Karnataka Budget 2026-27 | ಸಾರಿಗೆ ನೌಕರರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು..?
Karnataka Budget 2026-27: ರಾಜ್ಯದ ಆರ್ಥಿಕತೆಯ ಜೀವನಾಡಿಯಾಗಿರುವ ಸಾರಿಗೆ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಅನೇಕ ಕೊಡುಗೆಗಳನ್ನು ನೀಡಿದ್ದು, ಜನಸಾಮಾನ್ಯರ ಪ್ರಯಾಣವನ್ನು ಸುಗಮಗೊಳಿಸುವ ಜೊತೆಗೆ, ನಿರುದ್ಯೋಗಿ ಯುವಜನತೆಗೆ ಉದ್ಯೋಗದ ಬಾಗಿಲು ತೆರೆಯುವ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಸರ್ಕಾರ ಮುಂದಾಗಿದೆ.
ಮಹಿಳಾ ಸಬಲೀಕರಣದ ಸದುದ್ದೇಶದಿಂದ ಜಾರಿಗೆ ತರಲಾಗಿರುವ ಸರ್ಕಾರದ ಶಕ್ತಿ ಯೋಜನೆಯಡಿ ಪ್ರಯೋಜನ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇದುವರೆಗೆ 684 ಕೋಟಿ ಟ್ರಿಪ್ಗಳಲ್ಲಿ ಮಹಿಳಾ ಫಲಾನುಭವಿಗಳು ಪ್ರಯಾಣ ಸೌಲಭ್ಯ ಪಡೆದಿರುತ್ತಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ 2026-27ನೇ ಸಾಲಿಗೆ 5,300 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಹಿಂದಿನ ಸರ್ಕಾರ ದಿನಾಂಕ: 01.03.2023 ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಿದ್ದು, ಅದಕ್ಕೂ ಮೊದಲಿನ ಅವಧಿಯ ವೇತನ ಪರಿಷ್ಕರಣೆಯ ವ್ಯತ್ಯಾಸದ ಮೊತ್ತವನ್ನು ಪಾವತಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಸದರಿ ಅವಧಿಯ ವೇತನ ಪರಿಷ್ಕರಣೆ ಬಾಕಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ದಿನಾಂಕ: 01.01.2021 ರಿಂದ 28.02.2023 ರವರೆಗಿನ ವೇತನ ಬಾಕಿಯನ್ನು ಪಾವತಿಸಲು ಹಾಗೂ ದಿನಾಂಕ: 01.04.2025 ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಲು ನಮ್ಮ ಸರ್ಕಾರ ನಿಶ್ಚಯಿಸಿರುತ್ತದೆ. ವೇತನ ಬಾಕಿ ಪಾವತಿಗಾಗಿ 1,271 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಉತ್ತಮಪಡಿಸಲು 2025-26ನೇ ಸಾಲಿನಲ್ಲಿ ಘೋಷಿಸಿದ 2,000 ಡೀಸೆಲ್ ಬಸ್ಸುಗಳನ್ನು ನೇರ ಖರೀದಿ ಮೂಲಕ ಒದಗಿಸಲು ಈಗಾಗಲೇ ಕ್ರಮವಹಿಸಲಾಗಿರುತ್ತದೆ. ಇದೂ ಸೇರಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6,596 ಸಂಖ್ಯೆಯ ಬಸ್ಸುಗಳನ್ನು ನಿಗಮಗಳಿಗೆ ಒದಗಿಸಲಾಗಿರುತ್ತದೆ. 2026-27ನೇ ಸಾಲಿನಲ್ಲಿ 1,000 ಡೀಸೆಲ್ ಬಸ್ಸುಗಳನ್ನು ಒದಗಿಸಲಾಗುವುದು.
ವಿಶ್ವಬ್ಯಾಂಕ್ ನೆರವಿನೊಂದಿಗೆ 2,000 ಕೋಟಿ ರೂ.ಗಳ ಮೊತ್ತದ Karnataka Electric Bus Program (KEBP) ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದರಡಿ BMTC ಸಂಸ್ಥೆಯ 32 ಹಾಗೂ ಇತರೆ ರಸ್ತೆ ಸಾರಿಗೆ ನಿಗಮಗಳ 62 ಎಲೆಕ್ಟ್ರಿಕ್ ಬಸ್ ಡಿಪೋಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ 4,000 ವಿದ್ಯುತ್ ಚಾಲಿತ ಬಸ್ಸುಗಳನ್ನು ಒದಗಿಸಲಾಗುವುದು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಅಪಘಾತ ಸ್ಥಳಗಳನ್ನು (Accident Black Spots) ಗುರುತಿಸಲು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಐ.ಐ.ಟಿ. ಮದ್ರಾಸ್ ಮತ್ತು ಎನ್.ಐ.ಸಿ. ರವರ ಸಹಯೋಗದೊಂದಿಗೆ ಡ್ಯಾಶ್ ಬೋರ್ಡ್ ಒಳಗೊಂಡ ಆಧುನಿಕ ತಂತ್ರಾಂಶವನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
483. ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ 25 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಡ್ರೈವಿಂಗ್ ಟ್ರ್ಯಾಕ್ಗಳು ಹಾಗೂ ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್ ಕಟ್ಟಡಗಳ ಮೇಲ್ಛಾವಣಿಯಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ರೂಫ್ ಟಾಪ್ ಸೋಲಾರ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು.
ತುಮಕೂರಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಸೀಜಿಂಗ್ ಯಾರ್ಡ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
ರಾಮದುರ್ಗ, ಹೊನ್ನಾಳಿ ಮತ್ತು ಗದಗದಲ್ಲಿ ನೂತನ ಬಸ್ಸು ನಿಲ್ದಾಣಗಳನ್ನು ಹಾಗೂ ತರೀಕೆರೆಯಲ್ಲಿ ಬಸ್ಸು ಡಿಪೋ ನಿರ್ಮಿಸಲಾಗುವುದು.
ಸಿಎಂ ದಾಖಲೆ ಬಜೆಟ್
ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ. ಸುಮಾರು 4.48 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.