ಜೀವ ರಕ್ಷಣೆಗಾಗಿ ಶಿರಸ್ತ್ರಾಣ ಧರಿಸಿ
ಬಂಗಾರಪೇಟೆ: ಪೊಲೀಸರಿಗೆ ಅಥವಾ ದಂಡಕ್ಕೆ ಹೆದರಿ ಹೆಲ್ಮೆಟ್ ಧರಿಸಬೇಡಿ. ನಿಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಎಂದು ಬಂಗಾರಪೇಟೆ ಇನ್ಸ್ಪೆಕ್ಟರ್ ರವಿಕುಮಾರ್ ತಿಳಿಸಿದರು.life
ಪಟ್ಟಣದ ಸ್ಮಾರ್ಟ್ ಕಿಡ್ಸ್ ಇಂಟರ್ನ್ಯಾಷನಲ್ ಪ್ಲೇ ಹೋಮ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪ್ರತಿದಿನ ಎಲ್ಲರೂ ಬೈಕ್ಗಳಲ್ಲಿ ಓಡಾಟ ಮಾಡುತ್ತಾರೆ. ಆದರೆ ಹೆಲ್ಮೆಟ್ ಮಾತ್ರ ಹಾಕುವುದಿಲ್ಲ. ಹೆಲ್ಮೆಟ್ ಹಾಕದೆ ಇದ್ದರೆ ಏನಾಗುತ್ತದೆ ಎಂದು ತಿಳಿದಿದ್ದರೂ ತಲೆ ಕಡೆಸಿಕೊಳ್ಳದೆ ಹಾಗೆಯೇ ಚಾಲನೆ ಮಾಡುತ್ತಾರೆ ಎಂದು ಹೇಳಿದರು.
ಈಗಿನ ಕಾಲದ ಮಕ್ಕಳು ಅತಿ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದು, ಉತ್ತರಪ್ರದೇಶದ 3 ಹೆಣ್ಣು ಮಕ್ಕಳು ಆನ್ಲೈನ್ ಗೇಮ್ ಚಟಕ್ಕೆ ಒಳಗಾಗಿ ಮನೆಯ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಅದಕ್ಕಾಗಿ ದಯವಿಟ್ಟು ಪಾಲಕರು ಮಕ್ಕಳಿಗೆ ಮೊಬೈಲ್ ವ್ಯಾಮೋಹ ತಪ್ಪಿಸಿ ಎಂದು ಕರೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಶಂಕರಪ್ಪ ಮಾತನಾಡಿ, ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೆ ಪೂರಕ ವಾತಾವರಣ ಕಲ್ಪಿಸಿದರೆ ಅವರು ಉತ್ತಮ ಪ್ರಜೆಯಾಗುತ್ತಾರೆ. ಮಕ್ಕಳ ಭವಿಷ್ಯ ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಪಾಲಕರು ಹಳೆಯ ಮೌಲ್ಯಗಳೊಂದಿಗೆ ಆಧುನಿಕತೆಗೆ ತಕ್ಕಂತೆ ಮೌಲ್ಯ ಬದಲಿಸಿಕೊಳ್ಳಬೇಕು ಎಂದರು.