ಚನ್ನರಾಯಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಸಿ.ಜಿ. ಜಗದೀಶ್, ರವಿಕುಮಾರ್, ರಾಜುಕುಂದೂರು, ಬೆಳಗಿಹಳ್ಳಿ ಪುಟ್ಟಸ್ವಾಮಿ, ಕೆ.ಎನ್.ನಾಗೇಶ್, ಇತರರು ಇದ್ದರು.  
ರಾಜ್ಯ

ಸಂವಿಧಾನದ ಚೌಕಟ್ಟಿನಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ

ಚನ್ನರಾಯಪಟ್ಟಣ: ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಗುರಿ ಸಾಧಿಸಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಭಾರತದ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಘನತೆ ಮತ್ತು ಗೌರವದಿಂದ ಜೀವಿಸುವ ಅವಕಾಶವನ್ನು ನೀಡಿದೆ. ಅಂಬೇಡ್ಕರ್ ಅವರು ಹಲವು ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ ನಮ್ಮ ನೆಲಕ್ಕೆ ಹೊಂದುವಂತಹ ಚೌಕಟ್ಟುಗಳನ್ನು ಹಾಕಿಕೊಟ್ಟಿದ್ದಾರೆ. ದೇಶದ ಪ್ರತಿ ಪ್ರಜೆಗೂ ಸಮಾನ ಅವಕಾಶ, ವ್ಯಕ್ತಿ ಗೌರವ, ಸಹೋದರತ್ವ ಭಾವನೆ ಮೂಡಿಸುವ ಅಂಶಗಳನ್ನು ನಮ್ಮ ಸಂವಿಧಾನ ಹೊಂದಿದೆ ಎಂದು ಬಣ್ಣಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಮಾಡುವ ಕುರಿತು ಸಮಾಲೋಚಿಸಿ ದಿನಾಂಕ ನಿಗದಿಪಡಿಸಲಾಗುವುದು. ಈ ಬಗ್ಗೆ ಚರ್ಚಿಸಲು ಡಿ. 8ಕ್ಕೆ ತಾಲೂಕು ಕಚೇರಿಯಲ್ಲಿ ಮಧ್ಯಾಹ್ನ 12:30ಕ್ಕೆ ಸಭೆ ಏರ್ಪಡಿಸಲಾಗಿದೆ. ದಲಿತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆಗೆ ಆಗಮಿಸಿ ಅಗತ್ಯ ಸಲಹೆ ನೀಡಬೇಕು. ಪ್ರತಿಮೆ ಲೋಕಾರ್ಪಣೆ ದಿನಾಂಕವನ್ನು ಸೋಮವಾರ ಪ್ರಕಟಿಸಲಾಗುವುದು. ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದ ಅಭಿವೃದ್ಧಿಗೆ 75 ಲಕ್ಷ ರೂ., ತಾಲೂಕಿನ 30 ಹಳ್ಳಿಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಎರಡನೇ ಹಂತದಲ್ಲಿ ಇನ್ನೂ 30 ಕಡೆ ಭವನ ನಿರ್ಮಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಟಿಎಪಿಸಿಎಂಎಸ್ ನಿರ್ದೇಶಕರಾದ ಸಿ.ಜಿ. ಜಗದೀಶ್, ರವಿಕುಮಾರ್, ತಾಲೂಕು ಬಿಎಸ್ಪಿ ಅಧ್ಯಕ್ಷ ರಾಜುಕುಂದೂರು, ದಲಿತ ಮುಖಂಡರಾದ ಬೆಳಗಿಹಳ್ಳಿ ಪುಟ್ಟಸ್ವಾಮಿ, ಕೆ.ಎನ್. ನಾಗೇಶ್, ಆಲದಹಳ್ಳಿ ವೆಂಕಟೇಶ್, ಮಂಜುನಾಥ್, ಬಿ.ರಂಗಪ್ಪ, ರವಿ, ಬಾಲು, ರಾಮು, ನವೀನ್, ಬಿ.ರೇಣುಕಾನಂದ, ಸಂತೋಷ್, ಚನ್ನಕೇಶವ ಭಾಗವಹಿಸಿದ್ದರು.