ಕರಟ್ಟು ಕೋಯಿಲ್ ಗ್ರಾಮದಲ್ಲಿ ಶಾಲಾ ಮಕ್ಕಳ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಹುಚ್ಚು ನಾಯಿಯನ್ನು ಗ್ರಾಮಸ್ಥರೇ ಸಾಯಿಸಿರುವುದು. 
ರಾಜ್ಯ

ಹುಚ್ಚುನಾಯಿ ಹಿಡಿದು ಸಾಯಿಸಿದ ಗ್ರಾಮಸ್ಥರು!

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಟ್ಟು ಕೋಯಿಲ್ ಗ್ರಾಮದಲ್ಲಿ ಶಾಲಾ ಮಕ್ಕಳ ಮೇಲೆ ದಾಳಿ ಯತ್ನಿಸಿದ್ದ ಹುಚ್ಚುನಾಯಿಯನ್ನು ಗ್ರಾಮಸ್ಥರೇ ಹಿಡಿದು ಸಾಯಿಸಿದ್ದಾರೆ.
ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವಾರದ ಹಿಂದೆ ಹುಚ್ಚುನಾಯಿಯೊಂದು ಮಕ್ಕಳು ಸೇರಿದಂತೆ 13ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿತ್ತು. ಅಂತೆಯೇ, ಕರಟ್ಟು ಕೋಯಿಲ್ ಗ್ರಾಮದಲ್ಲಿ ಶಾಲೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ ನಡೆಸಲು ಮುಂದಾಯಿತು. ಈ ವೇಳೆ ಮಕ್ಕಳು ಭಯಭೀತರಾಗಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರೇ ನಾಯಿಯನ್ನು ಹಿಡಿದು ಸಾಯಿಸಿ, ಮುಂದಾಗಬಹುದಾದ ಅನಾಹುತ ತಪ್ಪಿಸಿದ್ದಾರೆ.
ಗ್ರಾಮದಲ್ಲಿ ಇನ್ನು ಅನೇಕ ಹುಚ್ಚು ನಾಯಿಗಳಿದ್ದು, ಆತಂಕ ಮನೆ ಮಾಡಿದೆ. ಓಡಾಡಲು ಭಯ ಪಡುವಂತಾಗಿದೆ. ಸಂಬಂಧಪಟ್ಟವರು ಅನಾಹುತ ಸಂಭವಿಸುವ ಮುನ್ನ ಹುಚ್ಚು ನಾಯಿಗಳನ್ನು ಸೆರೆ ಹಿಡಿಯುವಂತೆ ಹಾಗೂ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.