ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ಗೆ (Actor Darshan) ಭಾರಿ ಸಂಕಷ್ಟ ಎದುರಾಗಿದೆ. ತಮ್ಮದೇ ಗ್ಯಾಂಗ್ನಲ್ಲಿದ್ದ ಎ14 ಆರೋಪಿಯಾಗಿದ್ದ ಪ್ರದೋಶ್ ಇದೀಗ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ದರ್ಶನ್ಗೆ ನುಂಗಲಾಗದ ತುತ್ತಾಗಿದೆ. ಈ ಹೈಪ್ರೊಫೈಲ್ ಪ್ರಕರಣದಲ್ಲಿ ಕಾನೂನು ಕ್ಷಮೆ ಪಡೆದು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪ್ರದೋಶ್ ನ್ಯಾಯಾಲಯಕ್ಕೆ ಅಪ್ರೂವರ್ ಆದ ಬೆನ್ನಲ್ಲೇ ಕೋರ್ಟ್ ಆತನ ಹೇಳಿಕೆಯನ್ನು ದಾಖಲಿಸಲು ಆರಂಭಿಸಿದೆ.
ಇಂದು ನಡೆದ ವಿಚಾರಣೆ ವೇಳೆ ಪ್ರದೋಶ್ ನ್ಯಾಯಾಲಯದ ಮುಂದೆ ಪ್ರತ್ಯಕ್ಷದರ್ಶಿಯಾಗಿ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅವುಗಳು ಏನೆಂದರೆ, 2024ರ ಜೂನ್ 8ರಂದು ದರ್ಶನ್ ಜತೆಗೆ ನಾನು ಪಾರ್ಟಿಗೆ ಹೋಗಿದ್ದೆ ಎಂದು ಪ್ರದೋಷ್ ಹೇಳಿದರು.
ಪಾರ್ಟಿಯಲ್ಲಿ ನಟ ಯಶಸ್ ಸೂರ್ಯ ಮತ್ತು ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ, ಪ್ರಕರಣದ ಮೂರನೇ ಆರೋಪಿ ಪವನ್ ಬಂದು ಪವಿತ್ರಾಗೆ ರೇಣುಕಸ್ವಾಮಿ ಕಿರುಕುಳ ನೀಡಿದ್ದ ವಿಚಾರವನ್ನು ತಿಳಿಸಿದ. ಆಗ ದರ್ಶನ್, ಪವಿತ್ರಾಳಿಗೆ ವಿಡಿಯೋ ಕರೆ ಮಾಡಿ, ನೀನು ಅಳಬೇಡ, ನನಗೆ ಏನು ಮಾಡಬೇಕು ಗೊತ್ತಿದೆ ಎಂದು ಹೇಳಿದ್ದಾಗಿ ಪ್ರದೋಶ್ ನ್ಯಾಯಾಲಯದ ಮುಂದೆ ತಿಳಿಸಿದರು.
ಪಟ್ಟಣಗೆರೆ ಶೆಡ್ಗೆ ಹೋದ ದರ್ಶನ್, ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡಿದ. ಇದೇ ವೇಳೆ, ಪವಿತ್ರಾ ಚಪ್ಪಲಿಯಿಂದ ರೇಣುಕಸ್ವಾಮಿಗೆ ಹೊಡೆದಳು. ಅಶ್ಲೀಲ ಮೆಸೆಜ್ ಮಾಡಿದ್ದ ಬೆರಳಿಗೆ ರಕ್ತ ಬರುವಂತೆ ಆರೋಪಿಗಳಾದ ಪವನ್ ಮತ್ತು ನಂದೀಶ್ ಹಲ್ಲೆ ಮಾಡಿದರು ಎಂದು ಪ್ರದೋಶ್ ಕೋರ್ಟ್ ಮುಂದೆ ಹೇಳಿದರು.
ಈ ವಿಚಾರಣೆಯ ವೇಳೆ ಸರ್ಕಾರ ಪರ ವಕೀಲರು ಕೋರ್ಟ್ಗೆ ಪ್ರದೋಶ್ ಹೇಳಿಕೆಯನ್ನು ನಾಳೆಗೆ ಮುಂದೂಡುವಂತೆ ಕೇಳಿಕೊಂಡ ಹಿನ್ನೆಲೆ ನ್ಯಾಯಾಲಯ ನಾಳೆ ಬೆಳಗ್ಗೆ 11 ಗಂಟೆಗೆ ಮತ್ತೇ ಮಾಫಿ ಸಾಕ್ಷಿ ವಿಚಾರಣೆಯನ್ನು ಮುಂದುವರಿಸುವುದಾಗಿ ತಿಳಿಸಿದೆ.