ಕದಾಳು ಗ್ರಾಮದಲ್ಲಿ ಗುರುವಾರ ಶಾಸಕ ಸಿಮೆಂಟ್ ಮಂಜು ಸಚಿವ ಕೆ.ಎನ್.ಶಿವಲಿಂಗೇಗೌಡ ಅವರಿಗೆ ಮನವಿ ಸಲ್ಲಿಸಿದರು. ಲತಾಕುಮಾರಿ, ಶ್ರೇಯಸ್ ಪಟೇಲ್, ಮುರಳಿ ಮೋಹನ್, ಪೃಥ್ವಿ ಜಯರಾಮ್ ಇತರರಿದ್ದರು. 
ರಾಜ್ಯ

ಕೃಷಿ, ಜಾನುವಾರು ಕುಡಿಯಲು ನೀರು ಹರಿಸಿ

ಪ್ರಮುಖ ಮುಖ್ಯಾಂಶಗಳು

  • ಮುಸುಕಿನ ಜೋಳ ಬೆಳೆಗೆ ವ್ಯಾಪಕವಾಗಿ ಬಿಳಿಸುಳಿ ರೋಗ
  • ರೈತರಿಗೆ ಪ್ರತಿ ಎಕರೆಗೆ 50 ಸಾವಿರದಿಂದ 75 ಸಾವಿರದವರೆಗೆ ಪರಿಹಾರ

ಆಲೂರು:

ಮುಸುಕಿನ ಜೋಳ ಬೆಳೆಗೆ ವ್ಯಾಪಕವಾಗಿ ಬಿಳಿಸುಳಿ ರೋಗ ಹರಡಿರುವ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ ಎಕರೆಗೆ 50 ಸಾವಿರದಿಂದ 75 ಸಾವಿರದವರೆಗೆ ಪರಿಹಾರ ಘೋಷಿಸುವುದರ ಜತೆಗೆ ಕೃಷಿ ಚಟುವಟಿಕೆ ಮತ್ತು ಜಾನುವಾರುಗಳು ಕುಡಿಯಲು ತಕ್ಷಣ ನೀರು ಹರಿಸಬೇಕೆಂದು ಒತ್ತಾಯಿಸಿ ಶಾಸಕ ಸಿಮೆಂಟ್ ಮಂಜು ಸಚಿವ ಕೆ.ಎನ್.ಶಿವಲಿಂಗೇಗೌಡ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಕಸಬಾ ಹೋಬಳಿಯ ಕದಾಳು ಗ್ರಾಮದಲ್ಲಿ ಗುರುವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಕಲೇಶಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆಲೂರು ತಾಲೂಕು ಹಾಗೂ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯಲ್ಲಿ ಮುಸುಕಿನ ಜೋಳ ಬೆಳೆಗೆ ಬಿಳಿಸುಳಿ ರೋಗ ತೀವ್ರವಾಗಿ ಹರಡಿದೆ. ಹೊಲಗಳ ಹೊರಭಾಗದಿಂದ ಬೆಳೆ ಹಸಿರಾಗಿ ಕಂಡರೂ, ಒಳಭಾಗದಲ್ಲಿ ಶೇ.90ಕ್ಕೂ ಹೆಚ್ಚು ಗಿಡಗಳು ರೋಗಬಾಧೆಗೆ ಒಳಗಾಗಿರುವುದು ಸ್ಥಳ ಪರಿಶೀಲನೆಯ ವೇಳೆ ಕಂಡು ಬಂದಿದೆ. ಕಳೆದ ವರ್ಷ ಸೀಮಿತ ಪ್ರಮಾಣದಲ್ಲಿದ್ದ ರೋಗ ಈ ಬಾರಿ ವ್ಯಾಪಕವಾಗಿ ಹರಡಿದ್ದು, ಸಾವಿರಾರು ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಮುಸುಕಿನ ಜೋಳವನ್ನು ಜಾನುವಾರುಗಳಿಗೆ ಮೇವು ಹಾಗೂ ವಾಣಿಜ್ಯ ಬೆಳೆಯಾಗಿ ಬಳಸಲಾಗುತ್ತದೆ. ಆದರೆ ರೋಗಬಾಧಿತ ಜೋಳವನ್ನು ಮೇವಾಗಿ ಬಳಸಿದರೆ ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಹಾಲಿನ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾಹಿತಿ ರೈತರಿಂದ ಲಭ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಬಿಳಿಸುಳಿ ರೋಗವು ಶಿಲೀಂಧ್ರದಿಂದ ಉಂಟಾಗುವ ಮಾರಕ ರೋಗವಾಗಿದ್ದು, ಮಣ್ಣು ಮತ್ತು ತೇವಾಂಶದ ಮೂಲಕ ವೇಗವಾಗಿ ಹರಡುತ್ತಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ತುರ್ತಾಗಿ ಬೆಳೆಹಾನಿ ಸಮೀಕ್ಷೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಹಾಸನ ಜಿಲ್ಲೆಯಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿರುವುದರಿಂದ ಕೆರೆ-ಕಟ್ಟೆಗಳು ಹಾಗೂ ಬಾವಿಗಳು ಬರಿದಾಗುತ್ತಿವೆ. ಇದರ ಪರಿಣಾಮವಾಗಿ ರೈತರ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಆತಂಕ ಎದುರಾಗಿದೆ.ಹೀಗಾಗಿ ಗೊರೂರು ಹೇಮಾವತಿ ಜಲಾಶಯದ ಎಡದಂಡೆ ನಾಲೆ, ಯಗಚಿ ಎಡದಂಡೆ ನಾಲೆ ಹಾಗೂ ವಾಟೆಹೊಳೆ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ತಕ್ಷಣ ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಲತಾಕುಮಾರಿ, ಸಂಸದ ಶ್ರೇಯಸ್ ಪಟೇಲ್, ಸಕಲೇಶಪುರ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್, ಆಲೂರು ಅಧ್ಯಕ್ಷ ಪೃಥ್ವಿ ಜಯರಾಮ್ ಇತರರಿದ್ದರು.