ಅಫಜಲಪುರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉಪ ತಹಸೀಲ್ದಾರ್​ ಘಾಳಪ್ಪ ಕಂಬಾರಗೆ ಮನವಿಪತ್ರ ಸಲ್ಲಿಸಿ ಹೋರಾಟ ಮುಕ್ತಾಯಗೊಳಿಸಲಾಯಿತು. ಶ್ರೀಮಂತ ಬಿರಾದಾರ, ರಮೇಶ ಶೆಟ್ಟಿ, ಶಾಂತಕುಮಾರ ಅಂಜುಟಗಿ ಇತರರಿದ್ದರು. 
ರಾಜ್ಯ

ಭೀಮೆಗೆ ನೀರು, ಅನಿರ್ದಿಷ್ಟಾವಧಿ ಧರಣಿ ಅಂತ್ಯ

ಪ್ರಮುಖ ಮುಖ್ಯಾಂಶಗಳು

  • ಅಫಜಲಪುರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯಿಂದ ಧರಣಿ
ಅಫಜಲಪುರ: ನಾರಾಯಣಪುರ ಜಲಾಶಯದಿಂದ ಬಳಗಾನೂರ ಕಾಲುವೆ ಮೂಲಕ 2.5 ಟಿಎಂಸಿ ನೀರನ್ನು ಭೀಮಾ ಬ್ಯಾರೇಜ್​ಗೆ ಹರಿಸಿದ್ದರಿಂದ ಅಂಬೇಡ್ಕರ್​ ವೃತ್ತದಲ್ಲಿ ಕಳೆದ 10 ದಿನಗಳಿಂದ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ ಮುಕ್ತಾಯಗೊಂಡಿತು.
ಶ್ರೀಮಂತ ಬಿರಾದಾರ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ನಿರ್ಮಾಣವಾದ ಭೀಮಾ ಏತನೀರಾವರಿ ಯೋಜನೆ ಶಾಶ್ವತವಾಗಿ ಜನರಿಗೆ ಉಪಯೋಗ ಆಗಬೇಕಾದರೆ ಸೊನ್ನ ಬ್ಯಾರೇಜ್​ನಲ್ಲಿ ಗರಿಷ್ಠ ನೀರು ತಡೆಹಿಡಿದು ಕಾಲುವೆ ಸ್ವಚ್ಛಗೊಳಿಸಿ ನಿರಂತರ ನೀರು ಬಿಡಲು ಕ್ರಮಕೈಗೊಳ್ಳಬೇಕು. ಭೀಮಾ ನದಿಗೆ ಉಜನಿ ಜಲಾಶಯದಿಂದ ನಮ್ಮ ಪಾಲಿನ 15 ಟಿಎಂಸಿ ನೀರನ್ನು ಬಿಡಲು ಒಂದು ನಿಯೋಗ ರಚಿಸಿ ಪ್ರತಿ ವರ್ಷ ನೀರು ತರಲು ಕ್ರಮ ಕೈಗೊಳ್ಳಬೇಕು. ಕೆರೆಗಳ ಹೂಳು ತೆಗೆಯಬೇಕು. ಕರೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ತಂದು ಶಾಶ್ವತವಾಗಿ ನೀರು ನಿಲ್ಲಿಸಬೇಕು. ಅಮರ್ಜಾ ಮತ್ತು ಬೋರಿ ನದಿಗಳು ಸಂಪೂರ್ಣ ಹೂಳೆತ್ತಬೇಕು. ಪ್ರತಿ 500 ಮೀಟರ್​ನಂತೆ ಬ್ರಿಡ್ಜ್​ ಕಂ ಬ್ಯಾರೇಜ್​ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಉಪ ತಹಸೀಲ್ದಾರ್​ ಘಾಳಪ್ಪ ಕಂಬಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ಬಸವರಾಜ ವಾಳಿ, ಶಿವಪುತ್ರ ಬುರಲಿ, ಶಾಂತಕುಮಾರ ಅಂಜುಟಗಿ, ಪ್ರಭಾವತಿ ಮೇತ್ರಿ, ಗುರು ಚಾಂದಕವಟೆ, ರಮೇಶ ಪಾಟೀಲ್​, ಮುರುಂದ್ರ ಮಸಳಿ, ಬಸವರಾಜ ಶಿರ, ದತ್ತಗುರು, ಯಶ್ವಂತ ಪಟ್ಟೇದಾರ, ಅರ್ಜುನ ಸೋಮಜಾಳ, ನಿಂಗನಗೌಡ ಪಾಟೀಲ್​, ರಾಜುಗೌಡ ಪಾಟೀಲ್​, ಮಲ್ಲಿಕಾರ್ಜುನ ಪಾಟೀಲ್​ ಇತರರಿದ್ದರು.