ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಐಪಿಎಲ್ ಪಂದ್ಯ
- ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಮೊದಲ ಪಂದ್ಯವೇ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ
- ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸಲು ಆಗೋದಿಲ್ಲ ಎಂದು ವಿಜಯಾನಂದ ಕಾಶಪ್ಪನವರ್
ಬೆಂಗಳೂರು: ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭವಾಗುತ್ತಿದ್ದು, ಮೊದಲ ಪಂದ್ಯವೇ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿದೆ. ಈ ಪಂದ್ಯವು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈಗಾಗಲೇ ಟಿಕೆಟ್‌ಗಳಿಗೆ ಕ್ರೀಡಾಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಕೇವಲ ಫ್ರಾಂಚೈಸಿ ಫ್ಯಾನ್ಸ್ಗಳಲ್ಲಿ ಮಾತ್ರವಲ್ಲ, ರಾಜ್ಯ ಶಾಸಕರಲ್ಲಿಯೂ ಐಪಿಎಲ್ ಕ್ರೇಜ್ ಬಲು ಜೋರಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಶಾಸಕರು, ಸಚಿವರು ಮತ್ತು ಅವರ ಕುಟುಂಬಸ್ಥರಿಗೆ ಪ್ರತ್ಯೇಕ ಟಿಕೆಟ್‌ಗಳನ್ನು ನೀಡಬೇಕು ಎಂದು ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ ಆಗ್ರಹಿಸಿದರು. ಸಾಮಾನ್ಯ ಜನರಂತೆ ನಾವು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಸಾಧ್ಯವೇ? ನಮಗೆ ಒಂದು ಟಿಕೆಟ್ ಕೊಟ್ಟರೆ ಹೇಗೆ? ಹೀಗೆ ಮಾಡುವುದರಿಂದ, ನಮ್ಮ ಕುಟುಂಬಸ್ಥರನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸರ್ಕಾರದಿಂದ ಎಲ್ಲಾ ಸೌಲಭ್ಯಗಳು, ಭದ್ರತೆ ಲಭ್ಯವಿದೆ. ಆದರೆ, ಶಾಸಕರಿಗೆ ಇಲ್ಲಿ ಗೌರವ ಸಿಗುತ್ತಿಲ್ಲ. ಆನ್‌ಲೈನ್ ವೆಬ್ಸೈಟ್ನ ಟಿಕೆಟ್ ಮಾರಾಟದಲ್ಲಿ ಬ್ಲ್ಯಾಕ್ ಮಾರ್ಕೆಟ್ ಜೋರಾಗಿದೆ. ಇದಕ್ಕೆ ಸರ್ಕಾರ ಹಸ್ತಕ್ಷೇಪ ಮಾಡಬೇಕು. ಪ್ರತಿ ಶಾಸಕರಿಗೆ ಕನಿಷ್ಠ ಐದು ಟಿಕೆಟ್‌ಗಳು ನೀಡುವಂತೆ ಮತ್ತು ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಸ್ಪೀಕರ್ ಯು.ಟಿ. ಖಾದರ್ ಬಳಿ ಮನವಿ ಮಾಡಿದರು. ಇದಕ್ಕೆ ಖಾದರ್ ಕೂಡ ಬೆಂಬಲ ಸೂಚಿಸಿದ್ದು ವಿಶೇಷ.
ಇದಕ್ಕೂ ಮೊದಲು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಕೆಎಸ್‌ಸಿಎ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. "ಪಂದ್ಯದ ಟಿಕೆಟ್‌ಗಳಿಗೆ ನಮ್ಮಿಂದ ಸಾವಿರಾರು ರೂ. ಪಡೆಯುತ್ತಾರೆ. ಅವರ ಬಳಿ ಕೋಟ್ಯಂತರ ರೂಪಾಯಿಗಳಿವೆ. ಇಷ್ಟಿದ್ದರೂ ಸಹ ಜನರಿಂದ ಇಷ್ಟೊಂದು ಹಣ ಸುಲಿಗೆ ಏಕೆ? ಇವರೆಲ್ಲ ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಅಂತಹ ಜನರಿಗಾಗಿ ರಾಜ್ಯ ಸರ್ಕಾರ ಮತ್ತೊಂದು ಕ್ರೀಡಾಂಗಣವನ್ನು ನಿರ್ಮಿಸಲು ಬಯಸಿದೆ. ಇಂಥವರಿಗೆ ತಕ್ಕ ಪಾಠ ಕಲಿಸಬೇಕು" ಎಂದರು.
ಶಾಸಕರ ಮನವಿಯನ್ನು ಬೆಂಬಲಿಸಿದ ವಿಧಾನಸಭಾ ಸ್ಪೀಕರ್, "ಶಾಸಕರು ಎತ್ತಿರುವ ಈ ವಿಷಯದ ಬಗ್ಗೆ ಸರ್ಕಾರ ಕೆಎಸ್‌ಸಿಎ ಜೊತೆ ಚರ್ಚಿಸಬೇಕು. ಮುಂದಿನ ದಿನಗಳಲ್ಲಿ ಶಾಸಕರಿಗೆ 4 ಟಿಕೆಟ್‌ಗಳನ್ನು ಒದಗಿಸಬೇಕು. ಮೊದಲೇ ನಮಗೆ ಗೌರವ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಇದರ ಕುರಿತು ಸರ್ಕಾರ ಆಲೋಚಿಸಬೇಕು. ಇಲ್ಲಿ ನೀವು ಐಪಿಎಲ್ ಟಿಕೆಟ್ ಕೇಳುವುದಾದರೆ ನನ್ನ ಹತ್ತಿರ ಬರಬೇಡಿ. ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದು ಹೇಳಿದರು.