ಕಲಾದಗಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರಾದ ಮುತ್ತಪ್ಪ ಕೋರವಾರ, ಕಾಶಿಲಿಂಗ ಮೆಳ್ಳಿಗೇರಿ, ಯಲ್ಲಪ್ಪ ಹೆಗಡೆ ನೇತತ್ವದಲ್ಲಿ ಸೇರಿ ವಿವಿಧ ಗ್ರಾಮಗಳ ರೈತರ ಸಭೆ ನಡೆಯಿತು. ಕೆರೂರು, ನರೇನೂರು, ಮಾಳಗಿ, ಚಿಂಚಲಿಕಟ್ಟಿ ರೈತರು, ಕೆಬಿಜೆಎನ್‌ಎಲ್ ಎಇಇ ವಿಶ್ವನಾಥ ನೀಲಣ್ಣವರ ಇತರರಿದ್ದರು.
- ಕೆಬಿಜೆಎನ್‌ಎಲ್ ಭರವಸೆಯೊಂದಿಗೆ ಪ್ರತಿಭಟನೆ ವಾಪಸ್
- ಜಾಕ್‌ವೆಲ್ ಬಳಿ ಹೋರಾಟಕ್ಕೆ ಸಜ್ಜಾಗಿದ್ದ ರೈತರೊಂದಿಗೆ ಅಧಿಕಾರಿಗಳ ಮಾತುಕತೆ ಯಶಸ್ವಿ
ಕಲಾದಗಿ: ಹೆರಕಲ್ ಏತ ನೀರಾವರಿ (ದಕ್ಷಿಣ) ಜಾಕ್‌ವೆಲ್‌ನಿಂದ ಕಳಸಕೊಪ್ಪ ಕೆರೆ ಸೇರಿ ವಿವಿಧ ಕೆರೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದರೂ, ಕೆಬಿಜೆಎನ್‌ಎಲ್ ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮಂಗಳವಾರ ಹಿಂತೆಗೆದುಕೊಂಡರು.
ಗ್ರಾಮದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರಾದ ಮುತ್ತಪ್ಪ ಕೋರವಾರ, ಕಾಶಿಲಿಂಗ ಮೆಳ್ಳಿಗೇರಿ, ಯಲ್ಲಪ್ಪ ಹೆಗಡೆ ನೇತತ್ವದಲ್ಲಿ ಕೆರೂರು, ನರೇನೂರು, ಮಾಳಗಿ, ಚಿಂಚಲಿಕಟ್ಟಿ ಸೇರಿ ವಿವಿಧ ಗ್ರಾಮಗಳ ರೈತರು ಸಭೆ ನಡೆಸಿ ಜಾಕ್‌ವೆಲ್ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.
ಈ ವೇಳೆ ಸಿಪಿಐ ಆರ್.ಎಸ್. ಬಿರಾದಾರ ಮಧ್ಯಪ್ರವೇಶಿಸಿ ಕೆಬಿಜೆಎನ್‌ಎಲ್ ಎಇಇ ವಿಶ್ವನಾಥ ನೀಲಣ್ಣವರ ಹಾಗೂ ಎಇ ನವೀನ್ ಅವರನ್ನು ಸ್ಥಳಕ್ಕೆ ಕರೆಸಿ ಮಾತುಕತೆಗೆ ಅವಕಾಶ ಕಲ್ಪಿಸಿದರು. ರೈತರು ಕಲಸಕೊಪ್ಪ ಸೇರಿ ಕೆರೆಗಳನ್ನು ಕೂಡಲೇ ತುಂಬಿಸುವಂತೆ ಹಾಗೂ ಹೆರಕಲ್ ಏತ ನೀರಾವರಿ (ದಕ್ಷಿಣ) ವಿಸ್ತರಣಾ ಯೋಜನೆ ಮತ್ತು ಕೆರೂರು ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಇಇ ವಿಶ್ವನಾಥ ನೀಲಣ್ಣವರ, ಜಾಕ್‌ವೆಲ್‌ನ ಟಿಸಿ ದುರಸ್ತಿಯ ಕೆಲಸ ಅಂತಿಮ ಹಂತದಲ್ಲಿದ್ದು, ಆಗಸ್ಟ್ 5ರಿಂದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು. ಉಳಿದ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಸಮಸ್ಯೆ ಇರುವುದರಿಂದ ಗ್ರಾಮಸಭೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ಸಿದ್ದಪ್ಪ ಬಳಗಾನೂರು, ಸದಾಶಿವ, ಗೋವಿಂದಪ್ಪ ಬೆಳಗುಂಟಿ, ಭರಮಪ್ಪ ಉದಗಟ್ಟಿ, ಯಲ್ಲಪ್ಪ ಉಪ್ಪಾರ, ರೇವಣಸಿದ್ದಪ್ಪ ಕಲಾಲ ಸೇರಿ ಹಲವರು ಭಾಗವಹಿಸಿದ್ದರು. ಸಿಪಿಐ ಆರ್.ಎಸ್. ಬಿರಾದಾರ ನೇತತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.