ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾ.ಪಂ ವ್ಯಾಪ್ತಿ ಬಗಿನಗೆರೆ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು.
ಮಾಗಡಿ : ತಾಲೂಕಿನ ಬಗಿನಗೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ತಿಪ್ಪಸಂದ್ರ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಕೊಳವೆಬಾವಿಯಲ್ಲಿ ನೀರು ಬತ್ತಿಹೋಗಿರುವುದೇ ಸಮಸ್ಯೆಗೆ ಕಾರಣವಾಗಿದ್ದು, ತಿಪ್ಪಸಂದ್ರ ಗ್ರಾಪಂ ವತಿಯಿಂದ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದ್ದರೂ, ಗ್ರಾಮದ 1,500ಕ್ಕೂ ಹೆಚ್ಚು ಜನಸಂಖ್ಯೆಗೆ ಸಾಲದಂತಾಗಿದೆ. ಮಕ್ಕಳು ಶಾಲೆ ಬಿಟ್ಟು ಮಹಿಳೆಯರೊಂದಿಗೆ ಕುಡಿಯುವ ನೀರಿಗೆ ಗ್ರಾಮದ ಹೊರ ಭಾಗದ ರೈತರ ಕೊಳವೆಬಾವಿ ಮೂಲಕ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ನೀರು ತರುವ ಪರಿಸ್ಥಿತಿ ಉಂಟಾಗಿದೆ ಎಂದರು.
ಕುಡಿಯುವ ನೀರಿಗೆ ಕಷ್ಟವಾಗಿರುವುದಷ್ಟೇ ಅಲ್ಲದೆ, ಗ್ರಾಮದಲ್ಲಿರುವ ಜಾನುವಾರುಗಳಿಗೂ ನೀರಿಲ್ಲದೆ ತೀವ್ರ ಸಂಕಷ್ಟ ಎದುರಾಗಿದೆ. ಗ್ರಾಮದ ಕೆರೆ, ಕಟ್ಟೆಗಳಲ್ಲೂ ಒಂದು ಹನಿ ನೀರಿಲ್ಲದೇ ಹಸು,ಕರು, ಮೇಕೆ, ಕುರಿಗಳನ್ನು ಮಾರಾಟಮಾಡುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಹಾಗೂ ತಾಲೂಕು ಆಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಬಗಿನಗೆರೆ ಗ್ರಾಮಕ್ಕೆ ತುರ್ತಾಗಿ ಹೊಸ ಕೊಳವೆಬಾವಿ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಬೇಕು ಎಂದು ಗ್ರಾಮದ ರಂಗಸ್ವಾಮಿ ಒತ್ತಾಯಿಸಿದ್ದಾರೆ.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮತ್ತಷ್ಟು ನೀರು ಸರಬರಾಜು ಮಾಡಲು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಸಮಸ್ಯೆ ತಿಳಿದು ನಂತರ ಕ್ರಮಕೈಗೊಳ್ಳಲಾಗುವುದು.
ಸವಿತಾ ಬಾಯಿ ಪಿಡಿಒ ತಿಪ್ಪಸಂದ್ರ ಗ್ರಾ.ಪಂ.