ಗಣೇಶ ಮೂರ್ತಿಗಳ ವಿಸರ್ಜನೆಗೆ ಜಲಬಾಧೆ
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಮಳೆ ಕೈಕೊಟ್ಟಿದೆ. ಇದರಿಂದ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ತೀವ್ರ ಬರ ಇದೆ.
ಭೂಮಿ ಒಣಗಿದ್ದು, ರಸ್ತೆಗಳಲ್ಲಿ ಧೂಳು ತುಂಬಿದೆ. ಕೃಷಿ ಭೂಮಿ ಬಿರುಕು ಬಿಟ್ಟಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಕೆರೆ, ಕುಂಟೆ, ನದಿ ಮತ್ತು ಬೋರ್‌ವೆಲ್ಗಳು ಬತ್ತಿವೆ. ಹೀಗಿರುವಾಗ, ರಾಜ್ಯದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಕುಂದಿಲ್ಲ. ಜನರು ಹಬ್ಬದ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ. ಆದರೆ, ನದಿಗಳು, ಕೆರೆ, ಹಳ್ಳ, ಕಲ್ಯಾಣಿಗಳು ನೀರಿಲ್ಲದೆ ಒಣಗಿವೆ. ವಿಸರ್ಜನೆಗೆ ಜಲಮೂಲಗಳೇ ಇಲ್ಲವಾಗಿದೆ. ಗಣಪರ್ತಿ ಮೂರ್ತಿಯನ್ನು ಎಲ್ಲಿ ವಿಸರ್ಜನೆ ಮಾಡಬೇಕು ಎಂಬುದರ ಬಗ್ಗೆ ಅನೇಕರು ಗೊಂದಲದಲ್ಲಿದ್ದು, ಈ ಬಾರಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಜಲಬಾಧೆ ಕಾಡುವ ಆತಂಕ ಎದುರಾಗಿದೆ.
ಗಣೇಶ ಹಬ್ಬದ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲೂ ಭಕ್ತರು ನೂರಾರು ಗಣಪತಿ ಮೂರ್ತಿಗಳು ಪ್ರತಿಷ್ಠಾಪಿಸಿ ಪೂಜಿಸಿ ಕೆಲ ದಿನಗಳ ನಂತರ ನದಿ, ಕೆರೆ ಅಥವಾ ಕುಂಟೆಗಳಲ್ಲಿ ವಿಸರ್ಜಿಸುತ್ತಾರೆ. ಸಾಮಾನ್ಯವಾಗಿ ಭಾದ್ರಪದ ಮಾಸದಲ್ಲಿ ರಾಜ್ಯದಲ್ಲಿ ಮಳೆಯಾಗುತ್ತದೆ. ಆದರೆ, ಈ ವರ್ಷ ‘ಎಲ್‌ನಿನೋ’ ಪ್ರಭಾವವು ಮುಂಗಾರಿನ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದ ಜೂನ್‌ನಿಂದಲೇ ಮಳೆ ಅಭಾವ ಇದೆ. ಈ ಬಾರಿಯ ಭಾದ್ರಪದ ಮಾಸದಲ್ಲಿಯೂ ಮಳೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಜಿಲ್ಲಾಡಳಿತ, ನಗರ ಪಾಲಿಕೆ, ಪಾಲಿಕೆಗಳು, ಪಟ್ಟಣ ಮತ್ತು ಗ್ರಾಮ ಪಂಚಾಯಿತಿಗಳು ಮೂರ್ತಿಗಳ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಪ್ರತಿ ವಾರ್ಡ್ ಅಥವಾ ಗ್ರಾಮದಲ್ಲಿ ತಾತ್ಕಾಲಿಕ ಕೃತಕ ವಿಸರ್ಜನಾ ತೊಟ್ಟಿ ನಿರ್ಮಿಸಬೇಕು ಎಂದು ಸರ್ಕಾರವನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಲ್ಲೇ 10 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿಯೂ ನಗರದ ಗಲ್ಲಿಗಲ್ಲಿಗಳಲ್ಲೂ ಗಣೇಶ ಮೂರ್ತಿ ಇಡಲು ನಗರದ ಜನತೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದರೆ, ಸಿಲಿಕಾನ್ ಸಿಟಿಯಲ್ಲೂ ಮಳೆ ಇಲ್ಲದೆ ಗಣೇಶ ವಿಸರ್ಜನೆಗೆ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ, ಗಣೇಶ ಮೂರ್ತಿಗಳನ್ನು ಒಣಗಿದ ಕೆರೆಯ ಮಣ್ಣಿನಲ್ಲಿ ಅಥವಾ ಖಾಲಿ ಜಾಗದಲ್ಲಿ ಮೂರ್ತಿಗಳನ್ನು ಬಿಡುವುದರಿಂದ, ನಂತರದ ದಿನಗಳಲ್ಲಿ ಆ ಮೂರ್ತಿಗಳು ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಬಹುದು. ಹಾಗಾಗಿ, ಪೂರ್ಣವಾಗಿ ನೀರಿರುವ ಜಾಗದಲ್ಲೇ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಗುರುತಿಸಿರುವ ಕಲ್ಯಾಣಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದು ಸೂಕ್ತ.
* ನೀರಿನ ಅಭಾವ ಇರುವಾಗ ಮನೆಯಲ್ಲೇ ಸರಳವಾಗಿ ಗಣೇಶ ಮೂರ್ತಿ ವಿಸರ್ಜಿಸಿ
* ದೊಡ್ಡ ಪಾತ್ರೆ ಅಥವಾ ಬಕೆಟ್‌ನಲ್ಲಿ ನೀರು ತುಂಬಿಸಿ ಮಣ್ಣಿನ ಗಣೇಶ ಮೂರ್ತಿ ವಿಸರ್ಜಿಸಿ
* ಮೂರ್ತಿ ಸಂಪೂರ್ಣವಾಗಿ ಕರಗಿದ ಬಳಿಕ ಆ ಮಣ್ಣಿನ ನೀರನ್ನು ಗಿಡಗಳಿಗೆ ಅಥವಾ ತೋಟಕ್ಕೆ ಹಾಕಿ
* ಸಂಚಾರಿ ಗಣೇಶ ವಿಸರ್ಜನಾ ವಾಹನಗಳ ಬಳಸಿ
*ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಗಣೇಶ ವಿಸರ್ಜನೆಗೆ ತಾತ್ಕಾಲಿಕ ಕೃತಕ ಸಂಪು ವ್ಯವಸ್ಥೆ ಮಾಡಲಿ
* ನೈಸರ್ಗಿಕ ಜೇಡಿಮಣ್ಣಿನಿಂದ ಮಾಡಿದ ಚಿಕ್ಕ ಮೂರ್ತಿಗಳಿಗೆ ಆದ್ಯತೆ ನೀಡಿ
* ಅಲ್ಪ ಪ್ರಮಾಣದ ನೀರಿನಲ್ಲೇ ಚಿಕ್ಕ ಮೂರ್ತಿಗಳು ಸುಲಭವಾಗಿ ಕರುಗಲಿವೆ
* ಹಾನಿಕಾರಕ ರಾಸಾಯನಿಕಯುಕ್ತ ಮೂರ್ತಿ ಬಳಸಬೇಡಿ