Village under siege for drinking water 
ರಾಜ್ಯ

ಕುಡಿಯುವ ನೀರಿಗಾಗಿ ಗ್ರಾಪಂಗೆ ಮುತ್ತಿಗೆ

ತುಮಕೂರು ಡೆಸ್ಕ್
ಹುಲಿಯೂರುದುರ್ಗ: ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಗ್ರಾಪಂ ವ್ಯಾಪ್ತಿಯ ಮಠದದೊಡ್ಡಿ, ರಾಜಪ್ಪನದೊಡ್ಡಿ, ಬಿಸೇಗೌಡನದೊಡ್ಡಿ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಸೋಮವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು. ಆದರೆ ಕಳೆದ ಮೂರು ದಿನಗಳಿಂದ ಟ್ಯಾಂಕರ್​ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ ಎಂದು ಮೂರು ಗ್ರಾಮಗಳ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್​ ಕುಮಾರ್​ ಮತ್ತು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಪ್ರತಿಭಟನೆ ಸ್ಥಗಿತಗೊಳಿಸಿದರು.
ಬಳಿಕ ನೀರಿನ ಸಮಸ್ಯೆ ಇದ್ದ ಮಠದದೊಡ್ಡಿ, ರಾಜಪ್ಪನದೊಡ್ಡಿ, ಬಿಸೇಗೌಡನದೊಡ್ಡಿ ಗ್ರಾಮಗಳಿಗೆ ಭೇಟಿ ನೀಡಿದ ಕಾರ್ಯನಿರ್ವಹಣ ಅಧಿಕಾರಿಗಳು ಗ್ರಾಮದ ಮಹಿಳೆಯರ ಸಮಸ್ಯೆ ಆಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೀರು ಕೊಡುವುದಾಗಿ ಭರವಸೆ ನೀಡಿದರು.
ಗ್ರಾಮದ ಮಹಿಳೆಯರು ಮಾತನಾಡಿ, ಟ್ಯಾಂಕರ್​ ನೀರು ಪೂರೈಕೆ ಮಾಡುವವರು ಒಬ್ಬೊಬ್ಬರಿಗೆ ಒಂದೊಂದು ರೀತಿ ನೀರು ಬಿಡುತ್ತಿದ್ದಾರೆ. ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲ. ದನ ಕರುಗಳಿಗೂ ಕುಡಿಯಲು ನೀರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯನಿರ್ವಹಣಾಧಿಕಾರಿ ವಸಂತ್​ ಕುಮಾರ್​ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಮಸ್ಥರಾದ ಭಾಗ್ಯಮ್ಮ, ತಿಮ್ಮಯ್ಯ, ರವಿ, ರಮೇಶ್​, ಜ್ಯೋತಿ, ತಾಯಮ್ಮ, ರತ್ನಮ್ಮ, ಭಾಗ್ಯಲಕ್ಷಿ$್ಮ, ಕವಿತಾ, ಗೌರಮ್ಮ, ನೇತ್ರಾವತಿ, ಗಾಯತ್ರಮ್ಮ, ಸರೋಜಮ್ಮ ಇದ್ದರು.