ಆಳಂದನಲ್ಲಿ ಹಮ್ಮಿಕೊಂಡಿದ್ದ ಎಸ್ಐಆರ್ ಜಾಗೃತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್ಐಆರ್ ಜಿಲ್ಲಾ ಉಸ್ತುವಾರಿ ಉಮಾಶ್ರೀ, ಶಾಸಕರಾದ ಬಿ.ಆರ್.ಪಾಟೀಲ್, ಜಗದೇವ ಗುತ್ತೇದಾರ್ ಇತರರಿದ್ದರು.
- ಕೇಂದ್ರದ ವಿರುದ್ಧ ಎಂಎಲ್ಸಿ ಉಮಾಶ್ರೀ ವ್ಯಂಗ್ಯ
- ಆಳಂದನಲ್ಲಿ ಪ್ರಗತಿ ಪರಿಶೀಲನೆ ಸಭೆ
ಆಳಂದ: ಮತದಾರರು ಮತಹಾಕಿ ಸರ್ಕಾರ ರಚನೆ ಮಾಡುವುದು ಸಾಮಾನ್ಯ. ಇದೀಗ ಸರ್ಕಾರವೇ ಚುನಾವಣೆ ಆಯೋಗದ ಮೂಲಕ ಮತದಾರರನ್ನು ಆಯ್ಕೆ ಮಾಡುತ್ತಿದೆ ಎಂದು ಕೆಪಿಸಿಸಿ ಎಸ್ಐಆರ್ ಜಿಲ್ಲಾ ಉಸ್ತುವಾರಿ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ದೂರಿದರು.
ವೀರಶೈವ ಸಭಾಂಗಣದಲ್ಲಿ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಬಿಎಲ್ಒಗಳು ಪ್ರತಿ ಮತದಾರರಿಗೆ ಎರಡು ಎನ್ಯುಮರೇಷನ್ ಫಾಮ್ರ್ ಕೊಡಬೇಕು. ಆದರೆ ಒಂದನ್ನು ಮಾತ್ರ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಿಎಲ್ಎಗಳು ಇದರ ಬಗ್ಗೆ ಗಮನಹರಿಸಿ, ಎರಡರಲ್ಲಿ ಒಂದಕ್ಕೆ ಬಿಎಲ್ಒ ಅವರಿಂದ ಸಹಿ ಹಾಕಿಸಿಕೊಂಡು ಹಿಂಪಡೆಯಬೇಕು. ಈಗಾಗಲೇ ಕ್ಷೇತ್ರದಲ್ಲಿ 10 ರಿಂದ 20 ಮತಗಟ್ಟೆಗಳಲ್ಲಿ ಶೇ.35, 30-40 ಮತಗಟ್ಟೆಗಳಲ್ಲಿ ಶೇ.50 ಪರಿಷ್ಕರಣೆ ಆಗಿದೆ. ಉಳಿದ ಮತಗಟ್ಟೆಗಳಲ್ಲಿ ಶೇ.70-75 ಕಾರ್ಯ ಮುಗಿದಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಆಗಬೇಕು ಎಂದು ಹೇಳಿದರು.
ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ವಿಶೇಷ ಪರಿಷ್ಕರಣೆಯಲ್ಲಿ ದುರುದ್ದೇಶವಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪರವಾಗಿ ಇರುವ ಮತದಾರರನ್ನು ಉದ್ದೇಶಪೂರ್ವಕವಾಗಿ ಕೈಬಿಡುವ ಹುನ್ನಾರ ನಡೆದಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಮುಸ್ಲಿಂ ಮತದಾರರು ಹಾಗೂ ಹೊರ ರಾಜ್ಯದಲ್ಲಿ ವಲಸೆ ಹೋದವರು ಎಸ್ಐಆರ್ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಐಆರ್ ಪ್ರಕ್ರಿಯೆ ಮುಗಿದ ನಂತರ ಜಿಪಂ, ತಾಪಂ, ಪುರಸಭೆ, ಗ್ರಾಪಂ ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗಿದೆ. ಅರ್ಹ ಮತದಾರರು ತಮ್ಮ ಮತದಾನ ಹಕ್ಕನ್ನು ಕಳೆದುಕೊಳ್ಳಬಾರದು. ವೋಟಿಂಗ್ ಹಕ್ಕು ಇಲ್ಲದಿದ್ದರೆ ಸರ್ಕಾರ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಲು ಆಗಲ್ಲ. ಪಕ್ಷದ ಬಿಎಲ್ಎ ಹಾಗೂ ಕಾರ್ಯಕರ್ತರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಜಿಪಂ ಮಾಜಿ ಸದಸ್ಯ ಸುಭಾಷ ರಾಠೋಡ್ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್ ಮುನ್ನಹಳ್ಳಿ, ಪ್ರಮುಖರಾದ ಗುರುಲಿಂಗ ಪಾಟೀಲ್, ಸುಭಾಷ ಮುರುಡ, ಕವಿತಾ ನಾಯಕ, ಗುರುಶರಣ ಪಾಟೀಲ್, ಸಿದ್ದರಾಮ ಪ್ಯಾಟಿ, ಸಲಾಂ ಸಗರಿ ಇತರರಿದ್ದರು.
ಬಸವರಾಜ ಪವಾಡಶೆಟ್ಟಿ ಸ್ವಾಗತಿಸಿದರು. ರಾಜಶೇಖರ ಪಾಟೀಲ್ ಹೆಬಳಿ ನಿರೂಪಣೆ ಮಾಡಿದರು.