ಸೇಡಂ ತಾಲೂಕಿನ ರಂಜೋಳದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಹಾಗೂ ಇತರೆ 9 ದೇವಸ್ಥಾನಗಳ ಉದ್ಘಾಟನೆ ನಿಮಿತ್ತ ಶನಿವಾರ ಸಂಜೆ ಆಯೋಜಿಸಿದ್ದ ಧರ್ಮಸಭೆಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಉದ್ಘಾಟಿಸಿದರು. ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಪ್ರಕಾಶ ತಾತಾ, ಸತೀಶರೆಡ್ಡಿ ಪಾಟೀಲ್​, ಬಸವರಾಜ ಪಾಟೀಲ್​ ಇತರರಿದ್ದರು.  
ರಾಜ್ಯ

ಬಿಜೆಪಿಗರ ಹೆದರಿಕೆಗೆ ನಾವು ಬಗ್ಗಲ್ಲ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಆಕ್ರೋಶ
  • ರಂಜೋಳದಲ್ಲಿ ವೀರಾಂಜನೇಯ ದೇಗುಲ ಉದ್ಘಾಟನೆ
ಸೇಡಂ: ಜಾತಿ, ಧರ್ಮ ಭೇದ ಮರೆತು ಬದುಕು ನಡೆಸುವುದು ಅಗತ್ಯವಾಗಿದ್ದು, ಅಂತಹ ವಾತಾವರಣ ರಂಜೋಳದಲ್ಲಿ ಕಾಣಸಿಗುತ್ತಿದೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ರಂಜೋಳ ಗ್ರಾಮದಲ್ಲಿ ಶ್ರೀ ವೀರಾಂಜನೇಯ ದೇವಾಲಯ ಹಾಗೂ ಇತರೆ 9 ಗ್ರಾಮ ದೇವತೆಗಳ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಶನಿವಾರ ಸಂಜೆ ಆಯೋಜಿಸಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಹಿಂದಿನಿಂದಲೂ ಹಳ್ಳಿಯಲ್ಲಿ ಭಾವೈಕತೆಯ ವಾತಾವರಣವಿದೆ. ಮೊಹರಂ ಹಬ್ಬವನ್ನು ಹಿಂದು&ಮುಸ್ಲಿಮರು ಸೇರಿ ಆಚರಿಸುತ್ತಾರೆ. ಇದೀಗ ನಿಮಾರ್ಣವಾದ ದೇವಾಲಯಗಳಿಗೂ ಮುಸ್ಲಿಂ ಸಮುದಾಯ ಸೇರಿ ಎಲ್ಲರೂ ದೇಣಿಗೆ ನೀಡಿದ್ದಾರೆ ಎಂದರು.
ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲವೆಂದು ಬಿಜೆಪಿಗರು ಗೂಂಡಾಗಿರಿ ಮಾಡಿ, ಗ್ರಾಮಸ್ಥರನ್ನು ಹೆದರಿಸಿದ್ದರು. ಇದ್ಯಾವುದಕ್ಕೂ ನಾವು ಬಗ್ಗಲ್ಲ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು, ಆದರೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಸುಮ್ಮನಿದ್ದೇವೆ ಎಂದು ಹೇಳಿದರು.
ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿ ಕಾರ್ಮಿಕರ ಸಂದ ಅಧ್ಯಕ್ಷ ಸತೀಶರೆಡ್ಡಿ ರಂಜೋಳ ಮಾತನಾಡಿ, ಧರ್ಮದ ಕಾರ್ಯದಲ್ಲಿ ಯಾರನ್ನು ಕರೆಯಬೇಕು ಎನ್ನುವುದು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಬಿಜೆಪಿ ನಾಯಕರು ಬಂದು ದರ್ಶನ ಪಡೆದರೆ ನಮ್ಮದೇನು ಅಭ್ಯಂತರವಿರಲಿಲ್ಲ. ಧರ್ಮದ ವಿಷಯದಲ್ಲಿ ರಾಜಕೀಯ ಮಾಡಿದ್ದು ನಾಚಿಕೆಗೇಡು ಎಂದು ಟೀಕಿಸಿದರು.
ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿದರು. ಗುರುಮಠಕಲ್​ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಗೌಡನಹಳ್ಳಿಯ ಶ್ರೀ ಪ್ರಕಾಶ ತಾತಾ ಸಾನ್ನಿಧ್ಯವಹಿಸಿದ್ದರು.
ಪ್ರಮುಖರಾದ ಬಸವರಾಜ ಪಾಟೀಲ್​ ಊಡಗಿ, ರವೀಂದ್ರ ನಂದಿಗಾಮ, ನಾರಾಯಣರೆಡ್ಡಿ ಶೇರಿಕಾರ, ಮೋಹನರೆಡ್ಡಿ ಮುನ್ನೂರ, ವೆಂಕಟನರಸಿಂಹರೆಡ್ಡಿ, ರಾಜು ಪಸಾರ್​, ರಾಜುಗೌಡ ಬೆನಕನಹಳ್ಳಿ, ಅಬ್ದುಲ್​ ರಶೀದ್​ ರಂಜೋಳ, ರವಿ ಸಾಹು ತಂಬಾಕೆ, ರಾಮಚಂದ್ರ ಗುತ್ತೇದಾರ್​, ವಿಶ್ವನಾಥ ಪಾಟೀಲ್​ ಕುಕ್ಕುಂದಾ, ವೀರೇಂದ್ರ ರುದ್ನೂರ, ಸತೀಶ ಪೂಜಾರಿ, ರಾಮಯ್ಯ ಪೂಜಾರಿ, ಹೇಮಾರೆಡ್ಡಿ ಕಲಕಂಭ, ರಾಮಗೋಪಾಲಜಿ ಮರಾಠ, ಬಸವರಾಜ ಜಾಕನಹಳ್ಳಿ, ರಾಜಶೇಖರರೆಡ್ಡಿ ಕೋಲಕುಂದಾ, ಗುಂಡಪ್ಪ ಇಟಕಾಲ, ನಾರಾಯಣರೆಡ್ಡಿ ಜಾಕನಪಲ್ಲಿ, ಉಮಾರೆಡ್ಡಿ ಹಂದರಕಿ, ಹಫೀಜ್​, ವೆಂಕಟರೆಡ್ಡಿ ಜಟ್ಟೂರ ಇತರರಿದ್ದರು.
"

ಕಾರ್ಯಕ್ರಮದ ವೇದಿಕೆಯಲ್ಲಿ ಯಾರನ್ನು ಕೂರಿಸಬೇಕು ಎನ್ನುವ ನಿರ್ಧಾರ ಆಯೋಜಕರದ್ದಾಗಿರುತ್ತದೆ. ನಮ್ಮನ್ನು ಯಾಕೆ ಆಹ್ವಾನಿಸಿಲ್ಲ ಎಂದು ಬಿಜೆಪಿಗರು ಕೇಳುವುದು ಹಾಸ್ಯಾಸ್ಪದ. ಅಧಿಕಾರದಲ್ಲಿ ಇಲ್ಲದಿರುವಾಗಲೇ ಇಷ್ಟೆಲ್ಲ ಗೂಂಡಾವರ್ತನೆ ತೋರುತ್ತಿರುವ ಇವರು ಅಧಿಕಾರದಲ್ಲಿದ್ದರೆ ಹೇಗೆ ವರ್ತಿಸುತ್ತಾರೆ ಎಂಬುದು ಜನರಿಗೆ ತಿಳಿದಿದೆ.

— > ಡಾ.ಶರಣಪ್ರಕಾಶ ಪಾಟೀಲ್​, ಸಚಿವ

"

ನೂರಾರು ಜನರೊಂದಿಗೆ ಗ್ರಾಮಕ್ಕೆ ಬಂದ ಬಿಜೆಪಿಗರು ಇಲ್ಲಿನ ಕಾರ್ಯಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ರಾಜಕೀಯಕ್ಕಾಗಿ ದೇವಸ್ಥಾನದ ದೇಣಿಗೆಯಿಂದ 10 ಕೋಟಿ ರೂ. ಲೂಟಿ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಎಲ್ಲದಕ್ಕೂ ಸ್ಪಷ್ಟನೆ ಕೊಡಲು ನಾನು ಸಿದ್ಧನಿದ್ದೇನೆ.

— > ಸತೀಶರೆಡ್ಡಿ ಪಾಟೀಲ್​ ರಂಜೋಳ, ಅಧ್ಯಕ್ಷ, ಕಾರ್ಮಿಕರ ಸಂಘ, ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿ