ಒಕ್ಕಲಿಗರ ಸಂಘದ ಸರ್ವಸದಸ್ಯರ ಸಭೆ ಗೊಂದಲದಲ್ಲೇ ಮುಕ್ತಾಯ 
ರಾಜ್ಯ

ಒಕ್ಕಲಿಗರ ಸಂಘದ ಸಭೆ ಗೊಂದಲದಲ್ಲೇ ಮುಕ್ತಾಯ: 11 ವರ್ಷದ ಬಳಿಕ ಆಯೋಜಿಸಿದ್ದ ಸರ್ವಸದಸ್ಯರ ಸಭೆ- Vokkaligara Sangha meeting

ಬೆಂಗಳೂರು: ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಸರ್ವಸದಸ್ಯರ ಸಭೆ ಗೊಂದಲದಲ್ಲೇ ಮುಕ್ತಾಯವಾಯಿತು.
11 ವರ್ಷದ ಬಳಿಕ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸದಸ್ಯರು ಸೂಕ್ತ ಸಲಹೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಸಭೆಯ ನಡವಳಿಕೆ ಓದುವುದು, ಆಡಳಿತ ವರದಿ ಮಂಡನೆ, ಜಮಾ- ಖರ್ಚು, ಆದಾಯ- ವೆಚ್ಚ ಪರಿಶೀಲಿಸಿ ಅನುಮೋದಿಸುವುದು, ಲೆಕ್ಕಪುಸ್ತಕಗಳ ಪರಿಶೀಲನೆಗೆ ಆಡಿಟರ್ ನೇಮಕ, ಹಿಂದಿನ ವರ್ಷದ ಮತ್ತು ಪ್ರಸಕ್ತ ಸಾಲಿನ ಆಯವ್ಯಯ ಅಂದಾಜು ಪಟ್ಟಿ ಮಂಡನೆ ಹಾಗೂ ಬೈಲಾ ತಿದ್ದುಪಡಿ ಸೇರಿ ಇತರ ವಿಚಾರಗಳನ್ನು ಸೇರಿಸಲಾಗಿತ್ತು.
ಆದರೆ, ಸಭೆಯಲ್ಲಿ ಸಜ್ಜೆಪಾಳ್ಯ ಜಮೀನು ವಿವಾದ ಸೇರಿ ಕೆಲ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸದಸ್ಯರು ಪಟ್ಟುಹಿಡಿದರು. ಈ ಉತ್ತರಕ್ಕೆ ತೃಪ್ತಿಯಾಗದ ಸದಸ್ಯರು, ಆಡಳಿತ ಮಂಡಳಿಯ ಪದಾಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಈ ಮೂಲಕ ಸರ್ವ ಸದಸ್ಯರ ಸಭೆಯು ಗದ್ದಲದಲ್ಲೇ ಸಮಾಪ್ತಿಗೊಂಡಿತು ಎಂದು ಹೆಸರಲೆಚ್ಚಿಸದ ಸದಸ್ಯರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆ ಕಾರ್ಯಕ್ರಮ ನಿಗದಿ ಮಾಡುವ ಮುನ್ನ (ಮೇ 28) ನಡೆದ ಸುದ್ದಿಗೋಷ್ಠಿಯಲ್ಲಿ 11 ವರ್ಷಗಳಿಂದ ಸಭೆ ನಡೆದಿರಲಿಲ್ಲ. ವಿಶೇಷ ಸರ್ವಸದಸ್ಯರ ಸಭೆಯಲ್ಲಿ ಸಂಘದ ಬೈಲಾಗೆ ಕೆಲ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ತರಲು 2/3ರಷ್ಟು ನಿರ್ದೇಶಕರ ಬೆಂಬಲ ಇರಬೇಕೆಂಬ ತಿದ್ದುಪಡಿ ತರಲು ಮುಂದಾಗಿದ್ದೇವೆ. ಜತೆಗೆ, ಮಹಿಳಾ ಮೀಸಲಾತಿ ಸೇರಿ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಇದ್ಯಾವ ವಿಚಾರಗಳ ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಲಿಲ್ಲ.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಬಿ. ಕೆಂಚಪ್ಪಗೌಡ, ಯಲವಳ್ಳಿ ಎನ್. ರಮೇಶ್, ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್, ಎಂ. ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್, ನಿರ್ದೇಶಕ ಸಿ.ಎನ್. ಬಾಲಕೃಷ್ಣ ಹಾಗೂ ಇತರರು ಹಾಜರಿದ್ದರು.