ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ 
ರಾಜ್ಯ

ಅನ್ನಭಾಗ್ಯ ಅಕ್ಕಿ ಅನ್ಯರಾಜ್ಯ ಪಾಲು: ಪಡಿತರ ದುರ್ಬಳಕೆಗೆ ಉದ್ಯಮಿ ಡಾ. ವಿಜಯ ಸಂಕೇಶ್ವರ ಕಳವಳ | Vijay Sankeshwar

ಅಕ್ರಮ ಮಾರಾಟದ ಬಗ್ಗೆ ಎಲ್ಲ ಪಕ್ಷಗಳವರಿಗೆ ಮಾಹಿತಿ ಇದ್ದರೂ ಪಡಿತರ ಅಕ್ಕಿಯ ವಿತರಣೆ ಪ್ರಮಾಣ ಕಾಲಕಾಲಕ್ಕೆ ಅಗತ್ಯ ಮೀರಿ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡ ಈ ವಿಷಯದಲ್ಲಿ ಸೂಕ್ತ ಪರಿಶೀಲನೆ ನಡೆಸದೆ ಜಾಣ ಕಿವುಡುತನ ಪ್ರದರ್ಶನ ಮಾಡುತ್ತಿದೆ ಎಂದು ಡಾ. ಸಂಕೇಶ್ವರ ಹೇಳಿದ್ದಾರೆ.

* ಅನ್ನಭಾಗ್ಯದ ಅಕ್ಕಿ ಅನ್ಯರಾಜ್ಯಕ್ಕೆ ಸಾಗಣೆಯಾಗುತ್ತಿರುವ ಬಗ್ಗೆ ವಿಜಯ ಸಂಕೇಶ್ವರ ಕಳವಳ

* ಅಕ್ಕಿ ಅಕ್ರಮ ಮಾರಾಟ ತಡೆಯಲು ಸರ್ಕಾರ ವಿಫಲವೆಂದು ಬೇಸರ

* ನಂದಿನಿ ಹಾಲಿನ ದರ ಹೆಚ್ಚಳ ಬೆಂಬಲಿಸಿದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್

* ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ

ಬೆಂಗಳೂರು: ಬಡವರ ಹೊಟ್ಟೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿಯ ಅಕ್ರಮ ಮಾರಾಟ ಜಾಲ ಹೊರ ರಾಜ್ಯಗಳಿಗೆ ವಿಸ್ತರಿಸಿದ್ದು ನಿತ್ಯ 200 ಲೋಡ್​ಗಳಷ್ಟು ಅನ್ಯ ರಾಜ್ಯಗಳಿಗೆ ಸಾಗಣೆಯಾಗುತ್ತಿದೆ. ರಾಜ್ಯದಲ್ಲಿ ಅಕ್ಕಿ ದರ ಹೆಚ್ಚಳಕ್ಕೆ ಇದರ ಕೊಡುಗೆಯೂ ದೊಡ್ಡದಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ( Vijay Sankeshwar ) ವಿಶ್ಲೇಷಿಸಿದ್ದಾರೆ.

ಪಡಿತರ ಚೀಟಿದಾರರಿಗೆ ಅವರ ಅಗತ್ಯಕ್ಕಿಂತ ಮೂರುಪಟ್ಟು ಹೆಚ್ಚು ವಿತರಿಸುತ್ತಿರುವ ಕಾರಣವೋ- ಕಾಳಸಂತೆಕೋರರ ಕೈವಾಡ ವೋ ಅನ್ನಭಾಗ್ಯದ ಅಕ್ಕಿ ಪಾಲೀಷ್ ಆಗಿ ನೆರೆ ರಾಜ್ಯಗಳಿಗೆ ರವಾನೆ ಆಗುತ್ತಿದ್ದು ಇದೊಂದು ದಂಧೆಯಾಗಿ ಮಾರ್ಪಟ್ಟಿದೆ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಅಕ್ರಮ ಮಾರಾಟದ ಬಗ್ಗೆ ಎಲ್ಲ ಪಕ್ಷಗಳವರಿಗೆ ಮಾಹಿತಿ ಇದ್ದರೂ ಪಡಿತರ ಅಕ್ಕಿಯ ವಿತರಣೆ ಪ್ರಮಾಣ ಕಾಲಕಾಲಕ್ಕೆ ಅಗತ್ಯ ಮೀರಿ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡ ಈ ವಿಷಯದಲ್ಲಿ ಸೂಕ್ತ ಪರಿಶೀಲನೆ ನಡೆಸದೆ ಜಾಣ ಕಿವುಡುತನ ಪ್ರದರ್ಶನ ಮಾಡುತ್ತಿದೆ ಎಂದು ಡಾ. ಸಂಕೇಶ್ವರ ಹೇಳಿದ್ದಾರೆ.

ಬಡತನ ರೇಖೆಯಿಂದ ಕೆಳಗಿರುವ ಜನರ ಹಿತ ಬಯಸಿ ಸರ್ಕಾರ ರೂಪಿಸಿರುವ ಜನಪರ ಯೋಜನೆ ಹೀಗೆ ದುರ್ಬಳಕೆ ಆದರೆ, ಅದರಿಂದ ಬೊಕ್ಕಸಕ್ಕೆ ನೇರ ಹೊಡೆತ ಬೀಳುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಕೂಡ ತೊಂದರೆ ಆಗಲಿದೆ. ಭ್ರಷ್ಟ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಕೆಲ ಸಚಿವರು, ಕೆಲ ಶಾಸಕರು ಕೂಡ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂಬ ಆರೋಪಗಳಿವೆ. ಆಳುವ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕು ವಂತೆ ಆಗ್ರಹಿಸಿದ್ದಾರೆ. ಕಾಳ ಸಂತೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ನಡೆದರೂ ನಮ್ಮ ಅಧಿಕಾರಿಗಳು ಹಾಗೂ ವಿಚಕ್ಷಣಾ ದಳಗಳು ಏನು ಮಾಡುತ್ತಿವೆ. ಸಾಮಾನ್ಯ ಜನರ ಗಮನಕ್ಕೆ ಬರುವ ಅಕ್ರಮಗಳು ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಹಾಲಿನ ದರ ಹೆಚ್ಚಳಕ್ಕೆ ವಿರೋಧ ಬೇಡ

ಬರದ ಬೇಗೆಯಲ್ಲಿ ಬೇಯುತ್ತಿದ್ದ ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ ನಂದಿನಿ ಹಾಲಿನ ದರ ಹೆಚ್ಚಳ ಮಾಡಿರುವುದರ ವಿರುದ್ಧ ವಿಪಕ್ಷಗಳ ವಿರೋಧ ಸರಿಯಲ್ಲ ಎಂದು ಡಾ.ವಿಜಯ ಸಂಕೇಶ್ವರ ಹೇಳಿದ್ದಾರೆ. ದುಬಾರಿ ಕಾಲದಲ್ಲಿ ಜಾನುವಾರುಗಳ ಮೇವು, ಪಶು ಆಹಾರದ ಬೆಲೆ ಗಗನಕ್ಕೆ ಏರಿದೆ. ನಿರ್ವಹಣೆ ವೆಚ್ಚವೂ ಹೆಚ್ಚುತ್ತಿದೆ. ಈ ಎಲ್ಲವನ್ನೂ ಲೆಕ್ಕ ಹಾಕಿದರೆ ದರ ಏರಿಕೆ ನಿರ್ಧಾರ ಸಕಾಲಿಕವಾಗಿದೆ. ರೈತರ ಬದುಕು ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಹಸು ಸಾಕುವವರೇನೂ ಶ್ರೀಮಂತರಲ್ಲ. ಕಳೆದ 60 ವರ್ಷಗಳಿಂದ ಹಸು ಸಾಕಣೆ ಮಾಡುತ್ತಿದ್ದ ನಮಗೇ ಅದೀಗ ದುಬಾರಿಯಾಗಿ ಪರಿಣಮಿಸಿದೆ. ಹಾಲಿನ ದರ ಏರಿಕೆ ವಿರೋಧಿಸಲು ಇದು ಚುನಾವಣೆ ಸಮಯವೂ ಅಲ್ಲ. ವಿಪಕ್ಷಗಳು ಕೂಡ ರೈತರ ಹಿತದೃಷ್ಟಿಯಿಂದ ಯೋಚಿಸಬೇಕು. ಕೇವಲ 2028ರ ಚುನಾವಣೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ವರ್ತಿಸುವುದು ಸದ್ಯದ ಸ್ಥಿತಿಯಲ್ಲಿ ಸರಿಯಲ್ಲ ಎಂದು ಡಾ. ಸಂಕೇಶ್ವರ ಹೇಳಿದ್ದಾರೆ.

ನಮ್ಮಲ್ಲಿ ಪ್ರತಿ ಲೀಟರ್​ಗೆ 8 ರೂ. ಏರಿಸಲಾಗಿದೆ. ಹೊರ ರಾಜ್ಯಗಳಿಗೆ ಹೋಲಿಸಿದರೆ ಈ ಮಾರಾಟ ದರ ಕಡಿಮೆ! ಬೆಲೆ ಏರಿಕೆಯಿಂದ ಬಡ ಹೈನುಗಾರರ ಬದುಕು ಹಸನಾಗುವುದಾದರೆ ಅದಕ್ಕೆ ವಿರೋಧ ಬೇಡ. ರೈತರ ಆದಾಯಕ್ಕೆ ರಾಜಕೀಯ ಕಾರಣಕ್ಕೆ ಕೊಕ್ಕೆ ಹಾಕುವುದು ಸರಿಯಲ್ಲ. ಹೈನುಗಾರಿಕೆಯನ್ನೇ ನಂಬಿರುವ ಲಕ್ಷಾಂತರ ಸಣ್ಣ ಕುಟುಂಬಗಳು ನಾಶವಾಗುವುದನ್ನು ಈ ಹಾಲಿನ ಖರೀದಿ ದರ ಹೆಚ್ಚಳ ತಪ್ಪಿಸಿದೆ ಎಂದು ಹೇಳಿದ್ದಾರೆ. ಕೆಎಂಎಫ್ ಸೇರಿ ಅದರ ಅಧೀನದಡಿ ಬರುವ ಹಾಲು ಮಾರಾಟ ಒಕ್ಕೂಟಗಳು ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ರೈತರೊಂದಿಗೆ ಉತ್ತಮ ಒಡನಾಟ ಹೊಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.