ಚಿಕ್ಕನಾಯಕನಹಳ್ಳಿ water ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟಗಾರರ ಜತೆ ಶಾಸಕ ಸಿ.ಬಿ.ಸುರೇಶ್ಬಾಬು ಚರ್ಚಿಸಿದರು. ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಧು, ಭೂಸ್ವಾದಿನ ಇಲಾಖೆಯ ಎಸ್ಎಲ್ಒ ಮಂಜುಳಾ, ತಹಸೀಲ್ದಾರ್ ಎಂ.ಮಮತಾ, ಎಇಇ ಪ್ರಭಾಕರ್, ಮಾಜಿ ಜಿಪಂ ಸದಸ್ಯ ರಾಮಚಂದ್ರಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್, ತರಬೇನಹಳ್ಳಿ ಷಡಕ್ಷರಿ, ಗೋವಿಂದಪ್ಪ ಇದ್ದರು.
ಸಮಗ್ರ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ,
ಹೇಮಾವತಿ ಯೋಜನೆಗಳಿಂದ ಒಟ್ಟು 143 ಕೆರೆಗಳಿಗೆ ಕುಡಿಯುವ ಉದ್ದೇಶಕ್ಕೆ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ತಾಲೂಕು ಆಡಳಿತಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಹೋರಾಟಗಾರರ ಜತೆಗೆ ಚರ್ಚಿಸಿ ಮಾತನಾಡಿದ ಶಾಸಕರು, ಎತ್ತಿನಹೊಳೆ ಯೋಜನೆಯಿಂದ ಒಟ್ಟು 1.097 ಟಿಎಂಸಿ ನೀರು ಹಂಚಿಕೆಯಾಗಿದ್ದು, 103 ಕೆರೆಗಳನ್ನು ತುಂಬಿಸಲು 0.75 ಟಿಎಂಸಿ ಹಾಗೂ 0.347 ಟಿಎಂಸಿ ಕುಡಿಯುವ ನೀರಿಗಾಗಿ ಹಂಚಿಕೆ ಮಾಡಲಾಗಿದೆ. ಈ ಕಾಮಗಾರಿಯು ತಾಲೂಕಿನಲ್ಲಿ ಒಟ್ಟು 12.42 ಕಿ.ಮೀ ಇದ್ದು, ಈಗಾಗಲೇ 10.89 ಕಿ.ಮೀ ಕಾಮಗಾರಿಯಾಗಿದೆ. ಇನ್ನು 1.53 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆಗೆ ಒಟ್ಟು 11 ಹಳ್ಳಿ ಒಳಪಟ್ಟಿದ್ದು, ಅಗತ್ಯ ಭೂಸ್ವಾದಿನ ಪ್ರಕ್ರಿಯೆ ಮುಗಿದಿದೆ ಎಂದರು.
ಭದ್ರಾ ಮೇಲ್ದಾಂಡೆ ಯೋಜನೆಯಲ್ಲಿ ಒಟ್ಟು 1.58 ಟಿಎಂಸಿ ನೀರು ಹಂಚಿಕೆಯಾಗಿದ್ದು, 14 ಕೆರೆಗಳನ್ನು ತುಂಬಿಸಲು 1.29 ಟಿಎಂಸಿ ಹಾಗೂ ಒಟ್ಟು 4,657 ಹೆಕ್ಟರ್ಗೆ 0.295ಟಿಎಂಸಿ ನೀರು ಹಂಚಿಕೆಯಾಗಿದೆ. ಈ ಕಾಮಗಾರಿಯು ಒಟ್ಟು 26.74ಕಿ.ಮೀ ಉದ್ದವಿದ್ದು, 10.50ಕಿ.ಮೀ ಕಾಮಗಾರಿ ಮುಗಿದಿದೆ. ಇನ್ನು 7.20ಕಿ.ಮೀ ಕಾಮಗಾರಿ ನಡೆಯುತ್ತಿದ್ದು, 9.05 ಕಿ.ಮೀ ಕಾಮಗಾರಿ ಪ್ರಾರಂಭವಾಗಬೇಕಿದೆ. ಹೇಮಾವತಿ ಕಾಮಗಾರಿಯಲ್ಲಿ ಒಟ್ಟು 0.80 ಟಿಎಂಸಿ ನೀರು ಹಂಚಿಕೆಯಾಗಿದ್ದು, ಒಟ್ಟು 26 ಕೆರೆಗಳಲ್ಲಿ 4 ಕೆರೆಗಳು ಏತ ನೀರಾವರಿ ಹಾಗೂ 24 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ಹರಿಸಲಾಗುವುದು. ಈ ಯೋಜನೆಗಳು ಕ್ಷೇತ್ರದ ರೈತರಿಗೆ ಅನುಕೂಲವಾಗಲಿದ್ದು, ರೈತರು ಸಹಕರಿಸಬೇಕು, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಕಲಾವಿದರ ಸಂಘ, ವಿದ್ಯಾರ್ಥಿ ಸಂಘಟನೆ, ಬಿಜೆಪಿ ಬೆಂಬಲ
ಆಡಳಿತಸೌಧದ ಮುಂಭಾಗ ನಡೆಯುತ್ತಿರುವ ನೀರಾವರಿ ಹೋರಾಟಗಾರರ ಪ್ರತಿಭಟನೆಗೆ ಮಂಗಳವಾರ ವಿದ್ಯಾರ್ಥಿ ಸಂಘಟನೆಗಳು, ಕಲಾವಿದರ ಸಂಘ, ಬಿಜೆಪಿ ಮುಖಂಡರು ಬೆಂಬಲ ಸೂಚಿಸಿದರು. ಶಿಲ್ಪಕಲಾ ಅಕಾಡಮಿ ಮಾಜಿ ಸದಸ್ಯ ಶಿಲ್ಪಿ ವಿಶ್ವನಾಥ್ ಕಾವೇರಿ ಮಾತೆಯನ್ನು ಕೆತ್ತಿದರೆ, ಚಿತ್ರಕಲಾ ಕಲಾವಿದ ಗಂಗಾಧರ್ ಮಗ್ಗದಮನೆ ಬ್ಯಾನರ್ ಬರೆಯುವ ಮೂಲಕ ಬೆಂಬಲ ಸೂಚಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಆರ್.ಶಶಿಧರ್ ಮಾತನಾಡಿ, ಪ್ರತಿಭಟನೆಯಲ್ಲಿ ಪಕ್ಷಾತಿತವಾಗಿ ಪಾಲ್ಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಹೇಮಾವತಿ ನಾಲಾ ಕಾಮಗಾರಿ ಮುಗಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದರು. ಕಲಾವಿದರಾದ ಮಲ್ಲಿಗೆರೆ ರೇಣುಕಾ, ನರಸಿಂಹಯ್ಯ, ರವೀಶ್, ಲೋಕೇಶ್, ಗಂಗಾಧರ್, ಜಗದೀಶ್, ಅಭಿ, ರಿಯಾಜ್, ಜಯಪ್ರಕಾಶ್ ಇದ್ದರು. water
ಮುಂದಿನ ಭಾನುವಾರದೊಳಗೆ ದಬ್ಬೇಘಟ್ಟದ ವರೆಗೆ ಕಾಮಗಾರಿ ಪೂರ್ಣಗೊಳಿಸಿ ನವಿಲೇ ಕೆರೆಗೆ ನೀರು ಹರಿಸಲಾಗುವುದು. ನಂತರ ಚಿಕ್ಕನಾಯಕನಹಳ್ಳಿ ಭಾಗದಲ್ಲಿ 1.5 ಕಿ.ಮೀ ಕಾಮಗಾರಿ ಆಗ ಬೇಕಿದ್ದು, ಎರಡು ಸೇತುವೆ ಕಟ್ ಆ್ಯಂಡ್ ಕವರ್ ಮಾಡಬೇಕು. ಕಾಮಗಾರಿ ಪೂರ್ಣಗೊಳಿಸಲು ಮಾಚ್ 27ರವರೆಗೆ ಇವರಿಗೆ ಅವಕಾಶವಿದ್ದು, ಅಷ್ಟರಲ್ಲಿ ಮುಗಿಸಲಾಗುವುದು.
> ಫಣಿರಾಜ್, ಹೇಮಾವತಿ ಚೀಫ್ ಇಂಜನಿಯರ್