ಅರ್ಹತೆ ಇಲ್ಲದ ಅಧಿಕಾರಿಗಳು ವರ್ಗಾ
ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಲ್ಲಿ ರಾಜ್ಯ ಸಿವಿಲ್ ಸೇವೆಗಳ ವರ್ಗಾವಣೆ ನಿಯಂತ್ರಣ ನಿಯಮದ ಮಾರ್ಗಸೂಚಿ ಉಲ್ಲಂಘಿಸಿ ಅಧಿಕಾರಿಗಳು,ನೌಕರರನ್ನು ಬೇಕಾಬಿಟ್ಟಿಯಾಗಿ ವರ್ಗಾಯಿಸಲಾಗಿದೆ.
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸೇವಾವಧಿ ಹಿರಿತನ ಆಧಾರದ ಮೇರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ, ಕನಿಷ್ಠ ಸೇವಾ ಅವಧಿ ಪೂರೈಸಿ ವರ್ಗಾವಣೆಗೆ ಅರ್ಹರಾದ ನೌಕರರ ಆದ್ಯತಾ ಪಟ್ಟಿ ತಯಾರಿಸಲಾಗಿತ್ತು. ಬಳಿಕ, ಕೌನ್ಸೆಲಿಂಗ್ ಮೂಲಕ ಅರ್ಹ ನೌಕರರನ್ನು ವರ್ಗಾವಣೆ ಮಾಡಬೇಕಿತ್ತು. ಆದರೆ, ಅಂತಿಮ ಆದ್ಯತಾ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಅಧಿಕಾರಿಗಳು ಮತ್ತು ನಿವೃತ್ತಿ ಅಂಚಿನಲ್ಲಿರುವ ನೌಕರರನ್ನು ವರ್ಗಾವಣೆಗೊಳಿಸಲಾಗಿದೆ. ಅಲ್ಲದೆ, ಇಲಾಖೆಯ ಒಟ್ಟು ಕಾರ್ಯಬಲದ ಶೇ.15 ಮಿತಿ ಮೀರಿ ನೌಕರನ್ನು ವರ್ಗಾವಣೆ ಮಾಡಲಾಗಿದೆ. ಅರ್ಹ ನೌಕರರನ್ನು ವರ್ಗಾವಣೆ ಪಟ್ಟಿಯಿಂದ ಕೈಬಿಟ್ಟಿದ್ದು, ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ವರ್ಗಾವಣೆ ದಂಧೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಇಲಾಖೆ, ಆನ್‌ಲೈನ್ ಕೌನ್ಸೆಲಿಂಗ್ ವರ್ಗಾವಣೆ ಪ್ರಕ್ರಿಯೆ ಜಾರಿಗೆ ತಂದಿದೆ. ಆದರೆ, ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ನಡೆದಿರುವ ಬಗ್ಗೆ ಗಂಭೀರ ಆರೋಪಗಳಿವೆ. ಇಲಾಖೆಯ ಸಿಬ್ಬಂದಿ ವಿಭಾಗದ ಕೆಲ ಅಧೀಕ್ಷಕರು, ಹಣ ಪಡೆದ ಕೆಲವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಗ್ರೂಪ್ ‘ಎ’ ವೃಂದದ ಉಪಔಷಧ ನಿಯಂತ್ರಕರ ವರ್ಗಾವಣೆಯಲ್ಲಿ ಒಟ್ಟು ಕಾರ್ಯಬಲದ ಶೇ.15 ಮಿತಿಗೆ ಮೀರಿ ವರ್ಗಾವಣೆ ಮಾಡಲಾಗಿದೆ. ಜ.17ರಂದು ಬಲವಂತವಾಗಿ ಕೌನ್ಸೆಲಿಂಗ್ ನಡೆಸಿ, ಡಿ ಫಾರ್ಮ ಪರೀಕ್ಷೆ ನೆಪವೊಡ್ಡಿ ಏಪ್ರಿಲ್‌ನಲ್ಲಿ ಆದೇಶವನ್ನು ಹೊರಡಿಸಲಾಗಿದೆ.
ಸಹಾಯಕ ಔಷಧ ನಿಯಂತ್ರಕ ವರ್ಗಾವಣೆಯಲ್ಲಿ ಕೆಲ ಅಧಿಕಾರಿಗಳ ಮೇಲೆ ಕರ್ತವ್ಯ ಲೋಪವಿದ್ದರೂ ಬೆಂಗಳೂರಿನಲ್ಲಿ ಉನ್ನತ ಹುದ್ದೆ ನೀಡಲಾಗಿದೆ. ಕೆಲವರು ವೈದ್ಯಕೀಯ ಮಂಡಳಿಯಿಂದ ಆರೋಗ್ಯ ಸರಿ ಇಲ್ಲವೆಂದು ಪ್ರಮಾಣ ಪತ್ರ ಕೊಟ್ಟು ವರ್ಗಾವಣೆಗೊಂಡಿದ್ದಾರೆ. ಪತಿ-ಪತ್ನಿ ಪ್ರಕರಣದ ವಿನಾಯಿತಿಯ ದುರ್ಬಳಕೆ ಮಾಡಿಕೊಂಡು ಬೇರೆ ಕಡೆಗೆ ನಿಯುಕ್ತಿಗೊಂಡಿದ್ದಾರೆ. ಈ ಕುರಿತು ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಕೆಯಾಗಿದೆ.