ಕೆರೂರ ಸಮೀಪದ ಬೆಳ್ಳಿಕಿಂಡಿ ಗ್ರಾಮದ ವಯೋ ನಿವೃತ್ತಿ ಹೊಂದಿದ ಶಿಕ್ಷಕ ಶಿವಪುತ್ರಪ್ಪ ಕುಡಕಿ ದಂಪತಿಯನ್ನು ಗ್ರಾಮಸ್ಥರು ಹಾಗೂ ಸಿಬ್ಬಂದಿ ವೃಂದ, ವಿದ್ಯಾರ್ಥಿಗಳು ಸನ್ಮಾನಿಸಿದರು.
- ನಿವೃತ್ತಿ ಹೊಂದಿದ ಶಿಕ್ಷಕನಿಗೆ ಬೀಳ್ಕೊಡುಗೆ
- ಒಂದೇ ಶಾಲೆಯಲ್ಲಿ 28 ವರ್ಷಗಳ ಸೇವೆ
ಕೆರೂರ: ಸಮೀಪದ ಬೆಳ್ಳಿಕಿಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಾಲೆ ಮುಖ್ಯ ಶಿಕ್ಷಕ ಶಿವಪುತ್ರಪ್ಪ ಕುಡಕಿ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಬೀಳ್ಕೊಟ್ಟರಾದರೂ ಅದು ಸಾಮಾನ್ಯ ನಿವೃತ್ತಿ ಕಾರ್ಯಕ್ರಮದಂತಿರದೆ ಭಾವ ಸಂಬಂಧದ ಕೊಂಡಿಯಾಗಿದ್ದು, ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಗ್ರಾಮದ ಶಾಲೆಯಲ್ಲಿಯೇ ಕಳೆದ 28 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರನ್ನು ನೆನೆದು ಗ್ರಾಮದ ಹಳೆಯ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಅಗಲಿಕೆಯ ಅಶ್ರುಧಾರೆ ಸುರಿಸಿದರು.
‘ಕುಡಕಿ ಶಿಕ್ಷಕರು’ ಎಂದೇ ಖ್ಯಾತಿ ಹೊಂದಿದ್ದ ಶಿವಪುತ್ರಪ್ಪ ಕುಡಕಿ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ ಎಂಬ ವಿಷಯವೇ ಯಾರಿಗೂ ಅರಗಿಸಿಕೊಳ್ಳದ ವಿಷಯವಾಗಿತ್ತು. ಅಲ್ಲದೇ, ಗ್ರಾಮಸ್ಥರು ಯಾರು ಹೊಲಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಹೋಗಬಾರದು ಕಾರ್ಯಕ್ರಮಕ್ಕೆ ಬರಬೇಕು ಎಂದು ಡಂಗೂರ ಸಾರಿದ್ದರಲ್ಲದೇ, ಅವರನ್ನು ಶ್ಲಾಘಿಸಿ, ಕಣ್ಣೀರು ಸುರಿಸಿ, ಅವರಿಂದ ಪಡೆದ ಸಹಾಯವನ್ನು ನೆನಪಿಸಿಕೊಂಡು ಗದ್ಗದಿತರಾಗಿದ್ದು ಕುಡಕಿ ಶಿಕ್ಷಕರ ಸೇವೆಗೆ ಸಾರ್ಥಕ್ಯ ತಂದಿತು.
ಕುಡಕಿ ಶಿಕ್ಷಕರು ಗ್ರಾಮದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಮಕ್ಕಳಿಗೂ ಶಿಕ್ಷಣ ನೀಡಿ ಅವರ ಭವಿಷ್ಯದ ಆಶಾಕಿರಣವಾಗಿದ್ದರು. ಜೊತೆಗೆ ಬೆಳ್ಳಿಕಿಂಡಿ ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿಯು ಕೂಡಾ ಅವರ ಸೇವೆ ಅಪಾರವಾಗಿತ್ತು. ತಾವು ಸೇವೆ ಸಲ್ಲಿಸಿದ ಶಾಲೆಯ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 50 ಸಾವಿರ ರೂ. ಶಾಲೆಗೆ ದೇಣಿಗೆಯನ್ನೂ ನೀಡಿದರು.
ತಮ್ಮ ನಿವೃತ್ತ ಜೀವನದಲ್ಲೂ ಸಹ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿದ್ದು ಗ್ರಾಮಸ್ಥರ ಗಮನ ಸೆಳೆಯಿತು. ಮುಖ್ಯ ಶಿಕ್ಷಕ ಪಿ.ಎಲ್. ಪೂಜಾರ, ಸಹ ಶಿಕ್ಷಕ ಅಪ್ಪಾಸಿ ಇಟಗಿ, ಮಂಜುನಾಥ ನೇಮದಿ, ಮಂಜುನಾಥ ಮುದ್ನೂರ, ನಿವೃತ್ತ ಶಿಕ್ಷಕ ಪಿ.ಎನ್. ಹಿರೇನಿಂಗಪ್ಪನವರ, ಎಸ್‌ಡಿಎಂಸಿ ಅಧ್ಯಕ್ಷ ತುಳಸಪ್ಪ ಮೇಟಿ, ಉಪಾಧ್ಯಕ್ಷೆ ಶಿವಮ್ಮ ಅಡಪಟ್ಟಿ, ಮೈಲಾರಲಿಂಗ ಕಿಲಬನೂರ, ಕೃಷ್ಣಾ ಕಟ್ಟೆ ಇದ್ದರು.