ದೊಡ್ಡಬಳ್ಳಾಪುರದ ಚಿಕ್ಕಮಂಕಳಾದ ಬಳಿ ಕಸದ ಲಾರಿಗಳನ್ನು ಸ್ಥಳಿಯ ಗ್ರಾಮಸ್ಥರು ಪರಿಶೀಲಿಸುತ್ತಿರುವುದು.
ದೊಡ್ಡಬಳ್ಳಾಪುರ : ಎಂಎಸ್ಜಿಪಿ ಘಟಕಕ್ಕೆ ಹೆಚ್ಚುವರಿ ಕಸದ ಲಾರಿಗಳು ಬುಧವಾರ ಬರದಂತೆ ಹದ್ದಿನಕಣ್ಣು ಇಟ್ಟಿದ್ದರು. ಬೆಂಗಳೂರಿನ ಕಸವನ್ನು ವಿಲೇವಾರಿ ಮಾಡಲು ಮಹದೇವಪುರ ಮತ್ತು ಮೀಟಗಾನಹಳ್ಳಿಯ ವಿಲೇವಾರಿ ಘಟಕಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಕಸದ ಲಾರಿಗಳು ದೊಡ್ಡಬಳ್ಳಾಪುರದ ಎಂಎಸ್ಜಿಪಿ ಘಟಕದತ್ತ ಮುಖಮಾಡಿದ್ದವು. ಆದರೆ, ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚುವರಿಯಾಗಿ ಬಂದ ಲಾರಿಗಳನ್ನು ತಡೆದಿದ್ದಾರೆ. ಗ್ರಾಮಸ್ಥರಿಗೆ ಶಾಸಕ ಧೀರಜ್ ಮುನಿರಾಜು ಸಾಥ್ ನೀಡಿ ಕಸದ ಲಾರಿಗಳನ್ನು ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿದ್ದರು. ಬುಧವಾರವೂ ನಿಗದಿತ 70 ಲಾರಿಗಳನ್ನು ಬಿಟ್ಟು ಹೆಚ್ಚುವರಿ ಲಾರಿಗಳು ಬರುವ ಆತಂಕದಿಂದ ಇಲ್ಲಿನ ಗ್ರಾಮಸ್ಥರು ಇಡೀ ದಿನ ಎಂಎಸ್ಜಿಪಿ ಘಟಕದ ಮೇಲೆ ಹದ್ದಿನ ಕಣ್ಣಿಟಿದ್ದರು.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ ಪರಿಶೀಲನೆ: ಎಂಎಸ್ಜಿಪಿ ಘಟಕದ ಬಳಿಯ ಚಿಕ್ಕಮಂಕಳಾಲದ ಬಳಿ ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಯಿತು. ಎಂಎಸ್ಜಿಪಿ ಘಟಕದ ಲಾರಿಗಳ ದಾಖಲಾತಿ ಪರಿಶೀಲಿಸಿ ಒಳಗೆ ಬಿಡಲಾಯಿತು. ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ದೊಡ್ಡಬೆಳವಂಗಲ ಹೋಬಳಿ ಇನ್ಸ್ಪೆಕ್ಟರ್ ಕಲ್ಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಎಂಎಸ್ಜಿಪಿ ಘಟಕದ ಎಂ.ಡಿ. ಪ್ರವಿಣ್ ಗೌಡಗೆ ಕರೆಮಾಡಿದ ಡಿವೈಎಸ್ಪಿ ಲಾರಿಗಳ ಸಂಖ್ಯೆ, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಹೆಚ್ಚುವರಿ ಲಾರಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಎಎಸ್ಐ ನೇತೃತ್ವದಲ್ಲಿ ಬಿಗಿ ಭದ್ರತೆಗೆ ಸೂಚಿಸಿದರು.
ಡಿಸಿಎಂಗೆ ಧೀರಜ್ ತಿರುಗೇಟು : ಅನುದಾನ ನೀಡಿಲ್ಲವೆಂದು ಹೇಳಿ ಕಸದ ಲಾರಿಗಳಿಗೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿರುವ ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಶಾಸಕ ಧೀರಜ್ ಮುನಿರಾಜು ಸವಾಲು ಹಾಕಿದ್ದಾರೆ. ದೊಡ್ಡಬಳ್ಳಾಪುರಕ್ಕೆ ಕಸದ ಘಟಕದ ಪರಿಣಾಮವಾಗಿ 10 ಕೋಟಿ ರೂಪಾಯಿ ಕಸದ ಅನುದಾನ ಮೀಸಲಿರಿಸಿದ್ದಾರೆ. ಆದರೆ, ನಾನು ಡಿ. ಕೆ. ಶಿವಕುಮಾರ್ ಹೇಳಿದಂತೆ ಅನುದಾನಕ್ಕೆ ಬೇಡಿಕೆ ಇಟ್ಟಿಲ್ಲ. ಕೇಳಿಲ್ಲ. ಮುಂದೆಯೂ ಕೇಳಲ್ಲ. ಇದರ ಬಗ್ಗೆ ನನ್ನ ಮನವಿ ಪತ್ರವಾಗಲಿ, ದೂರವಾಣಿ ಕರೆ ದಾಖಲೆಗಳಾಗಲಿ ಇದ್ದರೆ ಬಿಡುಗಡೆ ಮಾಡಲಿ. ಒಟ್ಟಾರೆ ನನಗೆ ಆ ಅನುದಾನವೂ ಬೇಡ. ಕಸದ ಘಟಕವೂ ಬೇಡ ಎಂದಿದ್ದಾರೆ.
ಕಸದ ಘಟಕದಿಂದಾಗಿ ಈ ಭಾಗದ ಎರಡು ಗ್ರಾಪಂ ಪ್ರದೇಶದಲ್ಲಿ ನೆಲ, ಜಲ, ಗಾಳಿ ಸಂಪೂರ್ಣ ಕಲುಷಿತಗೊಂಡಿದೆ. ಈ ಭಾಗದವರು ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಜಾನುವಾರು ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆಲ್ಲ ಯಾರು ಹೊಣೆ? ಜನರು ಘಟಕವನ್ನು ಸ್ಥಗಿತಗೊಳಿಸಲು ಅಧಿಕಾರ ನೀಡಿದ್ದಾರೆ. ಜನರ ಪರವಾಗಿ ನಿಲ್ಲುತ್ತೇನೆ. ಕಸವನ್ನು ಸುರಿಯುವುದಿದ್ದರೆ ಆರ್.ಆಶೋಕ್, ಬಿವೈ.ವಿಜಯೇಂದ್ರ, ಬಿಜೆಪಿ ಕಚೇರಿ ಮುಂದೆ, ಏಕೆ ನನ್ನ ಮನೆ ಮುಂದೆಯೇ ಸುರಿಯಲಿ. ಯಾವುದೇ ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಹೋರಾಟಕ್ಕೆ ನಾನು ಸಿದ್ಧ.