ಯುಗಾದಿ ಹಬ್ಬದ ನಿಮಿತ್ತ ಕಕ್ಕೇರಾ ಪಟ್ಟಣದ ಯುವಕರು ಹಾಗೂ ಮಕ್ಕಳು ಶುಕ್ರವಾರ ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಕಕ್ಕೇರಾ: ಪಟ್ಟಣದಲ್ಲಿ ಶುಕ್ರವಾರ ವಿವಿಧ ಕಾಲನಿಗಳ ಯುವಕರು ತಮಟೆಯೊಂದಿಗೆ ಹೆಜ್ಜೆ ಹಾಕುತ್ತಾ ಪರಸ್ಪರ ಬಣ್ಣ ಎರಚುತ್ತಾ ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಪಟ್ಟಣದ ಹಳೇಬಜಾರ್, ಬಸವೇಶ್ವರ ವೃತ್ತ, ವಾಲ್ಮೀಕಿವೃತ್ತ, ಬಸವ ಕಾಲೋನಿ, ಪ್ಯಾಟಿ ಕಾಲೋನಿ, ಕನಕದಾಸ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಕಾಲೋನಿಗಳ ಚಿಣ್ಣರು ಹಾಗೂ ಯುವಕರು ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಪರಸ್ಪರ ಬಣ್ಣ ಹಚ್ಚುತ್ತಾ ತಮಟೆ ನಾದಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಇದರಿಂದ ಪಟ್ಟಣದಲ್ಲಿ ಎಲ್ಲಾ ಅಂಗಡಿಗಳು ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಎಂದಿನಂತೆ ಬಸ್ ಸಂಚಾರವಿದ್ದರೂ ಪ್ರಯಾಣಿಕರು ಹೆಚಿನ ಸಂಖ್ಯೆಯಲ್ಲಿ ಕಾಣಲಿಲ್ಲ. ಆಟೋಗಳ ಸಂಚಾರ ಕಡಿಮೆ ಸಂಖ್ಯೆಯಲ್ಲಿ ಸಂಚರಿಸಿದವು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಿ ಹರಕೊಂಡ ಯುವಕರ ಮೈಗೆ ಮದ್ಯಾಹ್ನ ಬಿಸಿಲಿನ ಝಳ ತಾಕುತ್ತಿದ್ದಂತೆ, ಕೆರೆ, ಬಾವಿ ಹಾಗೂ ಮನೆಗಳತ್ತ ಸ್ನಾನಕ್ಕೆ ಯುವಕರು ಹೆಜ್ಜೆ ಹಾಕುತ್ತಿದ್ದಂತೆ ಇತ್ತ ಅಂಗಡಿ&ಮುಂಗಟ್ಟುಗಳು ತೆರೆಯಲ್ಪಟ್ಟವು.
ಬಣ್ಣದೋಕುಳಿಯಲ್ಲಿ ಯುವಕರಾದ ಚಂದ್ರಶೇಖರ ವಜ್ಜಲ್, ಸಂಗಯ್ಯಸ್ವಾಮಿ, ಕೆ,ಗವಿಸಿದ್ದೇಶ ಹೊಗರಿ, ಅಮರೇಶ ಗುರಿಕಾರ, ನಾಗೇಶ ಮಡಿವಾಳ್, ಪ್ರಭಾಕರ್ ಬೂದಗುಂಪಿ, ಮಚೇಂದ್ರನಾಥ ಸಾಳಿ, ರಾಕೇಶ ಪಾಟೀಲ್, ಶಾಸಿ, ಶಿವು ಅಕ್ಕಿ, ರಾಮಣ್ಣ ಜೋಗಿ, ರಾಜು ಜಂಪಾ, ಸಿದ್ದಲಿಂಗೇಶ, ರಿಯಾನ ಮಕಾಂದಾರ ಸೇರಿದಂತೆ ಇತರರಿದ್ದರು.
ಸ್ಥಳಿಯ ಉಪಠಾಣಾ ಎಎಸ್ಐ ಮಹೇಶ, ಅವರು ತಮ್ಮ ಸಿಬ್ಬಂದಿಗಳೊಂದಿಗೆ ಪಟ್ಟಣದಾದ್ಯಂತ ಸಂಚರಿಸಿದರು. ಮುಖ್ಯಪೇದೆ ಬೀರಪ್ಪ, ಪೇದೆ ರಾಜು ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿಗಳಿದ್ದರು.