ಮದ್ದೂರು ತಾಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಅಭಿವೃದ್ದಿ ಕಾಮಗಾರಿ ವೇಳೆ ಶಾಸಕ ಕೆ.ಎಂ.ಉದಯ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಅಡಗನಹಳ್ಳಿ ಧನು, ಹರೀಶ್, ರವೀಂದ್ರನಾಥ್, ಸತೀಶ್, ನಂದೀಶ್, ಗಿರೀಶ್, ರಾಜು ಇದ್ದರು.
ಶಿಂಷಾ ಎಡದಂಡೆ ವ್ಯಾಪ್ತಿಯ ಕೆರೆಗಳಿಗೆ ಏತ ನೀರಾವರಿ ಯೋಜನೆ ಮೂಲಕ ಕಡಿಮೆ ಅವಧಿಯಲ್ಲಿ ನೀರು ತುಂಬಿಸುವ ಯೋಜನೆಯನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಅಡಗನಹಳ್ಳಿ ಹಾಗೂ ತೊರೆಶೆಟ್ಟಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಶಿಂಷಾ ಎಡದಂಡೆ ವ್ಯಾಪ್ತಿಯ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕೆಸ್ತೂರು ಮತ್ತು ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಂಷಾ ಎಡದಂಡೆ ನಾಲೆಯ ನೀರನ್ನು ಹೊರತುಪಡಿಸಿ ಬೇರೆ ಯಾವ ಜಲಮೂಲಗಳಿಲ್ಲ. ಹೀಗಾಗಿ ಶಿಂಷಾ ನದಿಯ ನೀರನ್ನು ಬಳಸಿಕೊಂಡು ಏತ ನೀರಾವರಿ ಯೋಜನೆ ಮೂಲಕ ಎರಡು ತಿಂಗಳ ಅವಧಿಯಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದರು.
ಪ್ರಸ್ತುತವಿರುವ ಏತ ನೀರಾವರಿ ಯೋಜನೆಗಳ ಪೈಪ್‌ಲೈನ್ ಸಾಕಷ್ಟು ಕಿರಿದಾಗಿದ್ದು, ಕೆರೆಗಳನ್ನು ತುಂಬಿಸಲು ಬಹಳ ದಿನಗಳು ಬೇಕಾಗಿದೆ. ಹೀಗಾಗಿ ಅವುಗಳನ್ನು ತೆರವುಗೊಳಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೀರು ತುಂಬಿಸುವ ಮಹತ್ವದ ಯೋಜನೆಗಳಿಗೆ ಈಗಾಗಲೇ ಜಲ ಸಂಪನ್ಮೂಲ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಬಳಿ ಎರಡು ಮೂರು ದಿನಗಳಲ್ಲಿ ಸಭೆ ನಡೆಸಿ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ 3 ವರ್ಷಗಳಲ್ಲಿ ಎಲ್ಲ ಇಲಾಖೆಗಳ ಸಚಿವರು ಸ್ಪಂದಿಸುವ ಮೂಲಕ ಸುಮಾರು 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಹೀಗಾಗಿ ಅಧಿವೇಶನದಲ್ಲಿ ಯಾವುದೇ ಹೆಚ್ಚಿನ ಬೇಡಿಕೆಯನ್ನು ಕೇಳುತ್ತಿಲ್ಲ ಎಂದರು.
ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಈಗಾಗಲೇ ಆರೋಗ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಈಗಾಗಲೇ ಮದ್ದೂರು ಪಟ್ಟಣದ ಪೇಟೆ ಬೀದಿ ವಿಸ್ತರಣೆ ಯೋಜನೆಗೆ ಆರ್ಥಿಕ ಇಲಾಖೆಯಿಂದ ಸ್ವಲ್ಪ ಗೊಂದಲವಿತ್ತು. ಅಲ್ಲಿಯೂ ಕೂಡ ಅನುಮೋದನೆ ದೊರೆತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದ್ದು, ನಂತರ ಎಲ್ಲ ಪ್ರಕ್ರಿಯೆಗಳು 2 ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದರು.
ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ವಿಪಕ್ಷಗಳ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಉದಯ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೇ ಜೈಲಿಗೆ ಹಾಕಲಾಗಿತ್ತು. ಅದಲ್ಲದೆ ಗಡಿಪಾರು ಕೂಡ ಮಾಡಲಾಗಿತ್ತು. ಅಂತಹವರನ್ನೇ ಬಿಜೆಪಿ ಸರ್ಕಾರ ಕೇಂದ್ರ ಗೃಹ ಸಚಿವರನ್ನಾಗಿ ಮಾಡಿದ್ದಾರಲ್ಲ ಅವರಿಗೆ ನಾಚಿಕೆಯಾಗಲ್ಲವೇ ಎಂದು ಪ್ರಶ್ನಿಸಿದರು. ನಾಗೇಂದ್ರ ಅವರಿಂದ ಯಾವುದೇ ಅಕ್ರಮ ನಡೆದಿಲ್ಲ. ಹೀಗಾಗಿ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಮರ್ಥಿಸಿಕೊಂಡರು.
ನಮಗೆ ಅಧಿಕಾರ ಇರಲಿ, ಬಿಡಲಿ ನಾವು ರೈತರ ಪರ ನಿಲ್ಲುತ್ತೇನೆ. ಸರ್ಕಾರದ ಪರ ಹೋರಾಟ ಮಾಡಿದರೂ ಸಹ ನಾನು ರೈತರ ಜತೆಗೆ ನಿಲ್ಲುತ್ತೇನೆ. ನಮ್ಮ ನೀರನ್ನು ನಾವು ಬಳಸಿಕೊಳ್ಳೋಕೆ ನಮಗೆ ಮೊದಲ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾ.ಪಂ. ಮಾಜಿ ಅಧ್ಯಕ್ಷ ನಾಗೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದಾಸೇಗೌಡ, ಮುಖಂಡರಾದ ಸಿಪಾಯಿ ಶ್ರೀನಿವಾಸ್, ಅಡಗನಹಳ್ಳಿ ಧನು, ಹರೀಶ್, ತೂಬಿನಕೆರೆ ವಿನೋದ್ ಬಾಬು, ಮಹಾಲಿಂಗು, ರವೀಂದ್ರನಾಥ್, ಸತೀಶ್, ನಂದೀಶ್, ಗಿರೀಶ್, ರಾಜು, ಕುಮಾರ್, ಅವಿ, ಶಿವ, ಹರಿ, ರಮೇಶ್, ದೇವರಾಜು, ಪುರುಷೋತ್ತಮ್, ಲೋಕಿ, ಮರಿಸ್ವಾಮಿ, ಇಇ ನಾಗರಾಜ್ ಇದ್ದರು.