ಶೌಚಗೃಹಕ್ಕೆ ಆಗ್ರಹಿಸಿ ಶಹಾಪುರ ತಾಲೂಕಿನ ಮೂಡಬೂಳದಲ್ಲಿ ಗುರುವಾರ ನೂರಾರು ಮಹಿಳೆಯರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿ ಮನವಿಪತ್ರ ಸಲ್ಲಿಸಿದರು. ಗೌರಮ್ಮ ಲಕ್ಷ್ಮಣ, ಸಾವಿತ್ರಮ್ಮ, ಗುರು ಹೂವಿನಳ್ಳಿ, ಮೌನೇಶ ಸಂಗಾವಿ, ಬಾಲು ಗುಡಿಮನಿ, ಮಾಹಾಂತೇಶ ಹಳಿಸಗರ ಇತರರಿದ್ದರು. 
ರಾಜ್ಯ

ಶೌಚಗೃಹಕ್ಕೆ ಆಗ್ರಹಿಸಿ ಗ್ರಾಪಂಗೆ ಬೀಗ

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರಿಂದ ಮೂಡಬೂಳದಲ್ಲಿ ಪ್ರತಿಭಟನೆ
  • ನಿರ್ಲಕ್ಷ್ಯ ವಹಿಸಿದ ಪಿಡಿಒ
ಶಹಾಪುರ: ತಾಲೂಕಿನ ಮೂಡಬೂಳ ಗ್ರಾಮದ ಮಹಿಳೆಯರಿಗೆ ಶೌಚಗೃಹಕ್ಕೆ ಆಗ್ರಹಿಸಿ ಗುರುವಾರ ನೂರಾರು ಮಹಿಳೆಯರು ಅಲ್ಲಿನ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಗ್ರಾಮದ ವಾರ್ಡ್​ 2ರಲ್ಲಿ ಬರುವ ಮಾಹಾಂತೇಶ್ವರ ನಗರದಲ್ಲಿ ಸುಮಾರು ನೂರಾರು ಮನೆಗಳಿದ್ದು, ಶೌಚಗೃಹ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿನ ಬಯಲು ಶೌಚಕ್ಕೆ ಹೋಗುವ ರಸ್ತೆ ಒತ್ತುವರಿ ಮಾಡಿಕೊಂಡು ತೆಗ್ಗುಗಳನ್ನು ಮಾಡಿ ರಸ್ತೆಯನ್ನೆ ಬಂದ್​ ಮಾಡಿದ್ದನ್ನು ಮಹಿಳೆಯರು ಖಂಡಿಸಿ ಗ್ರಾಪಂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.
ಈ ಹಿಂದೆ ಹಳೆಯ ಜಾಗದಲ್ಲೆ ಬಯಲು ಶೌಚ ಮಾಡಿಕೊಂಡಿದ್ದ ಗ್ರಾಮಸ್ಥರು ಈಗ ಅಕ್ರಮಣದಾರರ ಹಾವಳಿಯಿಂದ ತಿಪ್ಪೆಗುಂಡಿಗಳು ಹೆಚ್ಚಾಗಿ ಆಳವಾದ ತೆಗ್ಗು ಬಿದ್ದು ಮರಣಮೃದಂಗದಂತಾಗಿದೆ ಎಂದು ಗೌರಮ್ಮ ಲಕ್ಷ್ಮಣ ಮತ್ತು ಸಾವಿತ್ರಮ್ಮ ಆರೋಪಿಸಿದರು. ಈ ಹಿಂದೇ ಭೀ.ಗುಡಿ ಪೊಲೀಸ್​ ಠಾಣೆಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು. ಇಲ್ಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಈ ವಿಷಯ ತಂದರೂ ಗಮನ ಹರಿಸುತ್ತಿಲ್ಲ, ಹೀಗಾಗಿ ಅನಿವಾರ್ಯವಾಗಿ ಕಚೇರಿ ಕೀಲಿ ಹಾಕಿ ಬೇಡಿಕೆಗೆ ಆಗ್ರಹಿಸಲಾಗುತ್ತಿದೆ ಎಂದರು.
ಕೂಡಲೇ ಶೌಚಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಹಾಗೊಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಗುರು ಹೂವಿನಳ್ಳಿ, ಮೌನೇಶ ಸಂಗಾವಿ, ಬಾಲು ಗುಡಿಮನಿ, ಮಾಹಾಂತೇಶ ಹಳಿಸಗರ ಇತರರಿದ್ದರು. ಗ್ರಾಪಂ ಅಭಿವೃದ್ದಿ ಅಧಿಕಾರಿಗೆ ಮನವಿ ಸಲ್ಲಿಸಿದರು.