ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್
ಬೆಂಗಳೂರು: ಬರಗಾಲ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಬೇಕು. ತುರ್ತು ಪರಿಹಾರ ಜತೆಗೆ ತಲಾ 50 ಸಾವಿರ ರೂ. ವರೆಗೆ ಸಾಲ ಮನ್ನಾ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಪತ್ರ ಬರೆದಿರುವ ಅವರು, ರಾಜ್ಯದ ಹಲವು ಜಿಲ್ಲೆಗಳು ಬರದಿಂದ ತತ್ತರಿಸುತ್ತಿದ್ದರೆ, ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದ ಆತಂಕ ಎದುರಾಗಿದೆ. ಲಕ್ಷಾಂತರ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಕುಟುಂಬಗಳು ಸಂಕಷ್ಟದಲ್ಲಿದ್ದು, ಸರ್ಕಾರ ತುರ್ತು ನೆರವು ಬಿಡುಗಡೆ ಮಾಡಬೇಕು.
ಇತ್ತೀಚೆಗೆ ಬರಪೀಡಿತ ರೈತರ ಸಾಲಮನ್ನಾ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದೀರಿ. ಆದರೆ, ರೈತರಿಗೆ ಈಗ ಬೇಕಾಗಿರುವುದು ಪರಿಶೀಲನೆ ಅಲ್ಲ, ತಕ್ಷಣದ ನಿರ್ಧಾರ. ಆದ್ದರಿಂದ ವಿಳಂಬ ಮಾಡದೆ ಬರ ಮತ್ತು ಪ್ರವಾಹ ಸಂತ್ರಸ್ತ ಎಲ್ಲ ರೈತರಿಗೆ 50 ಸಾವಿರ ರೂ.ವರೆಗೆ ಸಾಲಮನ್ನಾ ಘೋಷಿಸಿ ಅವರ ಸಂಕಷ್ಟಕ್ಕೆ ಸ್ಪಂಸಿಸಬೇಕು ಎಂದು ಅಶೋಕ್ ಕೋರಿದರು.