ಸಾಂದರ್ಭಿಕ ಚಿತ್ರ  
ರಾಜ್ಯ

ವಾತವ್ಯಾಧಿಗಳು ಬರಲು ಕಾರಣವಾಗುವ ಅಂಶಗಳು ಏನೇನು?

ವಾತದಿಂದ ಜನಿತವಾದ ಅಸಾಧಾರಣ ವ್ಯಾಧಿಗಳೇ ವಾತವ್ಯಾಧಿಗಳು. ಈ ಎಲ್ಲಾ ವಾತವ್ಯಾಧಿಗಳಿಗೆ ಕೆಲವೊಂದಿಷ್ಟು ಮೂಲಕಾರಣಗಳಿವೆೆ. ಅತಿಯಾಗಿ ಒಣ ಆಹಾರ ಸೇವಿಸುವುದು. ಇಂದು ಕಾಣುವ ಜಂಕ್ ಫುಡ್ ಇದೇ ಸಾಲಿಗೆ ಸೇರುತ್ತವೆ. ಅತಿಯಾದ ಒಣ ಹವೆ, ತುಂಬಾ ಶೀತಲ ಆಹಾರ ಸೇವನೆ. ಮುಟ್ಟಲು ತಣ್ಣಗಿರುವ ಆಹಾರ ಮಾತ್ರವಲ್ಲ, ಅತಿ ಶೀತಲ ಗುಣ ಹೊಂದಿರುವ ಆಹಾರ ಪದಾರ್ಥಗಳೂ ಇದರಲ್ಲಿ ಸೇರಿವೆ. ಆಹಾರ ಸಂಗ್ರಹಿಸಿಡಲು ಶೀತಲೀಕರಣ ಯಂತ್ರದ ಬಳಕೆಯೂ ರೋಗಕ್ಕೆ ಕಾರಣವೆಂಬುದು ಸ್ಪಷ್ಟ. ಅತಿಶೀತ ಬಾಹ್ಯ ವಾತಾವರಣದಲ್ಲಿ ಇರುವುದು, ಹವಾನಿಯಂತ್ರಿತ ಕೊಠಡಿಗಳಲ್ಲಿ ಬಹಳ ಸಮಯ ಕಳೆಯುವುದು, ಬಲವಾಗಿ ಬೀಸುತ್ತಿರುವ ಗಾಳಿಗೆ ಮೈಯೊಡ್ಡುವುದು ಕಾಯಿಲೆಗೆ ಎಡೆಮಾಡಿಕೊಡುತ್ತದೆ. ದೇಹ ತೂಕ ಇಳಿಸಲೆಂದೋ, ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡೋ ಪುಟ್ಟ ಪಕ್ಷಿಗಳು ತಿನ್ನುವಷ್ಟು ಆಹಾರ ತಿಂದರೆ ಮನುಷ್ಯ ದೇಹಕ್ಕೆ ಎಲ್ಲಿ ಸಾಕಾಗುತ್ತದೆ? ಅಲ್ಪ ಭೋಜನವು ದೇಹದಲ್ಲಿ ವಾತವೃದ್ಧಿ ಮಾಡುತ್ತಾ ಹೋಗುತ್ತದೆ. ಋತುಕಾಲಕ್ಕೆ ಸರಿಯಾಗಿ ಲೈಂಗಿಕಕ್ರಿಯೆ ಎಷ್ಟು ಪ್ರಮಾಣದಲ್ಲಿ ಇರಬೇಕೆಂಬುದನ್ನು ಕೂಡ ಆಯುರ್ವೆದ ತಿಳಿಹೇಳಿದೆ. ಅದು ಮಿತಿಮೀರಿ ಅತಿಯಾದರೂ ವಾತ ಹೆಚ್ಚಾಗುತ್ತದೆ. ರಕ್ತದಾನ ಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಅತಿಯಾಗಿ, ಮಧ್ಯೆ ಸರಿಯಾಗಿ ಅಂತರ ಬಿಡದೇ ರಕ್ತದಾನ ಮಾಡಿದರೂ ವಾತವೃದ್ಧಿಯಾಗುತ್ತದೆ. ಅತಿ ಲಂಘನ ಅಂದರೆ ವಾರದ ನಾಲ್ಕುದಿನ ಬೇರೆಬೇರೆ ವ್ರತಗಳ ಹೆಸರು ಹೇಳಿಕೊಂಡು ದೇಹ ತೆಳ್ಳಗಾಗಿಸಲು ಆಹಾರ ಸೇವಿಸದೇ ಇರುವುದು, ರೋಗಗಳ ಸರಿಯಾದ ನಿರ್ವಹಣೆ ಮಾಡದಿರುವುದೂ ಅನೇಕ ಸಂದರ್ಭಗಳಲ್ಲಿ ಶರೀರವನ್ನು ವಾತವ್ಯಾಧಿಗಳತ್ತ ತಳ್ಳುತ್ತದೆ. ಅತಿಯಾಗಿ ಈಜುವುದು, ನಡೆಯುವುದು, ವ್ಯಾಯಾಮ ಮಾಡುವುದು ಹಾಗೂ ದೈಹಿಕ ಶ್ರಮದಾಯಕ ಕೆಲಸ ಮಾಡುವುದು- ಇವೆಲ್ಲವುಗಳಿಗೂ ಮಿತಿಯೆಂಬುದಿದೆ. ಸರಿಯಾದ ತಿಳಿವಳಿಕೆಯಿಲ್ಲದೆ ಮಾಡಿದರೆ ಕೊನೆಯಲ್ಲಿ ಆಗುವುದು ವಾತವ್ಯಾಧಿ ಪ್ರಾಪ್ತಿ! ದೇಹದ ಧಾತುಗಳು ಕ್ಷೀಣವಾಗುವಂತಹ ಚಟುವಟಿಕೆಗಳು ಈ ರೋಗಕಾರಕಗಳೇ. ಅನಗತ್ಯವಾಗಿ ಅತಿಯಾಗಿ ಆಲೋಚಿಸುವುದು, ಅತಿಯಾದ ಚಿಂತೆ, ದೇಹ ಕ್ಷೀಣತೆ ಮಾಡುವ ಇತರ ಕಾಯಿಲೆಗಳಿಂದಲೂ ವಾತವ್ಯಾಧಿ ಬರಬಹುದು. ಹಗಲು ನಿದ್ರಿಸಿ ಜಠರದಲ್ಲಿ ಆಮವಿಷ ಉತ್ಪತ್ತಿಯಾದರೆ ಅದು ಸಂತರ್ಪಣಜನ್ಯ ಕಾರಣವಾಗಿ ಪರಿಣಮಿಸುತ್ತದೆ. ಅಹಿತಕರ ಆಸನದಲ್ಲಿ ಕುಳಿತುಕೊಳ್ಳು ವುದು, ನಿದ್ರಿಸುವ ಭಂಗಿ ಸರಿಯಿಲ್ಲದಿರುವುದು, ಅನಿಯಂತ್ರಿತ ಕೋಪ, ಅನಗತ್ಯವಾಗಿ ಭಯಪಡುವುದು, ಶರೀರದ ಬಹುಮುಖ್ಯ ಅಂಗಗಳಾದ ಮರ್ಮಗಳಿಗೆ ಆಘಾತವಾಗುವುದು, ಎತ್ತರದಿಂದ ಬೀಳುವುದರಿಂದ ವಾತಸಂಬಂಧೀ ಕಾಯಿಲೆಗಳಿಗೆ ತುತ್ತಾಗಬಹುದು. ಶರೀರಕ್ಕೆ ಹೆಚ್ಚಿನ ಶ್ರಮ ಉಂಟುಮಾಡುವ ರೀತಿಯ ದೀರ್ಘಪ್ರಯಾಣ ಮಾಡಿದರೆ ಸುಸ್ತಾಗಿ ವಾತವೃದ್ಧಿಯ ಲಕ್ಷಣಗಳು ಎಲ್ಲರಿಗೂ ಸ್ವತಃ ಅನುಭವವಾಗುತ್ತದೆ. ಇವೆಲ್ಲಾ ಕಾರಣಗಳನ್ನು ನಿಗ್ರಹಿಸಿದರೆ ವಾತವ್ಯಾಧಿ ಬರದಂತೆ ತಡೆಯಬಹುದು. ಮಾತ್ರವಲ್ಲ, ನೂರಾರು ಸಂಖ್ಯೆಯ ಕಾಯಿಲೆಗಳನ್ನು ತಡೆಯಬಹುದು ಎನ್ನುವ ವಿಚಾರ ಆರೋಗ್ಯಕರ ಬದುಕಿಗೆ ರಾಜಮಾರ್ಗ.