ಹುನಗುಂದ-ಇಳಕಲ್ಲ ತಾಲೂಕಿನ ಅನ್ನದಾತರು ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು. ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಕೃಷ್ಣಾ ಜಾಲಿಹಾಳ, ಮುಖಂಡರಾದ ಮಲ್ಲಣ್ಣ ಕುಂಟೋಜಿ, ಚನ್ನಬಸಪ್ಪ ಇಳಕಲ್ಲ, ಗುರು ಗಾಣಿಗೇರ, ಶರಣಪ್ಪ ಹವಾಲ್ದಾರ ಇದ್ದರು.
- ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಕೃಷ್ಣಾ ಜಾಲಿಹಾಳ ಒತ್ತಾಯ
- ಕೃಷ್ಣೆಗೆ ಬಾಗಿನ ಅರ್ಪಿಸಿದ ಅನ್ನದಾತರು
ಕೂಡಲಸಂಗಮ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಆಲಮಟ್ಟಿ ಜಲಾಶಯದ ನೀರು ತುಂಬಿಕೊಂಡಿದೆ. ಸರ್ಕಾರ ಆಲಮಟ್ಟಿ ಜಲಾಶಯದ ಎಡ, ಬಲ ದಂಡೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಕೃಷ್ಣಾ ಜಾಲಿಹಾಳ ಹೇಳಿದರು.
ಹುನಗುಂದ-ಇಳಕಲ್ಲ ತಾಲೂಕಿನ ರೈತರ ಮುಖಂಡರು ಗುರುವಾರ ಹಮ್ಮಿಕೊಂಡಿದ್ದ ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಧ್ಯ ಕರ್ನಾಟಕ, ಕರಾವಳಿ ಭಾಗದಲ್ಲಿ ಮಳೆಯಾಗಿದೆ.
ನಮ್ಮ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆಲಮಟ್ಟಿ ಜಲಾಶಯದ ನೀರು ತುಂಬಿದ್ದರಿಂದ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಮಲ್ಲಣ ತುಂಬದ ಮಾತನಾಡಿ, ಕಾಲುವೆಗಳು ಮುಳ್ಳುಕಂಟಿಯಿಂದ ತುಂಬಿವೆ. ಸ್ವಚ್ಛ ಮಾಡಿಸಿ ಕಾಲುವೆಗೆ, ತಾಲೂಕಿನ ಹನಿ ನೀರಾವರಿ ಯೋಜನೆಗೆ ನೀರು ಹರಿಸುವ ಕಾರ್ಯ ಸರ್ಕಾರ ಮಾಡಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿ ಎತ್ತುವ ಕಾರ್ಯ ಮಾಡಬೇಕು ಎಂದರು.
ನವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್ ಮಾತನಾಡಿ, ಈ ವರ್ಷ ರಾಜ್ಯ ಬರಗಾಲ ಎದುರಿಸುತ್ತಿದೆ. ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಜಲಾಶಯ ತುಂಬಿರುವುದರಿಂದ ನದಿಯ ದಡದ ರೈತರು ನೀರನ್ನು ಮಿತವಾಗಿ ಬಳಸಬೇಕು. ಕೃಷ್ಣಾ ನದಿ ತುಂಬಿರುವುದರಿಂದ ಬಾಗಿನ ಅರ್ಪಿಸುತ್ತಿದ್ದೇವೆ ಎಂದರು.
ಮಲ್ಲಣ್ಣ ಕುಂಟೋಜಿ, ಚನ್ನಬಸಪ್ಪ ಇಳಕಲ್ಲ, ಗುರು ಗಾಣಿಗೇರ, ಶರಣಪ್ಪ ಹವಾಲ್ದಾರ, ಮಲ್ಲನಗೌಡ ಪಾಟೀಲ, ಉಮೇಶ ಕಲ್ಮಡಿ, ಸಿದ್ಧಯ್ಯ ಹಿರೇಮಠ, ಎಂ.ಎಸ್. ವೀರಾಪುರ, ವೀರೇಶ ನೆರಬೆಂಚಿ, ಹುಸೇನ ನಾಯಕ ಮುಂತಾದವರು ಇದ್ದರು.