ಹುನಗುಂದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಪ್ರದೀಪ ಕುಮಾರ ಹಿರೇಮಠ ಅವರಿಗೆ ಗ್ರಾಮ ಸಹಾಯಕರು ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಪರಶುರಾಮ ಚಿಕ್ಕನಾಳ, ಹನಮಂತ ವಾಲಿಕಾರ, ರೆಹಮಾನ್ ಬಂಗಾರಗುಂಡ, ಮಹಾಂತೇಶ ಹುನಗುಂದ, ಬಸವರಾಜ ಹಂಡಿ ಇತರರಿದ್ದರು. 
ರಾಜ್ಯ

ಸರ್ಕಾರದ ವಿರುದ್ಧ ಗ್ರಾಮ ಸಹಾಯಕರ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಮೂಲಕ ಮನವಿ ಸಲ್ಲಿಕೆ
  • ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

ಹುನಗುಂದ: ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ತಾಲೂಕು ಘಟಕದಿಂದ ಶುಕ್ರವಾರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಪರಶುರಾಮ ಚಿಕ್ಕನಾಳ ಮಾತನಾಡಿ, ಪ್ರಸ್ತುತ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೊರೆಯುತ್ತಿರುವ ಅಲ್ಪ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ.
ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ವಯೋವೃದ್ಧ ತಂದೆ ತಾಯಿಗಳ ಪೋಷಣೆ, ಆರೋಗ್ಯ ಹಾಗೂ ಇತರೆ ಅಗತ್ಯ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಹಂಬಲ ಇದ್ದರೂ ಸಹ ಕಡಿಮೆ ಆದಾಯದಿಂದಾಗಿ ಶಿಕ್ಷಣದ ವೆಚ್ಚ ಭರಿಸುವುದು ಕಷ್ಟವಾಗಿದೆ. ಆದ್ದರಿಂದ ಸಂಬಳ ಹೆಚ್ಚಳ, ಸೂಕ್ತ ವೇತನ ಪರಿಷ್ಕರಣೆ, ಮಕ್ಕಳ ಶಿಕ್ಷಣಕ್ಕೆ ನೆರವು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಸಹಾಯಕ ಸಂಗಪ್ಪ ವಾಲಿಕಾರ ಮಾತನಾಡಿ, 1978 ರಿಂದ ರಾಜ್ಯದಲ್ಲಿ 10,450 ಜನ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು ಗ್ರಾಮ ಸಹಾಯಕರನ್ನು ಗ್ರುಪ್ ‘ಡಿ’ ನೌಕರರೆಂದು ಪರಿಗಣಿಸುವುದು ಮತ್ತು ಕನಿಷ್ಠ ವೇತನ ನಿಗದಿಗೊಳಿಸಬೇಕು.
ನಮ್ಮ ಸಂಘದ ಕೇಂದ್ರ ಸಮಿತಿಯಿಂದ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ಸರ್ಕಾರ ಪರಿಗಣಿಸಿ 2025 ಅ. 25ರಂದು ಸಚಿವರ ಸಂಪುಟದಲ್ಲಿ ರಾಮಗ್ರಾಮ ಸಹಾಯಕರಿಗೆ ಮಾಸಿಕ 27 ಸಾವಿರ ರೂ. ವೇತನ ಅಥವಾ ಡಿ ದರ್ಜೆ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಅದು ಈವರೆಗೂ ಸರ್ಕಾರದಿಂದ ಆದೇಶ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸೇವೆಯಿಂದ ನಿವೃತ್ತರಾದ ಮತ್ತು ಸೇವೆಯಲ್ಲಿ ಮರಣ ಹೊಂದಿದ ಗ್ರಾಮ ಸಹಾಯಕರಿಗೆ 5 ಲಕ್ಷ ರೂ. ಇಡುಗಂಟು ನೀಡುವ ಭರವಸೆಯೂ ಈಡೇರಿಲ್ಲ. ಸರ್ಕಾರ ಸಂಪುಟದಲ್ಲಿ ಚರ್ಚೆಮಾಡಿದ ಎಲ್ಲವನ್ನು ತಕ್ಷಣವೇ ಜಾರಿಮಾಡಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಸಹಾಯಕರಾದ ಹನಮಂತ ವಾಲಿಕಾರ, ರೆಹಮಾನ್ ಬಂಗಾರಗುಂಡ, ಮಹಾಂತೇಶ ಹುನಗುಂದ, ಬಸವರಾಜ ಹಂಡಿ, ಸಂಗಪ್ಪ ಕಳ್ಳಿಗುಡ್ಡ, ಸಂಗಪ್ಪ ಆಯಿಗೇರ, ಸಂಗಪ್ಪ ಹವಾಲ್ದಾರ, ಮುತ್ತಪ್ಪ ಬೆಣ್ಣಿ, ತಿಮ್ಮಣ್ಣ ವಾಲಿಕಾರ, ಅಶೋಕ ಮಡಿವಾಳರ, ಸಂಗನಬಸಪ್ಪ ಗೋನಾಳ, ಅಮೀನಸಾಬ ವಾಲಿಕಾರ , ಶೇಖಪ್ಪ ವಾಲಿಕಾರ ಇತರರಿದ್ದರು.