ಮಡುವಿನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ನೀರಿನ ಟ್ಯಾಂಕ್.  
ರಾಜ್ಯ

ಅಪಾಯದ ಅಂಚಿನಲ್ಲಿದೆ ನೀರಿನ ಟ್ಯಾಂಕ್

ಪ್ರಮುಖ ಮುಖ್ಯಾಂಶಗಳು

  • ಯಡಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡುವಿನಹಳ್ಳಿ
  • ನೀರಿನ ಟ್ಯಾಂಕ್ ಅಪಾಯದ ಅಂಚಿನಲ್ಲಿದ್ದು
ನಂಜನಗೂಡು: ತಾಲೂಕಿನ ಯಡಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡುವಿನಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ನೀರಿನ ಟ್ಯಾಂಕ್ ಅಪಾಯದ ಅಂಚಿನಲ್ಲಿದ್ದು, ಗ್ರಾಮಸ್ಥರು ಆತಂಕದಲ್ಲೇ ಕಾಲ ಕಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ಬಳಕೆಗೆಂದು ನೀರು ಸರಬರಾಜು ಮಾಡುವ ಟ್ಯಾಂಕ್ ಇದಾಗಿದ್ದು, ಇದನ್ನು ದುರಸ್ತಿಪಡಿಸುವ ಕೆಲಸಕ್ಕೆ ಸಂಬಂಧ ಪಟ್ಟ ಇಲಾಖೆಯಾಗಲೀ ಅಥವಾ ಗ್ರಾಮ ಪಂಚಾಯಿತಿಯಾಗಲೀ ಬಹು ವರ್ಷಗಳಿಂದ ಗಮನವನ್ನೇ ಹರಿಸಿಲ್ಲ. ನಿರ್ವಹಣೆ ಕೊರತೆಯಿಂದ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಬಹುದೊಡ್ಡ ಅಪಾಯ ಸೃಷ್ಟಿಸುವ ಸಾಧ್ಯತೆ ಇದೆ. ಇನ್ನು ಟ್ಯಾಂಕ್‌ನ ಕೆಳಭಾಗದ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ ಮತ್ತು ಸಾರ್ವಜನಿಕರ ಸಂಚಾರ ಮಾರ್ಗವಿದ್ದು, ಟ್ಯಾಂಕ್‌ನ ಸಿಮೆಂಟ್ ಮತ್ತು ಕಬ್ಬಿಣದ ಸರಳುಗಳು ಉದುರಿ ಬೀಳುತ್ತಿರುವ ಕಾರಣ ಅಪಾಯ ಸಂಭವಿಸಿದೆ ಹೊಣೆ ಯಾರು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
1989ರಲ್ಲಿ ನಿರ್ಮಾಣವಾಗಿರುವ ಈ ನೀರಿನ ಟ್ಯಾಂಕ್ 50,000 ಲೀಟರ್ ಜಲ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಕಾಲ ಕಾಲಕ್ಕೆ ತಕ್ಕಂತೆ ಸುಣ್ಣ, ಬಣ್ಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕಂಡೇ ಇಲ್ಲ. ಕಟ್ಟಿದಾಗ ಹೇಗಿತ್ತೋ ಹಾಗೆಯೇ ಇಂದಿಗೂ ಇದೆ. ಹಾಗಾಗಿ ಟ್ಯಾಂಕ್‌ನ ಸಿಮೆಂಟ್ ಚಕ್ಕೆಗಳು ಹಲವು ವರ್ಷಗಳಿಂದ ಉದುರಿ ಬೀಳುತ್ತಲೇ ಇದೆ. ಇನ್ನು ಟ್ಯಾಂಕ್ ಬಿರುಕು ಬಿಟ್ಟಿದ್ದು, ಕಂಬಿಗಳು ತುಕ್ಕು ಹಿಡಿದು ಹಾಳಾಗಿವೆ. ಆರು ಕಂಬಗಳು ಟ್ಯಾಂಕ್‌ಗೆ ಆಧಾರವಾಗಿದ್ದು, ಅವೂ ಸಹ ಶಿಥಿಲಗೊಂಡಿವೆ. ಇನ್ನೊಂದಿಷ್ಟು ಸಮಯ ಸಾಗಿದರೆ ಟ್ಯಾಂಕ್ ಸಂಪೂರ್ಣ ಕುಸಿದು ಬೀಳುವ ಎಲ್ಲ ಸಾಧ್ಯ ದಟ್ಟವಾಗಿದೆೆ.
ಮಡುವಿನಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಶೆಟ್ಟರ ಬೀದಿಯಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಶೆಟ್ಟರ ಬೀದಿ ಬಡಾವಣೆಯವರು ನಿತ್ಯದ ವ್ಯವಹಾರಗಳಿಗಾಗಿ ಈ ಮಾರ್ಗದಲ್ಲೇ ತೆರಳಬೇಕು. ಟ್ಯಾಂಕ್‌ನ 50 ಮೀಟರ್ ದೂರದಲ್ಲಿ 10ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಹಾಗೂ ಪಾಲಕರು, ಅಂಗನವಾಡಿ ಕಾರ್ಯಕರ್ತೆಯರು ಇದೇ ದಾರಿಯಲ್ಲಿ ಸಂಚರಿಸಲಿದ್ದಾರೆ,
ಹಲವಾರು ವರ್ಷಗಳಿಂದ ಓವರ್ ಹೆಡ್ ಟ್ಯಾಂಕ್ ಸುಣ್ಣ ಬಣ್ಣವನ್ನೇ ಕಂಡಿಲ್ಲ. ಟ್ಯಾಂಕ್‌ನ ಕಂಬಿಗಳು ತುಕ್ಕು ಹಿಡಿದು ಚೆಕ್ಕೆಗಳು ಉದುರಿ ಬೀಳುತ್ತಿದೆ. ಗ್ರಾಮ ಪಂಚಾಯಿತಿಗೆ ಇದರ ಬಗ್ಗೆ ಅರಿವಿದ್ದರೂ ಸಹ ಜಾಣ ಕುರುಡು ಪ್ರದರ್ಶಿಸುತ್ತಿದೆ. ಹೆಚ್ಚು ಕಡಿಮೆಯಾದರೆ ಗ್ರಾಮ ಪಂಚಾಯಿತಿಯೇ ನೇರ ಹೊಣೆ ಹೊರಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ನಿತ್ಯ ಕೊಳಚೆ ನೀರು ಸರಬರಾಜು: ಟ್ಯಾಂಕ್‌ನ ಮೇಲ್ಭಾಗದಲ್ಲಿ ಸರಿಯಾದ ಮುಚ್ಚಳ ಇಲ್ಲದಿರುವುದರಿಂದ ಪಕ್ಷಿಗಳ ಮಲಮೂತ್ರ, ಕೆಲವೊಮ್ಮೆ ಪಕ್ಷಿಗಳು ಅದರಲ್ಲಿಯೇ ಬಿದ್ದು ಸಾಯುತ್ತವೆ. ಅದನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸದಿರುವುದರಿಂದ ಒಳಗಡೆ ಪಾಚಿ ಕಟ್ಟಿದೆ. ಅದೇ ಕೊಳಚೆ ನೀರು ನಿತ್ಯ ಮನೆಗಳಿಗೆ ಸರಬರಾಜು ಆಗುತ್ತದೆ ಎಂಬುದು ಗ್ರಾಮಸ್ಥರ ದೂರು.
ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದರೂ, ಸುಮಾರು 600 ಮನೆಗಳಿಗೆ ನೀರು ಸರಬರಾಜು ಮಾಡಲು ಟ್ಯಾಂಕ್‌ಗೆ ನೀರು ಪೂರೈಸಲು ಸಲಾಗುತ್ತಿದೆ. ಗಾರೆ ಕಳಚುತ್ತಿರುವುದರಿಂದ ಟ್ಯಾಂಕ್ ಡೂಮ್ ಸುತ್ತ ನೀರು ಸೋರಿಕೆಯಾಗುತ್ತಿದೆ. ನೀರಿನ ಟ್ಯಾಂಕ್ ಅಕ್ಕಪಕ್ಕದ ಮನೆಗಳ ಮಧ್ಯವಿದ್ದು, ಇದರಿಂದ ನೇರ ಮನೆಗಳಿಗೆ ಹಾನಿಯಾಗುತ್ತದೆ ಎಂಬುದು ನಿವಾಸಿಗಳ ಆತಂಕ. ಕೂಡಲೇ ಸಂಬಂಧಪಟ್ಟವರು ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಅನ್ನು ದುರಸ್ತಿ ಮಾಡಬೇಕು ಅಥವಾ ತೆರವು ಮಾಡಿ ಮುಂದಾಗುವ ಅನಾಹುತ ತಡೆಯಬೇಕು ಎಂಬುದು ನಿವಾಸಿಗಳ ಒತ್ತಾಯ.
ಹಲವು ವರ್ಷಗಳಿಂದ ನೀರಿನ ಟ್ಯಾಂಕ್ ಶಿಥಿಲಗೊಂಡಿರುವುದು ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಪ್ರಮುಖರಿಗೂ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಕ್ರಮ ಕೈಗೊಂಡಿಲ್ಲ. ನೀರಿನ ಟ್ಯಾಂಕ್ ಊರಿನ ಮಧ್ಯಭಾಗದಲ್ಲಿದೆ. ಶಿಥಿಲವಾಗಿರುವ ಕಾರಣಕ್ಕಾಗಿ ಇದು ಅಪಾಯದ ಕರೆಗಂಟೆಯಾಗಿದೆ. ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದರ ಬಗ್ಗೆ ತುರ್ತು ಗಮನ ಹರಿಸಬೇಕಿದೆ.
ಮಹೇಶ್ ಗುರು ಮಡುವಿನಹಳ್ಳಿ ಗ್ರಾಮಸ್ಥ
ಮಡುವಿನಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕ್‌ನ ಅಕ್ಕ ಪಕ್ಕದಲ್ಲೇ ಸಾರ್ವಜನಿಕರ ಸಂಚಾರವಿರುತ್ತದೆ. ಸನಿಹದಲ್ಲೇ ಅಂಗನವಾಡಿ ಕೇಂದ್ರವೂ ಇದೆ. ಏನಾದರೂ ತೊಂದರೆಯಾದರೆ ಹಲವು ಕುಟುಂಬಗಳು ನೋವು ಅನುಭವಿಸುವ ಸ್ಥಿತಿ ಎದುರಾಗಲಿದೆ. ಇದರ ಅರಿವಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸದೇ ಮೌನವಾಗಿರುವುದು ಬೇಸರದ ಸಂಗತಿ.
ಮಂಜು ಗ್ರಾಪಂ ಸದಸ್ಯ
ಶಿಥಿಲವಾಗಿರುವ ನೀರಿನ ಟ್ಯಾಂಕ್ ಬಗ್ಗೆ ಹಲವು ಬಾರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪಂಚಾಯಿತಿ ವತಿಯಿಂದ ಪತ್ರ ಬರೆಯಲಾಗಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ತುರ್ತು ಗಮನ ಹರಿಸಬೇಕಾಗಿದೆ. ಗ್ರಾಮಸ್ಥರಿಗೆ ತೊಂದರೆಯಾಗದಂತೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು.
ರಾಜೇಶ್ ಜೆರಾಲ್ಡ್ ತಾಪಂ ಕಾರ್ಯ ನಿರ್ವಹಣಾಧಿಕಾರಿ, ನಂಜನಗೂಡು