- ತಹಸೀಲ್ದಾರ್ ಸುರೇಶ ಚವಲರ ಮಾಹಿತಿ
- ಮತಗಟ್ಟೆ ಅಧಿಕಾರಿಗಳ ಹಾಗೂ ಮೇಲ್ವಿಚಾರಕರ ಎಸ್‌ಐಆರ್ ತರಬೇತಿ
ತಿಕೋಟಾ: ಭಾರತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಯ ಬಿಎಲ್‌ಒ ತರಬೇತಿ ಪ್ರಕ್ರಿಯೆ ಜೂ. 20ರಿಂದ ಆರಂಭವಾಗಲಿದೆ ಎಂದು ತಹಸೀಲ್ದಾರ್ ಸುರೇಶ ಚವಲರ ಹೇಳಿದರು.
ಪಟ್ಟಣದ ಎ.ಬಿ. ಜತ್ತಿ ಪದವಿ ಪೂರ್ವ ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಮತಗಟ್ಟೆ ಅಧಿಕಾರಿಗಳ ಹಾಗೂ ಮೇಲ್ವಿಚಾರಕರ ಎಸ್‌ಐಆರ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತೆಗೆದುಹಾಕಲು ಹಾಗೂ ಪ್ರೊಜನಿ ಮ್ಯಾಪಿಂಗ್ ಮಾಡಲು ಜೂನ್ 16ರವರೆಗೆ ಅವಕಾಶವಿತ್ತು. ಆ ಬಳಿಕ ಪೊರ್ಟಲ್ ಫ್ರೀಜ್ ಆಗಲಿದ್ದು ಕರಡು ಮತದಾರರ ಪಟ್ಟಿ ಪ್ರಕಟವಾಗುವರೆಗೆ ಯಾವುದೇ ಬದಲಾ ವಣೆಗಳಿಗೆ ಅವಕಾಶವಿರುವುದಿಲ್ಲ.
ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿದ್ದು ಮತಗಟ್ಟೆ ಮಟ್ಟದ ಬಿಎಲ್‌ಒಗಳು 2026ರ ಜೂನ್ 30 ರಿಂದ ಜುಲೈ 29ರವರೆಗೆ ಪ್ರತಿ ಮನೆಗೆ ಒಟ್ಟು 3 ಬಾರಿ ಭೇಟಿ ನೀಡಿ ಪರೀಶಿಲನಾ ಪಟ್ಟಿ ನೀಡಿ ಮತದಾರರಿಂದ ಸಹಿ ಪಡೆಯುವುದು. ನಂತರ ಕರಡು ಮತದಾರರ ಪಟ್ಟಿಯನ್ನು ಅಗಸ್ಟ್ 5ರಂದು ಪ್ರಕಟಿಸಲಿದ್ದು, ಆಕ್ಷೇಪಣೆಗಳಿದ್ದಲ್ಲಿ ಅಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿ ಪ್ರಕಟಣೆಯನ್ನು ಅಕ್ಟೋಬರ್ 7ರಂದು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದೆ ಎಂದವರು ಹೇಳಿದರು.
ಎಸ್‌ಐಆರ್ ಸುಲಭ ವಿಧಾನವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, 1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರು ಸ್ವಯಂ ಜನ್ಮ ದಿನಾಂಕ, ಸ್ಥಳವನ್ನು ಗುರುತಿಸುವ 12 ದಾಖಲೆಗಳಲ್ಲಿ ಒಂದನ್ನು ನೀಡಬೇಕು.
2004ರ ಡಿಸೆಂಬರ್ 2ರ ವರೆಗಿನ ಜನ್ಮ ದಿನಾಂಕದವರು ಸ್ವಯಂ ಜನ್ಮ ದಿನಾಂಕ , ಸ್ಥಳವನ್ನು ದೃಢೀಕರಿಸುವ ದಾಖಲೆ, ತಂದೆ ಅಥವಾ ತಾಯಿ ಹುಟ್ಟಿದ ದಿನಾಂಕ, ಸ್ಥಳವನ್ನು ದೃಢೀಕರಿಸುವ ದಾಖಲೆ ನೀಡಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ಸ್ವಯಂ ಜನ್ಮ ದಿನಾಂಕ, ಸ್ಥಳವನ್ನು ದೃಢೀಕರಿಸುವ ದಾಖಲೆ , ತಂದೆ ಹಾಗೂ ತಾಯಿ ಹುಟ್ಟಿದ ದಿನಾಂಕ, ಸ್ಥಳವನ್ನು ದೃಢೀಕರಿಸುವ ದಾಖಲೆ ನೀಡುವುದು. ಯಾವುದೇ ಪೋಷಕರು ಭಾರತೀಯರಲ್ಲದಿದ್ದರೆ ಜನನದ ಸಮಯದಲ್ಲಿ ಪೋಷಕರ ಮಾನ್ಯವಾದ ಪಾಸ್ ಪೋರ್ಟ್ ಮತ್ತು ವೀಸಾ ದಾಖಲೆ ನೀಡಬೇಕು.
ಉಪ ತಹಸೀಲ್ದಾರ್ ವಿರೇಶ ತೊನಶ್ಯಾಳ ಇತರರಿದ್ದರು.
"
ಆನ್ ಲೈನ್ ಸಲ್ಲಿಕೆಗೆ ಅವಕಾಶ
ಸಾರ್ವಜನಿಕರು ಹಾಗೂ 18 ವರ್ಷ ತುಂಬಿದ ಯುವ ಮತದಾರರು ಹೆಸರು ಸೇರ್ಪಡೆಗಾಗಿ ಇನ್ನು ಮುಂದೆ ಭೌತಿಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ಲಭ್ಯವಿರುವ ಆಯಾ ಭಾಗದ ಬಿಎಲ್‌ಒ ಅವರ ದೂರವಾಣಿ ಸಂಖ್ಯೆ ಮೂಲಕ ಅವರನ್ನು ಸಂಪರ್ಕಿಸಿ ಆನ್ ಲೈನ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಮತ್ತು ಸಣ್ಣ ಪುಟ್ಟ ತಿದ್ದುಪಡಿಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.