Water problem in 23 villages 
ರಾಜ್ಯ

23 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಚಿಕ್ಕಬಳ್ಳಾಪುರ ಡೆಸ್ಕ್
ಚಿಕ್ಕಬಳ್ಳಾಪುರ: ಬೇಸಿಗೆಯ ಅವಧಿಯಲ್ಲಿ ನೀರಿನ ಹಾಹಾಕಾರ, ಮೇವು ಕೊರತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಚುರುಕಾಗಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಈಗ ಬೇಸಿಗೆಗಾಲದಲ್ಲಿ ಹಲವು ಸಮಸ್ಯೆಗಳು ಬಾಧಿಸಲಿದ್ದು ಜಿಲ್ಲೆಯಲ್ಲಿ ಮುಂಗಾರು ಮಾನ್ಸೂನ್​ ಅವಧಿ ಪ್ರಾರಂಭವಾಗುವವರೆಗೂ ನೀರಿನ ಹಾಹಾಕಾರದ ನಿರೀೆ ಇದೆ. ಇದಕ್ಕೆ ಮುಂಬರುವ 3 ತಿಂಗಳಲ್ಲಿ ಯಾವುದೇ ವ್ಯತ್ಯಯ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
"

ಜಿಲ್ಲೆಯಲ್ಲಿ ನೀರಿನ ಸಮಸ್ಯೆ

ಜಿಲ್ಲೆಯ 19 ಗ್ರಾಪಂಗಳ ವ್ಯಾಪ್ತಿಯ 23 ಗ್ರಾಮಗಳಿಗೆ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 66 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಿರುವ ಕಡೆ ಕೊಳವೆ ಬಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಗರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿನ 14 ವಾರ್ಡ್​ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 9 ಖಾಸಗಿ ಟ್ಯಾಂಕರ್​ ಹಾಗೂ 10 ಖಾಸಗಿ ಕೊಳವೆ ಬಾವಿ ಮೂಲಕ ಪ್ರಸ್ತುತ ನೀರು ಪೂರೈಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 21 ವಾರ್ಡ್​ಗಳಲ್ಲಿ ಸಮಸ್ಯೆ ಎದುರಾಗುವ ನಿರೀೆ ಹೊಂದಿದ್ದು ಇಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ತಾಲೂಕುಮಟ್ಟದ ಅಧಿಕಾರಿಗಳು, ಜಲ ಜೀವನ್​ ಮಿಷನ್​ ಯೋಜನೆಯ ಅನುಷ್ಠಾನದ ಕಾರ್ಯಪಾಲಕ ಅಭಿಯಂತರರು ಕುಡಿಯುವ ನೀರಿನ ಪೂರೈಕೆಯ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸೌಕರ್ಯ ಕಲ್ಪಿಸಿದ ಕೊಳವೆ ಬಾವಿಯಿಂದ ನೀರು ಹೊರ ತೆಗೆದ ಬಳಿಕಷ್ಟವೇ ಸಂಬಂಧಪಟ್ಟ ಸ್ಥಳಿಯ ಆಡಳಿತ ಸಂಸ್ಥೆಗಳ ಸುಪರ್ದಿಗೆ ನೀಡಬೇಕು ಎಂದರು.
"

ತೆರೆದ ಕೊಳವೆಬಾವಿ ಎಚ್ಚರಿಕೆ

ತೆರೆದ ಕೊಳವೆ ಬಾವಿಗಳಿಗೆ ಬಿದ್ದು ಪ್ರಾಣ ಹಾನಿ ಸಂಭವಿಸುವ ಪ್ರಕರಣಗಳಿಗೆ ಅವಕಾಶ ನೀಡದಿರಲು, ಸುರಕ್ಷತಾ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳಲು ತಹಸೀಲ್ದಾರ್​, ತಾಪಂ ಇಒ, ನಗರಾಡಳಿತ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯಾ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ನೀರು ಲಭಿಸದ ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚಬೇಕು. ಕೊಳವೆ ಬಾವಿಯಲ್ಲಿ ನೀರು ದೊರಕಿದರೂ ವಿದ್ಯುತ್​ ಸಂಪರ್ಕ ಇಲ್ಲವೇ ಇತರ ಸೌಕರ್ಯ ಕಲ್ಪಿಸುವಲ್ಲಿ ವಿಳಂಬ ಧೋರಣೆ ಸರಿಯಲ್ಲ ಎಂದು ಡಿಸಿ ತಿಳಿಸಿದರು.

ಜಲಜೀವನ್​ ಯೋಜನೆಯಡಿ ಅನುಮೋದನೆಯ ಕೊಳವೆ ಬಾವಿಗಳನ್ನು ಕೊರೆಸಿ ನೀರು ಪೂರೈಸುವಂತಹ ಕೆಲಸದಿಂದ ನೀರಿನ ಸಮಸ್ಯೆಯೇ ಉದ್ಬವವಾಗುವುದಿಲ್ಲ. ಇಲ್ಲಿ ಜಿಲ್ಲಾ ಮಟ್ಟದ ಯೋಜನಾ ಅಭಿಯಂತರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
"

ನಿರ್ದಾಣ್ಯ ಕ್ರಮ

ಯಾವುದೇ ಕಾರಣಕ್ಕೂ ಕೊಳವೆ ಬಾವಿಗಳಲ್ಲಿ ಬಿದ್ದು ಪ್ರಾಣ ಹಾನಿ ಆಗುವ ಪ್ರಸಂಗಗಳು ಜಿಲ್ಲೆಯಲ್ಲಿ ನಡೆಯಬಾರದು. ಒಂದು ವೇಳೆ ಸಂಭವಿಸಿದರೆ ಸಂಬಂಧಪಟ್ಟ ಅಭಿಯಂತರರು ಹಾಗೂ ಸ್ಥಳಿಯ ಅಧಿಕಾರಿಗಳ ವಿರುದ್ಧ ನಿರ್ದಾಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಡಿಯುವ ನೀರಿನ ಉದ್ದೇಶಕ್ಕೆ, ಇತರ ಯಾವುದೇ ಉದ್ದೇಶಕ್ಕಾಗಿ ಕೊರೆದ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾದ ವಿದ್ಯುತ್​ ಸಂಪರ್ಕ ಕಲ್ಪಿಸಿ ಮೋಟಾರ್​ ಪಂಪ್​ ಅಳವಡಿಸಬೇಕು. ಯಾವುದೇ ಸಮಸ್ಯೆಯಿಲ್ಲದೇ ನೀರು ಪೂರೈಸುವಂತಾಗಬೇಕು ಎಂದರು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಲ್​ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್​.ಭಾಸ್ಕರ್​, ಉಪ ವಿಭಾಗಾಧಿಕಾರಿ ಡಿ.ಎಚ್​.ಅಶ್ವಿನ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್​ ಕುಮಾರ್​, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್​ ಮತ್ತಿತರರು ಇದ್ದರು.