಪತ್ತು ಎದುರಾದಾಗ ತ್ವರಿತ ಪರಿಹಾರ ನೀಡದೇ ಕೇಂದ್ರದತ್ತ ಬೊಟ್ಟು ಮಾಡುವ ಚಾಳಿ ಬಿಡಬೇಕು. ಎಲ್ಲವೂ ಕೇಂದ್ರ ಸರ್ಕಾರವೇ ಮಾಡುವುದಾದರೆ ರಾಜ್ಯ ಸರ್ಕಾರದ ಪಾತ್ರವೇನು?’ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿ ಕಾರಿದ್ದಾರೆ.
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿಕೆ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆಗೆ ಗುರುವಾರ ತಿರುಗೇಟು ನೀಡಿರುವ ಅವರು, ‘ಬರ ಘೋಷಣೆಯಾಗದೆ, ಸಮೀಕ್ಷೆ ನಡೆಸದೇ, ವರದಿ ಸಲ್ಲಿಸದೇ ಪರಿಹಾರಕ್ಕಾಗಿ ಪತ್ರ ಬರೆಯುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದ’ ಎಂದಿದ್ದಾರೆ.
‘ಬರಪರಿಹಾರಕ್ಕಾಗಿ ಈಗ ಕೇಂದ್ರಕ್ಕೆ ಪತ್ರ ಬರೆಯುವ ಕುರಿತು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು, ಮೊದಲು ತಮ್ಮ ಜವಾಬ್ದಾರಿ ಏನು ಅಂತ ಯೋಚಿಸಬೇಕು?’ ಎಂದಿದ್ದಾರೆ.
‘ಬರ ಪರಿಸ್ಥಿತಿ ನಿಭಾಯಿಸುವುದು, ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವುದು ಮತ್ತು ರೈತರಿಗೆ ತಕ್ಷಣದ ನೆರವು ನೀಡುವುದು, ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿ. ಆದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರತಿ ಬಾರಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಜಿಗಜಿಣಗಿ ಆರೋಪಿಸಿದ್ದಾರೆ.
‘ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರ ತನ್ನ ಎಸ್‌ಡಿಆರ್‌ಎಫ್ ನಿಧಿಯಿಂದ ಮೊದಲು ಪರಿಹಾರ ನೀಡಬೇಕು. ನಂತರ ಕೇಂದ್ರದಿಂದ ಹೆಚ್ಚುವರಿ ನೆರವು ಕೇಳಬೇಕು. ಆದರೆ ಇಲ್ಲಿ ರಾಜ್ಯ ಸರ್ಕಾರ ಯಾವುದೇ ಕೆಲಸ ಮಾಡದೇ ನೇರವಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸ’ ಎಂದು ಅವರು ಹರಿಹಾಯ್ದಿದ್ದಾರೆ.

ರೈತರ ಪರವಾಗಿ ಒತ್ತಡ ಹೇರುತ್ತೇನೆ

‘ಕೇಂದ್ರ ಸರ್ಕಾರವು ಬರಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ರಾಜ್ಯ ಸರ್ಕಾರ ಸರಿಯಾದ ಪ್ರಸ್ತಾವನೆ ಮತ್ತು ಅಂಕಿ-ಅಂಶಗಳೊಂದಿಗೆ ಬೇಡಿಕೆ ಸಲ್ಲಿಸಿದರೆ ಕೇಂದ್ರ ತಕ್ಷಣ ಸ್ಪಂದಿಸುತ್ತದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
‘ನಾನು ಸಂಸದನಾಗಿ ರೈತರ ಪರವಾಗಿ ಕೇಂದ್ರದ ಮೇಲೆ ಒತ್ತಡ ಹೇರುತ್ತೇನೆ. ಆದರೆ ರಾಜ್ಯ ಸರ್ಕಾರವೂ ತನ್ನ ಕೈಲಾದ ಕೆಲಸವನ್ನು ಮಾಡಬೇಕು. ಎರಡೂ ಸರ್ಕಾರಗಳು ಜಂಟಿಯಾಗಿ ಕೆಲಸ ಮಾಡಿದಾಗ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ. ಹಾಗಂತ ಎಲ್ಲ ಹೊರೆಯನ್ನು ಕೇಂದ್ರದ ಮೇಲೆಯೇ ಹೇರುವುದು ಯಾವ ನ್ಯಾಯ’ ಎಂದು ಜಿಗಜಿಣಗಿ ಪ್ರಶ್ನಿಸಿದ್ದಾರೆ.
‘ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ಬರ ಘೋಷಿಸಿ, ರೈತರಿಗೆ ತಕ್ಷಣದ ಪರಿಹಾರವೂ ಘೋಷಿಸಬೇಕು. ಕುಡಿಯುವ ನೀರು, ಜಾನುವಾರುವಿಗೆ ಮೇವು, ಗುಳೆ ತಡೆಗೆ ಉದ್ಯೋಗ ಸೃಷ್ಠಿ, ಕೆರೆಗಳಿಗೆ ನೀರು ತುಂಬಿಸುವುದು....ಮತ್ತಿತರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.