ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ನಿಂದ ಭೀಮಾ ನದಿಗೆ ನೀರು ಹರಿಸುತ್ತಿರುವುದು.
- ನದಿ ಪಾತ್ರದಲ್ಲಿ ಎಚ್ಚರಿಕೆ ವಹಿಸಲು ಸೂಚನೆ
- ಮುಳುಗಡೆ ಹಂತಕ್ಕೆ ತಲುಪಿದ ಭುಯ್ಯಾರ ಸೇತುವೆ
ಅಫಜಲಪುರ: ಮಹಾರಾಷ್ಟ್ರದ ಉಜನಿ ಹಾಗೂ ವೀರ ಜಲಾಶಯದ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದು ಹಾಗೂ ಒಳ ಹರಿವು ಹೆಚ್ಚಿದ್ದರಿಂದ ಮಂಗಳವಾರ ರಾತ್ರಿ ಸೊನ್ನ ಬ್ಯಾರೇಜ್ನಿಂದ 1ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ ಎಂದು ಕೆಎನ್ಎನ್ಎಲ್ ಎಇಇ ಸಂತೋಷ ಪಾಟೀಲ್ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಈಗಾಗಲೇ ಸೊನ್ನ ಭೀಮಾ ಬ್ಯಾರೇಜ್ನಿಂದ ಕೆಳ ಭಾಗಕ್ಕೆ 1,26,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಪರಿಸ್ಥಿತಿ ಅವಲಂಬಿಸಿ, ನೀರು ಹೆಚ್ಚಿಗೆ ಬಂದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿ ಪಾತ್ರಕ್ಕೆ ಇಳಿಯಬಾರದು. ಕೃಷಿ ಉಪಕರಣ, ದನ-ಕರುಗಳಿದ್ದರೆ ತಕ್ಷಣವೇ ಅಲ್ಲಿಂದ ತರಬೇಕು. ತಗ್ಗು ಪ್ರದೇಶದಲ್ಲಿ ವಾಸಿಸುವವರು ಅಂತಹ ಪ್ರದೇಶಗಳಿಂದ ಬೇರೆ ಕಡೆಗೆ ಸ್ಥಳಾಂತರವಾಗಬೇಕು. ಪ್ರತಿಯೊಬ್ಬರೂ ಜಾಗರೂಕತೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಸಲಹೆ ನೀಡಿದರು.
ಭೀಮಾ ನದಿಗೆ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದ ನೀರು ಬರುತ್ತಿರುವುದರಿಂದ ಮಣ್ಣೂರ ಯಲ್ಲಮ್ಮ ದೇವಸ್ಥಾನ, ತ್ತರಗಾ, ದೇವಲಗಾಣಗಾಪುರ, ಭುಯ್ಯಾರ ಸೇತುವೆಗಳು ಮುಳುಗುವ ಹಂತದಲ್ಲಿವೆ. ಸಾರ್ವಜನಿಕರ ಸುರಕ್ಷತೆಗೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು.
— > ಅರುಣಕುಮಾರ ಪಾಟೀಲ್, ಅಧ್ಯಕ್ಷ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ