- ಸುತ್ತೋಲೆ ಹಿಂಪಡೆದ ರಾಜ್ಯ ಸರ್ಕಾರ
- ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
ಬೆಂಗಳೂರು: ಕರ್ನಾಟಕ ಸಿನೆಮಾ ಮತ್ತು ಸಾಂಸತಿಕ ಕಾರ್ಯಕರ್ತರ ಕಲ್ಯಾಣ ಕಾಯ್ದೆ ಅಡಿಯಲ್ಲಿ ಸಿನೆಮಾ ಟಿಕೆಟ್ ಆದಾಯದ ಮೇಲೆ ಶೇ.2ರಷ್ಟು ಸೆಸ್ ವಿಧಿಸಿ ರಾಜ್ಯ ಕಾರ್ಮಿಕ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ), ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಸರ್ಕಾರದ ಮೊಮೊ ದಾಖಲಿಸಿಕೊಂಡು ಈ ಆದೇಶ ಮಾಡಿದೆ.
ಕಾಯ್ದೆಯು ಯಾವ ದಿನಾಂಕದಿಂದ ಜಾರಿಗೊಳ್ಳುತ್ತದೆ ಎಂಬ ಬಗ್ಗೆ ರಾಜ್ಯ ಸರ್ಕಾರವು ಇನ್ನೂ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಆದ್ದರಿಂದ ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬರದಿರುವಾಗ, ಸುತ್ತೋಲೆ ಹೊರಡಿಸಿ ಸೆಸ್ ಪಾವತಿಸಲು ಆದೇಶಿಸಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ಬುಧವಾರ ಆಲಿಸಿದ್ದ ನ್ಯಾಯಪೀಠ, ಈ ಬಗ್ಗೆ ಪ್ರತಿಕ್ರಿಯೆ ತಿಳಿಸುವಂತೆ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.
ಗುರುವಾರದ ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ವಿವಾದಿತ ಸುತ್ತೋಲೆಯನ್ನು ಕಾರ್ಮಿಕ ಇಲಾಖೆಯು ಈಗಾಗಲೇ ವಾಪಾಸ್ ಪಡೆದಿದೆ ಎಂದು ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದ್ದರು. ಈ ಮೆಮೊ ದಾಖಲಿಸಿಕೊಂಡ ನ್ಯಾಯಪೀಠ, ಸುತ್ತೋಲೆಗಳನ್ನು ಅಧಿಕೃತವಾಗಿ ರದ್ದುಪಡಿಸಿ ಆದೇಶ ಹೊರಡಿಸಿದೆ.
ಕಾಯ್ದೆಯ ಹಿನ್ನೆಲೆ:
ಸಿನೆಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಮತ್ತು ಕಲ್ಯಾಣ ನಿಧಿ ಸ್ಥಾಪಿಸಲು 2024ರಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿದೆ. ಇದರಡಿಯಲ್ಲಿ ನಿನೆಮಾ ಟಿಕೆಟ್ಗಳು, ಪ್ರೀಮಿಯಂ ಶುಲ್ಕ, ಒಟಿಟಿ ಫ್ಲಾಟ್ಫಾರ್ಮ್ಗಳಿಂದ ಮತ್ತು ಟಿ.ವಿ. ಚಾನೆಲ್ಗಳ ಆದಾಯದಿಂದ ಕಲ್ಯಾಣ ಸೆಸ್ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲಯಲ್ಲಿ ಸಿನಿ ಬೋರ್ಡ್ ರಚಿಸಿದ್ದ ಸರ್ಕಾರ, ಚಿತ್ರಮಂದಿರಗಳ ಟಿಕೆಟ್ ಆದಾಯದಿಂದ ಸೆಸ್ ಸಂಗ್ರಹಿಸಲು ಸುತ್ತೋಲೆ ಹೊರಡಿಸಿತ್ತು. ಆದರೆ, ಕಾಯ್ದೆಯ ಜಾರಿ ದಿನಾಂಕವು ಅಧಿಕೃತವಾಗಿ ರಾಜ್ಯ ಗೆಜೆಟ್ನಲ್ಲಿ ಪ್ರಕಟವಾಗದ ಹಿನ್ನೆಲೆಯಲ್ಲಿ ಈ ಆದೇಶದ ಬಗ್ಗೆ ವಿವಾದ ಉಂಟಾಗಿತ್ತು.