ಜ್ಯೋತಿಷ್ಯ 
ರಾಜ್ಯ

ವಾರಭವಿಷ್ಯ: ಈ ರಾಶಿಯವರು ನವ ದುರ್ಗೆಯನ್ನು ಪೂಜಿಸಿ ಇಷ್ಟಾರ್ಥ ಸಿದ್ಧಿಸಿಕೊಳ್ಳಿ

ಮೇಷ: ಪುರಂದರ ದಾಸರ ವಾಕ್ಯಗಳು ಇಂದು ಕೂಡ ಮನುಷ್ಯನ ಜೀವನದಲ್ಲಿ ಸ್ಪಷ್ಟತೆಯನ್ನು ಹಾಗೂ ಬಾಳಿನ ದಾರಿಯನ್ನು ತೋರಿಸುತ್ತದೆ. ಮಿತ್ರರೇ ಆಗಿರಲಿ, ಶತ್ರುಗಳೇ ಆಗಿರಲಿ ಯಾರಿಗೂ ಸಹಾಯ ಮಾಡಲು ಹಿಂಜರಿಯಬೇಡಿ. ದ್ವಾದಶದಲ್ಲಿ ಶನಿ ಇದ್ದು ಗುರು ಚತುರ್ಥದಲ್ಲಿದ್ದಾನೆ. ಶ್ರೀಕೃಷ್ಣನನ್ನು ಪ್ರಾರ್ಥಿಸಿ. ಕ್ಲೀಂ ಕೃಷ್ಣಾಯ ನಮಃ ಎಂದು ಜಪಿಸಿ.

ವೃಷಭ: ಅನಂತವಾದ ಪುಣ್ಯಗಳನ್ನು ಕೊಟ್ಟು ವಿಶೇಷ ಫಲ ಕೊಡುವವಳು ಮಾತೃ ಸ್ವರೂಪಳಾದ ಜಗಜ್ಜನನಿ. ಈ ನಾಡನ್ನು ಸಂರಕ್ಷಿಸುವ ಚಾಮುಂಡೇಶ್ವರಿ. ದುಃಖ ದುಮ್ಮಾನದಿಂದ ಮುಕ್ತಿ ಕೊಡುವ ತಾಯಿ. ಆದ್ದರಿಂದ ನವ ದುರ್ಗೆಯನ್ನು ಪೂಜಿಸಿ ಇಷ್ಟಾರ್ಥ ಸಿದ್ಧಿಸಿಕೊಳ್ಳಿ.

ಮಿಥುನ: ಮಹಾವಿಷ್ಣುವು ಕನ್ಯಾ - ಮಿಥುನ ರಾಶಿಗೆ ಅಧಿಪತಿ. ಅವನ ಅವತಾರಗಳು ಅತ್ಯಂತ ಶ್ಲಾಘನೀಯ. ರಾಮನ ಅವತಾರದಲ್ಲಿ ರಾವಣನ ಸಂಹಾರ ಮಾಡಿದ್ದು ಹಾಗೂ ಕೃಷ್ಣ ಅವತಾರದಲ್ಲಿ ಪಾಂಡವರಿಗೆ ಸಹಾಯ ನೀಡಿ ಕೌರವರ ಅಹಂಕಾರ ಇಳಿಸಿದ್ದನ್ನು ನೆನಸಿಕೊಳ್ಳಿ. ಗುರುವಿನ ಮೇಲೆ ವಿಶ್ವಾಸ ಇಡಿ. ಗುರು ಸ್ವರೂಪನಾದ ಮಹಾವಿಷ್ಣುವನ್ನು ಪ್ರಾರ್ಥಿಸಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಕಟಕ: ಚಂದ್ರ ಆಧಿಪತಿಯಾದ ರಾಶಿಯಾಗಿದ್ದು, ಅಲ್ಲೇ ಗುರು ಉಚ್ಚ ಕ್ಷೇತ್ರದಲ್ಲಿ ಇದ್ದು ಇಡೀ ಜಗತ್ತನ್ನೇ ನೋಡುತ್ತಿದ್ದಾನೆ. ಗುರು ದೃಷ್ಟಿ ಒಂದಿದ್ದರೆ ಮೈಯೆಲ್ಲ ಕಣ್ಣಾಗಿ ದೋಷವಿಲ್ಲದ ಶರೀರವನ್ನು, ಆರೋಗ್ಯವನ್ನು ಕೊಟ್ಟು ಇಟ್ಟ ಗುರಿಯನ್ನು ಮುಟ್ಟಿಸುತ್ತಾನೆ. ಶಿವನನ್ನು ಪ್ರಾರ್ಥಿಸಿ. ನಿಮ್ಮ ಖರ್ಚು ವೆಚ್ಚಕ್ಕೆ ಧನದ ಕೊರತೆ ಇರುವುದಿಲ್ಲ. ಓಂ ನಮಃ ಶಿವಾಯ ಪಂಚಾಕ್ಷರಿ ಜಪ ಮಾಡಿ.

ಸಿಂಹ: ಲಗ್ನದಲ್ಲಿ ಕೇತು ಇರುವುದು. ಅರ್ಥೈಸಿಕೊಂಡರೆ ಸೂರ್ಯ ಚಂದ್ರರನ್ನು ಹಿಡಿಯುವುದೇ ರಾಹು ಕೇತುಗಳು. ಮೇಲ್ನೋಟಕ್ಕೆ ಕೆಲಸ ಆದಂತೆ ತೋರುತ್ತದೆ. ಆದರೆ ಕೆಲಸದ ವೇಗ ತಗ್ಗಿ ಮತ್ತೆ ಯಥಾ ಸ್ಥಿತಿ ಮುನ್ನಡೆಯುತ್ತದೆ. ಗುರು ಗಣೇಶಾಭ್ಯೋ ನಮಃ ಎಂದು ಗುರು ಸಮೇತ ಗಣೇಶನನ್ನು ಪ್ರಾರ್ಥಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿ.

ಕನ್ಯಾ: ಕಳೆದುಕೊಂಡ ವಸ್ತು ಸಿಗಬೇಕಾದರೆ ಕಾರ್ತಿಕೇಯ ಜಪ ಮಾಡಬೇಕು. ಅದರ ಮೂಲ ದತ್ತ ದೇವರು. ಗುರು ಏಕಾದಶದಲ್ಲಿದ್ದು ಗುರು ದತ್ತಾತ್ರೇಯನನ್ನು ಪೂಜಿಸಲೇಬೇಕು . ಯಾವ ಹಿರಿಯರೇ ಆಗಲಿ ಗುರುಗಳೇ ಆಗಲಿ ನಿಮ್ಮ ಸ್ಮರಣೆಗೆ ಬಂದರೆ ನಿಮ್ಮ ಕೆಲಸ ಆದಂತೆ. ಸಪ್ತಮ ಶನಿಗಾಗಿ ಶಿವನನ್ನು ಪ್ರಾರ್ಥಿಸಿ.

ತುಲಾ: ಲಲಿತಾ ಸಹಸ್ರನಾಮದ ಮೊದಲ ಸಾಲೆ ‘ಶ್ರೀಮಾತಾ ಶ್ರೀ ಮಹಾರಾಗ್ನಿ ...’ ಇಂತಹ ದೇವಿಗೆ ನಾವು ಆಹಾರವನ್ನು ಸಮರ್ಪಿಸಿ ನಂತರ ತಿಂದರೆ ರೋಗ ಇರುವುದಿಲ್ಲ. ಪ್ರಸಾದರೂಪದಲ್ಲಿ ಹಂಚಿ ತಿಂದರೆ ಅನ್ನ ದಾನ ಮಾಡಿದ ಪುಣ್ಯ ಸಿಗುತ್ತದೆ. ಸದ್ಯದಲ್ಲಿ ನಿಮ್ಮ ಸ್ಥಾನಮಾನ ಎಲ್ಲವೂ ಚೆನ್ನಾಗಿದೆ. ಲಲಿತಾ ತ್ರಿಪುರ ಸುಂದರಿಯನ್ನು ಪ್ರಾರ್ಥಿಸಿ ಪೂಜಿಸಿ.

ವೃಶ್ಚಿಕ: ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಹತ್ತಿರ ಇರುವುದು ಅವನ ವಾಹನ ನವಿಲು ಹಾಗೂ ಕಾಳಿಂಗ ಸರ್ಪ. ನೀವು ಸಹ ನಾಗ ದೇವರ ಸಹಿತ ಸುಬ್ರಮಣ್ಯ ದೇವರ ಸೇವೆ ಹಾಗು ಜಪ ಮಾಡಿದರೆ ಸಾಲವು ತೀರುತ್ತದೆ. ಜೇಬು ತುಂಬುತ್ತದೆ. ಜೀವನವು ಸುಖ ವಾಗಿರುತ್ತದೆ. ‘ಸನತ್ ಕುಮಾರಾಯ ವಿದ್ಮಹೇ... ಎಂಬ ಮಂತ್ರವನ್ನು 108 ಬಾರಿ ಜಪಿಸಿ.

ಧನಸ್ಸು: ಮನುಷ್ಯನು ಗುರಿಯನ್ನು ಮುಟ್ಟಲು ಗುರು ಸ್ವರೂಪದಲ್ಲಿ ಇರುವ ತಂದೆ ತಾಯಿಗಳು, ಮಾರ್ಗದರ್ಶನ ಹಾಗೂ ವಿದ್ಯೆಯನ್ನು ಕೊಟ್ಟ ಗುರುಗಳು, ಋಷಿಗಳು ಎಲ್ಲರೂ ಬೇಕು. ಮನುಷ್ಯನ ಭಾಗ್ಯೋದಯವಾಗುವುದೇ ಮಹಾತ್ಮರ ಹಾಗೂ ಪುಣ್ಯಾತ್ಮರ ದರ್ಶನದಿಂದ. ಹಾಗಾಗಿ ನೀವು ಗುರುದರ್ಶನವನ್ನು ಮಾಡಿ ಅಭಿಲಾಷೆಗಳನ್ನು ಪ್ರಾರ್ಥಿಸಿ. ಆರೋಗ್ಯವೃದ್ದಿಯಾಗುತ್ತದೆ.

ಮಕರ: ಮಕರ ಕುಂಬಾಧಿಪತಿ ಶನಿ. ದ್ವಿತೀಯದಲ್ಲಿ ರಾಹು ಇದ್ದಾನೆ. ಶನಿಯು ಮೂರನೇ ಮನೆಯ ಗುರುವಿನ ಮನೆಯಲ್ಲಿ ಇದ್ದಾನೆ. ನಿಮ್ಮ ಬೇಡಿಕೆಗಳನ್ನೆಲ್ಲ ಪೂರೈಸಿ ಕೊಡುತ್ತಾನೆ. ಗುರುಬಲವು ಇಲ್ಲದಿರುವುದರಿಂದ ದಕ್ಷಿಣಾಮೂರ್ತಿ ಸ್ತೋತ್ರವನ್ನು ಹಾಗೂ ಅಷ್ಟೋತ್ತರವನ್ನು ಪಠಿಸಿ. ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ.

ಕುಂಭ: ಶನಿ ಮನೆಯಲ್ಲಿ ರಾಹು ಇದ್ದು ದ್ವಂದ್ವ ನೀತಿಯನ್ನು ಅನುಸರಿಸಲು ಸೂಚಿಸುತ್ತಾನೆ. ನಕಾರಾತ್ಮಕ ಚಿಂತನೆಗಳು ಹೆಚ್ಚಿರುತ್ತವೆ. ಆದರೆ ನಿಮ್ಮ ಗುರುಗಳನ್ನು ಪ್ರಾರ್ಥಿಸಿ ಸರ್ಪ ಗಾಯತ್ರೀ ಮಂತ್ರವನ್ನು ಗುರುಗಳಿಂದ ಉಪದೇಶ ಪಡೆದು ಜಪ ಮಾಡಿದರೆ ಶಂಕುಲಾ ನಾಗ ದೇವರು ಪ್ರಸನ್ನರಾಗಿ ನಿಮ್ಮ ಚಿಂತೆಯನ್ನು ದೂರ ಮಾಡುತ್ತಾನೆ.

ಮೀನ: ಪಂಚಮದಲ್ಲಿ ಗುರು, ಲಗ್ನದಲ್ಲಿ ಶನಿ. ಶನಿಯು ಪಂಚಮ ಸ್ಥಾನವನ್ನು ನೋಡುತ್ತಿದ್ದಾನೆ. ಲಗ್ನದಲ್ಲಿ ಶನಿ ದೋಷವನ್ನು ಕಳೆಯಲು ಶನಿ ಪ್ರಾರ್ಥನೆ ಹಾಗೂ ಗುರು ಪ್ರಾರ್ಥನೆ ಮಾಡಿದರೆ ಈ ದೋಷಗಳು ದೂರವಾಗುತ್ತವೆ. ಶನೈಶ್ಚರಾಯ ಶಾಂತಯ ಸರ್ವಾಭಿಷ್ಟಪ್ರದಾಯಿನೆ....ಎಂಬ ಮಂತ್ರ ಜಪಿಸಿದರೆ ಪಂಚಮ ಗುರು ಫಲವನ್ನು ಕೊಟ್ಟು ಲಾಭದಾಯಕನಾಗುತ್ತಾನೆ. ಗುರು ನರಸಿಂಹನನ್ನು ಪ್ರಾರ್ಥಿಸಿ, ನರಸಿಂಹ ಮಂತ್ರವನ್ನು ಜಪ ಮಾಡಿ.