ತೇರದಾಳ ಪುರಸಭೆ ಮುಂಭಾಗದಲ್ಲಿ ನೀರು ಸರಬರಾಜು ಸಿಬ್ಬಂದಿ ನೀರು ಪೂರೈಕೆ ಸ್ಥಗಿತಗೊಳಿಸಿ, ಮುಷ್ಕರ ಆರಂಭಿಸಿದರು. ಭರತೇಶ ಗುಡಕನ್ನವರ, ರಮೇಶ ದೊಡಮನಿ, ಸುಖದೇವ ಕಾಂಬಳೆ, ಧರೆಪ್ಪ ಬನಸೊಡಿ, ರವಿ ರೋಡಕರ ಇತರರಿದ್ದರು.
- ನೀರು ಸರಬರಾಜು ಸಿಬ್ಬಂದಿ ಮುಷ್ಕರ
- ಕಳೆದ ಎಂಟು ತಿಂಗಳ ವೇತನ ಬಾಕಿ ಪಾವತಿಗೆ ಆಗ್ರಹ
ತೇರದಾಳ: ಸ್ಥಳಿಯ ಪುರಸಭೆ ವ್ಯಾಪ್ತಿಯ ನೀರು ಸರಬರಾಜು ವಿಭಾಗದಲ್ಲಿ ಸುಮಾರು 18ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಕಳೆದ 8-9 ತಿಂಗಳ ವೇತನ ಬಾಕಿ ಇರುವುದರಿಂದ ಭಾನುವಾರದಿಂದ ಅನಿರ್ದಿಷ್ಟಾವಧಿವರೆಗೆ ನೀರು ಪೂರೈಕೆ ಕಾರ್ಯವನ್ನು ಕಾರ್ಮಿಕರು ಸ್ಥಗಿತಗೊಳಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿಯೇ ವೇತನಕ್ಕಾಗಿ ಆಡಳಿತಾಧಿಕಾರಿಯವರಿಗೂ ಮನವಿ ಕೊಟ್ಟರೂ ಕ್ಯಾರೆ ಎನ್ನುತ್ತಿಲ್ಲ. ಜೊತೆಗೆ ಸಂಸಾರದ ಆರ್ಥಿಕ ತಾಪತ್ರಯ ತಾಳಲಾರದೆ ಕಾರ್ಮಿಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಹೀಗಾಗಿ ಪಟ್ಟಣದಲ್ಲಿ ನೀರು ಬಾರದೆ ಜನತೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಬಿಸಿಲಿನ ತಾಪಕ್ಕೆ ಜನ ಹೊರಬಾರದೆ ಜನತೆ ಗೋಳಾಡುವ ಸ್ಥಿತಿ ನಿರ್ಮಾಣವಾಗಿದ್ದರೆ, ಇಡಿ ಕುಟುಂಬವನ್ನು ನಿರ್ವಹಿಸಲಾಗದೇ ಸಾಲದ ಸುಳಿಯಲ್ಲಿ ಒದ್ದಾಡುವ ಸ್ಥಿತಿ ಕಾರ್ಮಿಕರಿಗೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವರೇ ಎಂಬುದನ್ನು ಕಾದು ನೊಡಬೇಕಿದೆ.
"
ನೀರು ಸರಬರಾಜು ಸಿಬ್ಬಂದಿ ವೇತನ ಕಳೆದ ಎಂಟು ತಿಂಗಳಿಂದ ಬಾಕಿಯಿದ್ದು, ಮೇ 4ರಂದು ನಾಲ್ಕು ತಿಂಗಳ ವೇತನ ಮಾಡುತ್ತೇವೆ, ತದನಂತರ ಇನ್ನುಳಿದ ವೇತನ ಕೊಡುವ ವ್ಯವಸ್ಥೆ ಮಾಡಲಾಗುವುದು.
ಗಿಡ್ಡಿ, ಮುಖ್ಯಾಧಿಕಾರಿ, ಪುರಸಭೆ.
"
ಕಳೆದ ಒಂಬತ್ತು ತಿಂಗಳಿಂದ ವೇತನ ಬಾಕಿ ಉಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕೊಡುವುದಾಗಿ ಹೇಳಿ, ಇಲ್ಲಿಯವರೆಗೂ ಕೊಟ್ಟಿರುವುದಿಲ್ಲ. ಎಸಿ ಅವರಿಗೂ ಮನವಿ ಸಲ್ಲಿಸಲಾಗಿದೆ. ವೇತನ ಕೊಡುವವರೆಗೆ ನಾವು ಕೆಲಸ ಮಾಡುವುದಿಲ್ಲ.
ಸುಖದೇವ ಕಾಂಬಳೆ, ಭರತೇಶ ಗುಡಕನ್ನವರ, ಸಿಬ್ಬಂದಿ, ತೇರದಾಳ.