ಸಾಂದರ್ಭಿಕ ಚಿತ್ರ 
ರಾಜ್ಯ

ಯುವತಿಯಿಂದಲೇ ಲೈಂಗಿಕ ದೌರ್ಜನ್ಯ! ಅಪ್ರಾಪ್ತನ ಪರ ವಕೀಲರಿಂದ ಹೈಕೋರ್ಟ್​ನಲ್ಲಿ ವಾದ

ಬೆಂಗಳೂರು: "ನನಗಿಂತ ವಯಸ್ಸಿನಲ್ಲಿ ಹಿರಿಯಳಾಗಿರುವ ಯುವತಿಯು ಪ್ರೀತಿಸುವ ನಾಟಕವಾಡಿ, ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ. 19 ವರ್ಷದ ಯುವತಿಯು ತಾನು ಗರ್ಭಿಣಿಯಾದ ನಂತರ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಸುಳ್ಳು ದೂರು ದಾಖಲಿಸಿದ್ದಾಳೆ. ಆದ್ದರಿಂದ ನನ್ನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಗೊಳಿಸಬೇಕು' ಎಂದು ಕೋರಿ 17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕನೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ.
ಅರ್ಜಿದಾರ ಬಾಲಕ ಮತ್ತು 19 ವರ್ಷದ ಯುವತಿ ಬೆಂಗಳೂರಿನ ತಾಂತ್ರಿಕ ತರಬೇತಿ ಕೇಂದ್ರವೊಂದರಲ್ಲಿ ಸಹಪಾಠಿಗಳಾಗಿದ್ದಾರೆ. ಇಬ್ಬರ ನಡುವೆ 2024ರ ಜುಲೈನಲ್ಲಿ ಪ್ರಾರಂಭವಾದ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. 2025ರ ಆಗಸ್ಟ್​ನಲ್ಲಿ ಯುವತಿಗೆ ತಾನು ಗರ್ಭಿಣಿಯಾಗಿರುವುದು ತಿಳಿದುಬಂದಿದ್ದು, ಬಾಲಕನ ವಿರುದ್ಧ ಸೆಪ್ಟೆಂಬರ್​ನಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಲಕನನ್ನು ಬಂಧಿಸಿದ್ದರು. ಈ ಪ್ರಕರಣ ರದ್ದುಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿದಾರರ ಪರ ನ್ಯಾಯವಾದಿ ನಮನ್​ ವಂಕ್ದಾರಿ ವಾದ ಮಂಡಿಸಿದರು. ಬಂಧನದ ಸಮಯದಲ್ಲಿ ಪೊಲೀಸರು ಬಾಲನ್ಯಾಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ವಾಲಿಬಾಲ್​ ಕಿಟ್​ ನೀಡುವ ನೆಪದಲ್ಲಿ ಬಾಲಕನನ್ನು ಕರೆಸಿಕೊಂಡು, ನಾಗರಿಕ ಉಡುಪಿನಲ್ಲಿದ್ದ ಪೊಲೀಸರು ಬಾಲಕನನ್ನು ಕರೆದೊಯ್ದಿರುವುದು ಕಾನೂನುಬಾಹಿರ. ಅಲ್ಲದೆ, ಬಾಲಕನ ಪಾಲಕರಿಗೆ ಮಾಹಿತಿ ನೀಡುವಲ್ಲಿಯೂ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. 
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಾಡುವ ಕಾಯ್ದೆಯು ಗಂಡು ಮಕ್ಕಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಹೈಕೋರ್ಟ್​ ಈ ಹಿಂದೆ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಅರ್ಜಿದಾರರ ವಕೀಲರು ವಾದಿಸಿದರು. ಈ ಪ್ರಕರಣದಲ್ಲಿ ದೂರುದಾರೆ ಮಹಿಳೆ ಪ್ರಾಪ್ತ ವಯಸ್ಕಳಾದ ಕಾರಣ ಆಕೆಯೇ ಆರೊಪಿಯಾಗುತ್ತಾಳೆ. ಆದ್ದರಿಂದ ಬಾಲಕನನ್ನು ಲೈಂಗಿಕ ದೌರ್ಜನ್ಯದ ಸಂತ್ರಸ್ತ ಎಂದು ಪರಿಗಣಿಸಬೇಕು ಎಂದು ಕೋರಲಾಗಿದೆ.