ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
- ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣ
- ಇಂದು ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ ನ್ಯಾಯಾಲಯದಿಂದ ವಿನಯ್ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
- ಅಷ್ಟಕ್ಕೂ ಜೀವಾವಧಿ ಶಿಕ್ಷೆ ಎಂದರೆ ಏನು? ಎಷ್ಟು ವರ್ಷಗಳ ಕಾಲ?
- ಹಲವರಲ್ಲಿ ಕಾಡುವ ಗೊಂದಲದ ಬಗ್ಗೆ ಇಲ್ಲಿದೆ ನೋಡಿ ಉತ್ತರ
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ.
ದೋಷಿ ಎಂದು ಏಪ್ರಿಲ್ 15ರಂದು ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ, ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿತು. ಮಾಜಿ ಸಚಿವರಿಗೆ ಮತ್ತು ಉಳಿದ 15 ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇದೇ ಕೋರ್ಟ್, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅಪರಾಧಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ ಎಂದು ಪ್ರಕಟಿಸಲಾಯಿತು. ಈಗ ಜನರಲ್ಲಿ ಕಾಡುತ್ತಿರುವ ಪ್ರಶ್ನೆ, ಅಸಲಿಗೆ ಜೀವಾವಧಿ ಶಿಕ್ಷೆ ಎಂದರೆ ಎಷ್ಟು ವರ್ಷಗಳ ಕಾಲ? ಅದು 14 ವರ್ಷವೋ ಅಥವಾ 20 ವರ್ಷಗಳೋ ಎಂಬ ಗೊಂದಲಗಳಿವೆ.
ರಾಜಕೀಯ ರಣರಂಗದಲ್ಲಿ ಘರ್ಜಿಸುತ್ತಿದ್ದ ಧಾರವಾಡದ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಭವಿಷ್ಯ ಈಗ ಸೆರೆಮನೆಯ ಕತ್ತಲ ಕೋಣೆಯತ್ತ ಮುಖಮಾಡಿದೆ. 10 ವರ್ಷಗಳ ಹಿಂದೆ ಬಿಜೆಪಿಯ ಯೋಗೀಶ್ ಗೌಡ ಕೊಲೆ ಪ್ರಕರಣ ಇಂದು ಅಂತ್ಯ ಕಂಡಿದ್ದು, ವಿನಯ್ಗೆ ಜೈಲುವಾಸ ಖಚಿತವಾಗಿದೆ. ಇದು ಅವರ ಶಾಸಕ ಸ್ಥಾನಕ್ಕೂ ಕುತ್ತು ತಂದಿಟ್ಟಿದೆ. ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯ ಸುತ್ತ ಈಗ ಹತ್ತಾರು ಗೊಂದಲಗಳು ಕೇಳಿಬರುತ್ತಿವೆ. ಇದು ಬರೀ 14 ವರ್ಷಗಳ ಶಿಕ್ಷೆಯೋ? ಅಥವಾ ಉಸಿರಿನ ಕೊನೆತನಕ ಅನುಭವಿಸಬೇಕಾದ ಶಿಕ್ಷೆಯೋ? ಎಂಬ ಪ್ರಶ್ನೆಗಳು ಬಹಳ ಹಿಂದಿನಿಂದಲೂ ಜನರಲ್ಲಿ ಗೊಂದಲ ಮೂಡಿಸಿವೆ.
ಅನೇಕರಲ್ಲಿ ಜೀವಾವಧಿ ಶಿಕ್ಷೆ ಎಂದರೆ ಕೇವಲ 14 ಅಥವಾ 20 ವರ್ಷಗಳು ಎಂಬ ತಪ್ಪು ಕಲ್ಪನೆ ಇಂದಿಗೂ ಇದೆ. ಜೀವಾವಧಿ ಎಂದರೆ ಕೇವಲ 14 ವರ್ಷಗಳ ಶಿಕ್ಷೆ. ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ (CrPC) ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಈ ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವಿರುತ್ತದೆ. ಈ ಅಧಿಕಾರವನ್ನು ಬಳಸಲು ಅಪರಾಧಿಯು ಕನಿಷ್ಠ 14 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿರಬೇಕು ಎನ್ನಲಾಗಿದೆ.
14 ವರ್ಷಗಳ ಬಳಿಕ ಅಪರಾಧಿಯನ್ನು ಬಿಡುಗಡೆಗೊಳಿಸುವುದು ಆಯಾ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಇದು ಕಡ್ಡಾಯವೇನಲ್ಲ. ಗಂಭೀರ ಅಪರಾಧಗಳ ಸಂದರ್ಭದಲ್ಲಿ ಸರ್ಕಾರವು ಬಿಡುಗಡೆ ಮಾಡದೆ ಜೀವನಪರ್ಯಂತ ಜೈಲಿನಲ್ಲಿಡುವ ನಿರ್ಧಾರವನ್ನೂ ತೆಗೆದುಕೊಳ್ಳಬಹುದು ಎಂಬುದು ಇಲ್ಲಿ ಗಮನಾರ್ಹ. ಸಾಮಾನ್ಯವಾಗಿ 14 ವರ್ಷಕ್ಕೆ ಶಿಕ್ಷೆ ಮುಕ್ತಾಯವಾಗುತ್ತದೆ ಎಂಬ ಮಾತಿದೆ. ಭಾರತೀಯ ದಂಡ ಸಂಹಿತೆ (ಈಗಿನ ಬಿಎನ್‌ಎಸ್) ಮತ್ತು ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಪ್ರಕಾರ, ಒಬ್ಬ ಅಪರಾಧಿಯು ಜೈಲಿನಲ್ಲಿ ತೋರುವ ನಡವಳಿಕೆಯನ್ನು ಆಧರಿಸಿ ಸರ್ಕಾರವು ಆತನ ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವನ್ನು ಹೊಂದಿದೆ.
ಕೊಲೆ ಅಥವಾ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಕನಿಷ್ಠ 14 ವರ್ಷಗಳನ್ನು ಜೈಲಿನಲ್ಲಿ ಕಳೆದ ನಂತರವಷ್ಟೇ ಸರ್ಕಾರವು ಅವರ ಬಿಡುಗಡೆಯ ಬಗ್ಗೆ ಪರಿಗಣಿಸಲು ಅಥವಾ ಚಿಂತಿಸಲು ಸಾಧ್ಯ. ಜೈಲಿನಲ್ಲಿ ಅಪರಾಧಿಯ ನಡವಳಿಕೆ ಉತ್ತಮವಾಗಿದ್ದರೆ, ಅವರ ಆರೋಗ್ಯ ಹದಗೆಟ್ಟಿದ್ದರೆ ಅಥವಾ ಮಾನವೀಯ ನೆಲೆಯ ಮೇಲೆ ಸರ್ಕಾರವು ಶಿಕ್ಷೆಯನ್ನು ಮನ್ನಾ ಮಾಡಬಹುದು(Remission). ಹೀಗೆ ಮನ್ನಾ ಮಾಡುವಾಗ 14 ವರ್ಷಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗುತ್ತದೆ. ಆದರಿದು, ಅಪರಾಧಿಯ ಹಕ್ಕಲ್ಲ. ಬದಲಿಗೆ ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯವು ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ಆದೇಶಿಸುವ ಮೂಲಕ ಬಿಡುಗಡೆಗೆ ಅವಕಾಶವೇ ಇಲ್ಲ ಎಂಬ ಕಠಿಣ ತೀರ್ಪನ್ನು ನೀಡಬಹುದು.
ಪ್ರಕರಣದ ಹಿನ್ನೆಲೆ ಏನು?
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣವು ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ ಘಟನೆಯಾಗಿದೆ. 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಕೊಲೆಗೆ ರಾಜಕೀಯ ದ್ವೇಷವೇ ಮುಖ್ಯ ಕಾರಣ ಎಂಬ ಆರೋಪಗಳು ಆರಂಭದಿಂದಲೂ ಕೇಳಿಬಂದಿದ್ದವು.
ಈ ಪ್ರಕರಣದ ಪ್ರಮುಖ ತಿರುವು ಎಂದರೆ ಕಾಂಗ್ರೆಸ್ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು, ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ (CBI) ತನಿಖೆಗೆ ವಹಿಸಲಾಯಿತು. ಸಿಬಿಐ ತನಿಖೆಯ ವೇಳೆ ವಿನಯ್ ಕುಲಕರ್ಣಿ ಅವರು ಕೊಲೆಯ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಉಲ್ಲೇಖಿಸಿ, 2020ರಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು ಒಂಬತ್ತು ತಿಂಗಳುಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.
ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕಾರ, ಯೋಗೀಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ಜಮೀನು ವಿಚಾರ ಹಾಗೂ ರಾಜಕೀಯ ಪ್ರಾಬಲ್ಯಕ್ಕೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಇದೇ ದ್ವೇಷದಿಂದಾಗಿ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಲು ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪಗಳನ್ನು ಹೊರಿಸಲಾಯಿತು.
ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ್ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದರು. ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತಾ ಏನೋ ಪ್ರಮುಖ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪವಿದೆ. 2016ರ ಜೂ. 12ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ 13ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. 16ರಂದು ಪುನಃ ದೆಹಲಿಗೆ ತೆರಳಿ 18ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತ ಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.