ಕಾಲುವೆಗಳು ಮುಚ್ಚಿಹೋದ ಕಾರಣ ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು
ಲೇಔಟ್, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ವೃದ್ಧಿ ನೆಪ, ಒತ್ತುವರಿಯಿಂದಾಗಿ ರಸ್ತೆ ಪಕ್ಕದ ಕಾಲುವೆಗಳು ಮುಚ್ಚಿಹೋಗುತ್ತಿವೆ. ಪರಿಣಾಮ ಎತ್ತರದ ಪ್ರದೇಶದಿಂದ ನೀರು ಹರಿದು ಬರದೆ ಕೆರೆ-ಕುಂಟೆಗಳು ಬರಿದಾಗುತ್ತಿದ್ದು, ಮುಂದೊಂದು ದಿನ ಜಲಮೂಲಗಳ ಕುರುಹು ಕಣ್ಮರೆಯಾಗುವ ಆತಂಕ ಎದುರಾಗಿದೆ.
ಕೆರೆ-ಕುಂಟೆಗಳಿಗೆ ನೀರಿನ ಆಧಾರವೇ ಕಾಲುವೆಗಳು. ಆದರೆ ಕಾಲುವೆಗಳೇ ಇಂದು ನೇಪಥ್ಯಕ್ಕೆ ಸರಿಯುತ್ತಿವೆ.
ಗ್ರಾಮೀಣ ಭಾಗದಲ್ಲಿ ಊರ ಪಕ್ಕದಲ್ಲೋ, ಸ್ಪಲ್ಪ ದೂರದಲ್ಲೋ ಒಂದಲ್ಲ ಒಂದು ಕೆರೆ&ಕುಂಟೆಗಳು ಇದ್ದೇ ಇವೆ. ಎತ್ತರದ ಪ್ರದೇಶದಿಂದ ಮಳೆ ನೀರು ಹರಿದು ಕೆರೆ&ಕುಂಟೆ ಸೇರಲು ಗ್ರಾಮದ ರಸ್ತೆಯುದ್ದಕ್ಕೆ ಕಾಲುವೆಗಳೂ ಇವೆ. ಆದರೆ ಇಂದು ವಿವಿಧ ಕಾರಣಗಳಿಂದ ರಸ್ತೆ ಪಕ್ಕದ ಕಾಲುವೆಗಳನ್ನು ಅವೈಜ್ಞಾನಿಕವಾಗಿ ಅಗೆದು ಹಾಗೆ ಬಿಡುವ ಕಾರಣ ಬಹುತೇಕ ಮುಚ್ಚಿಹೋಗುತ್ತಿದ್ದು, ಕೆರೆ&ಕುಂಟೆಗಳಿಗೆ ಮಳೆ ನೀರುಹರಿದು ಬರದ ಪರಿಣಾಮ ಜಲಮೂಲಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ.
ಕೆರೆ-ಕುಂಟೆಗಳು ಅಂತರ್ಜಲ ವೃದ್ಧಿಗೆ ಪೂರಕ. ಮುನುಷ್ಯರಿಗೆ ಕುಡಿಯುವ ನೀಡು, ಕೃಷಿ ಚಟುವಟಿಕೆ ಅಲ್ಲದೇ ಪ್ರಾಣಿ-ಪಕ್ಷಿಗಳ ಬಾಯಾರಿಕೆಯನ್ನೂ ತಣಿಸುತ್ತವೆ. ಆದರೆ ಇಂದು ಅಭಿವೃದ್ಧಿ ನೆಪ, ಇಲಾಖೆಗಳ ಇಚ್ಛಾಶಕ್ತಿ ಕೊರತೆಯಿಂದ ತಾಲೂಕಿನಲ್ಲಿ ಕಾಲುವೆಗಳು ನಿರ್ವಹಣೆ ಇಲ್ಲದೆ ಮುಚ್ಚಿಕೊಳ್ಳುತ್ತಿವೆ. ಮಳೆ ನೀರು ಕಾಲುವೆ ಮೂಲಕ ಕೆರೆ0-ಕುಂಟೆ ಸೇರುವ ಬದಲು ಸಿಕ್ಕಸಿಕ್ಕ ಕಡೆ ಹರಿಯುತ್ತದೆ. ಕೆಲವೆಡೆ ಜಮೀನು, ಜನವಸತಿಗೆ ನುಗ್ಗಿ ಅವಾಂತರವನ್ನೂ ಸೃಷ್ಟಿಸುತ್ತಿದೆ. ಕೆಲವೊಮ್ಮೆ ನಡುರಸ್ತೆಯಲ್ಲೇ ಮಳೆ ನೀರು ನದಿಯಂತೆ ಹರಿಯುತ್ತದೆ. ಕೆರೆ&ಕುಂಟೆಗಳಿಗೆ ಸೇರದೆ ಅನಗತ್ಯವಾಗಿ ನೀರು ಪೋಲಾಗುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಕಂಡೂಕಾಣದಂತೆ ಇರುವುದು ಜಲತಜ್ಞರ ಅಸಮಾಧಾನಕ್ಕೆ ಕಾರಣವಾಗಿದೆ.
ಅಭಿವೃದ್ಧಿ ಓಕೆ.. ಕಾಲುವೆ ನಿರ್ವಹಣೆ ಮಾಡಬೇಕಲ್ಲವೆ?
ಕುಡಿಯುವ ನೀರಿನ ಪೈಪ್, ಗ್ಯಾಸ್, ವಿದ್ಯುತ್ ಲೈನ್ ಅಳವಡಿಕೆ ಮತ್ತಿತರ ಕಾರಣಗಳಿಗೆ ರಸ್ತೆ ಪಕ್ಕದ ಕಾಲುವೆಗಳನ್ನು ಬೇಕಾಬಿಟ್ಟಿ ಅಗೆದು ನಂತರ, ಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ದುರಸ್ತಿ ಮಾಡುತ್ತಿಲ್ಲ. ಪರಿಣಾಮ ಒಂದಿಷ್ಟು ದಿನಗಳು ಕಳೆದಾಗ ಈ ಜಾಗದಲ್ಲಿ ಕಾಲುವೆಗಳು ಇದ್ದವೇ ? ಎಂಬ ಸಂಶಯ ಮೂಡುವಂತಾಗಿದೆ.
ನರೇಗಾ ಯೋಜನೆ ನಿಯಮ ಸಡಿಲಿಕೆ ಅಗತ್ಯ
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಕೆರೆ&ಕುಂಟೆ ಕಾಲುವೆ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳ ಮೂಲಕ ಒತ್ತು ನೀಡಲಾಗಿದೆ. ಆದರೆ ಯೋಜನೆಯ ಬಿಗಿಯಾದ ಕಾನೂನು&ಕಟ್ಟಳೆಯಿಂದ ಸಮುದಾಯ ಆಧಾರಿತ ಕೆಲಸಗಳಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದಾಗಿ ಕಾಲುವೆಗಳು ನಿರ್ವಹಣೆ ಕಾಣುತ್ತಿಲ್ಲ.
ಈ ಹಿಂದೆ ಸದಾ ಕಾಲ ಕೆರೆ&ಕುಂಟೆಗಳು ತುಂಬಿ ತುಳುಕುತ್ತಿದ್ದವು. ಆದರೆ ಕೆರೆಗೆ ಹರಿದು ಬರುವ ನೀರಿನ ಆಧಾರಗಳೇ ಇತ್ತೀಚೆಗೆ ಮುಚ್ಚಿಕೊಳ್ಳುತ್ತಿದ್ದು, ಕೆಲ ಕೆರೆಗಳಲ್ಲಿ ಬೊಗಸೆಯಷ್ಟೂ ನೀರು ಸಿಗದಂತಾಗಿದೆ. ಕುಡಿಯುವ ನೀರಿಗಾಗಿ ಕೆರೆ&ಕುಂಟೆಗಳನ್ನೇ ಆಶ್ರಯಿಸಿದ್ದ ಕಾಡು ಪ್ರಾಣಿ, ಪಗಳು ನೀರಿನ ದಾಹ ತೀರಿಸಿಕೊಳ್ಳಲು ಕೃಷಿ, ಜನವಸತಿಗಳಿಗೆ ಲಗ್ಗೆ ಇಡುತ್ತಿವೆ. ಇನ್ನಾದರೂ ಸಂಬಂಧಿತ ಅಧಿಕಾರಿಗಳು ತಾಲೂಕಿನ ನೈಸರ್ಗಿಕ, ಮಾನವ ನಿರ್ಮಿತ ಕಾಲುವೆಗಳನ್ನು ಸರಿಯಾಗಿ ನಿರ್ವಹಿಸಬೇಕಿದೆ.
ಕೆರೆ-ಕುಂಟೆಗಳಿಗೆ ಮಳೆ ನೀರು ಹರಿದು ಹೋಗುವ ಸ್ಥಳಗಳಿಗೆ ಯಾವುದೇ ಸಮಸ್ಯೆ ಬಾರದಂತೆ ಗ್ರಾಪಂನಿಂದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಕಾಲುವೆಗಳ ಬಗ್ಗೆ ಯಾವತ್ತೂ ಉದಾಸೀನ, ರ್ನಿಲಕ್ಷ ತಾಳದೆ ನರೇಗಾ ಮತ್ತಿತರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜಲಮೂಲ, ಆಧಾರಗಳ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದೆ.
| ಹೆಸರು ಹೇಳಲಿಚ್ಛಿಸದ ಗ್ರಾಪಂ ಅಭಿವೃದ್ಧಿ ಅಧಿಕಾರಿ
ಗ್ರಾಪಂಗಳಿಗೆ ಇಚ್ಛಾಶಕ್ತಿ ಬೇಕು: ಅಭಿವೃದ್ಧಿ ಕೆಲಸ ಒಂದೆಡೆಯಾದರೆ ರಸ್ತೆ ಪಕ್ಕದ ಕಾಲುವೆಗಳನ್ನು ಕೆಲ ಜಮೀನುಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನು ಕುಡಿಯುವ ನೀರು ಮತ್ತಿತರ ಕೆಲಸಗಳಿಗೆ ಹೆಚ್ಚಾಗಿ ರಸ್ತೆ ಪಕ್ಕದ ಜಾಗವನ್ನೇ ಬಳಸಲಾಗುತ್ತದೆ. ಅಭಿವೃದ್ಧಿಪಡಿಸಿದ ಜಾಗದಲ್ಲಿ ಮತ್ತೆ ಕಾಲುವೆ ನಿರ್ಮಿಸಿದರೆ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ಆದರೆ ಕೆಲ ಗ್ರಾಪಂಗಳು ತಮ್ಮ ಕೆಲಸವಾದರೆ ಸಾಕೆಂದು ಕಾಲುವೆಗಳ ಬಗ್ಗೆ ಮುತುವರ್ಜಿ ವಹಿಸದ ಕಾರಣ ಕಾಲುವೆಗಳೇ ರಸ್ತೆಯಾಗುತ್ತಿವೆ ಎಂದು ನಾಗೋಹಳ್ಳಿ ಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
-ವಿಭೂತಿಕೆರೆ ಶಿವಲಿಂಗಯ್ಯ, ರಾಮನಗರ